ವಾಡಿ: ದುರಾಡಳಿತ, ಅಕ್ರಮಗಳನ್ನು ಮುಚ್ಚಿಡಲು ಭಾರತೀಯ ಜನತಾ ಪಕ್ಷದ ಸರ್ಕಾರ ಕಾಶ್ಮೀರ ಫೈಲ್ಸ್, ಹಿಜಾಬ್, ಅಜಾನ್, ಭಜನೆಯಂತ ಹುಸಿ ಧರ್ಮಾಭಿಮಾನ ಮುಂದಿಟ್ಟು ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದು, ದ್ವೇಷ ರಾಜಕಾರಣಕ್ಕೆ ಕೈಹಾಕಿ ರಾಜ್ಯದಲ್ಲಿ ಅಶಾಂತಿ ವಾತಾವರಣ ಮೂಡಿಸಿದೆ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ದೂರಿದರು.
ಹಳಕರ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಿಂದ ಆರ್.ಬಿ.ಚವ್ಹಾಣ ತಾಂಡಾ ವರೆಗೆ ನಿರ್ಮಿಸಲಾಗುತ್ತಿರುವ 178.91ಲಕ್ಷ ರೂ. ಅನುದಾನದ ರಸ್ತೆ ಅಭಿವೃದ್ಧಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಪ್ರತಿ ಕಾಮಗಾರಿಗೂ ಗುತ್ತಿಗೆದಾರರು ಸಚಿವರಿಗೆ ಶೇ.40 ಕಮಿಷನ್ ಕೊಡಬೇಕಾಗಿದೆ. ಇದೇ ಕಾರಣಕ್ಕೆ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಮಾಡಿಕೊಂಡರು. ಕಮಿಷನ್ ದಂಧೆಯಲ್ಲಿ ಕೆ.ಎಸ್. ಈಶ್ವರಪ್ಪ ಹೆಸರು ಬಯಲಿಗೆ ಬಿದ್ದಿದೆ. ನಾನು ತಪ್ಪೇ ಮಾಡಿಲ್ಲ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎನ್ನುತ್ತಿದ್ದ ಈಶ್ವರಪ್ಪ, ರಾಜೀನಾಮೆ ಏಕೆ ಕೊಟ್ಟರು ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರ ಅಧಿ ಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ಪ್ರಕಟಿಸಿದ ಯಾವೊಂದೂ ಯೋಜನೆ ಜಾರಿಗೆ ತಂದಿಲ್ಲ. ನಿರುದ್ಯೋಗ ಹೋಗಲಾಡಿಸಲು ಯಾವುದೇ ಕ್ರಮಕೈಗೊಂಡಿಲ್ಲ. ಬದಲಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ನೇಮಕಾತಿಗಳಿಗೆ ತಡೆಯೊಡ್ಡಿದೆ. ಆದರೆ ಕಾಂಗ್ರೆಸ್ ಆಡಳಿತದಲ್ಲಿ 30,000 ಹುದ್ದೆ ತುಂಬಲಾಗಿತ್ತು. ನಾನು ಸಮಾಜಕಲ್ಯಾಣ ಸಚಿವನಾಗಿದ್ದಾಗ ಸೊರೆಗೊಂಡನ ಕೊಪ್ಪ ಸೇವಾಲಾಲ ಆಶ್ರಮಕ್ಕೆ 150 ಕೋಟಿ ರೂ. ಕೊಟ್ಟಿದ್ದೇನೆ. ತಾಂಡಾ ಅಭಿವೃದ್ಧಿ ನಿಗಮಗಳಿಂದ 4500 ಟ್ಯಾಕ್ಸಿಗಳನ್ನು ಕೊಟ್ಟಿದ್ದೇನೆ. ತಾಂಡಾಗಳ ಅಭಿವೃದ್ಧಿಗೆ 100 ಕೋಟಿ ರೂ. ಬಿಡುಗಡೆ ಮಾಡಿದ್ದೇನೆ. ಬಿಜೆಪಿ ಸರ್ಕಾರ ಕೇವಲ ಎರಡು ಟ್ಯಾಕ್ಸಿ ಕೊಟ್ಟಿದೆ ಎಂದರು.
ಅಡುಗೆ ಅನಿಲ, ಪೆಟ್ರೋಲ್-ಡೀಸೆಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಪ್ರಶ್ನಿಸಿದರೆ ಬಿಜೆಪಿ ಸರ್ಕಾರ “ಕಾಶ್ಮೀರಿ ಫೈಲ್ಸ್ ನೋಡಿದ್ದೀರಾ’ ಎನ್ನುತ್ತದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಹಿರಿಯ ಮುಖಂಡರಾದ ಶಿವಾನಂದ ಪಾಟೀಲ, ಭೀಮಣ್ಣ ಸಾಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಮಹೆಮೂದ್ ಸಾಹೇಬ, ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸೈದಾಪುರ, ಮುಖಂಡರಾದ ಜಗದೀಶ ಸಿಂಧೆ, ರಮೇಶ ಮರಗೋಳ, ಅಬ್ದುಲ್ ಅಜೀಜ್‌ಸೇಠ, ಸಿದ್ಧು ಪಾಟೀಲ, ರಾಘವೇಂದ್ರ ಅಲ್ಲಿಪುರ, ಗೋವಿಂದ ಜಾಧವ, ಸಿದ್ಧು ಮುಗುಟಿ, ಸಾಯಬಣ್ಣ ಹೊಸಮನಿ ಪಾಲ್ಗೊಂಡಿದ್ದರು.