Advertisement

ಧರ್ಮಗಳು ಸಮಾಜ ಕಟ್ಟುವ ಕೆಲಸ ಮಾಡಲಿ: ಸಿದ್ದಲಿಂಗಶ್ರೀ

01:21 PM Jan 02, 2018 | |

ವಿಜಯಪುರ: ಸಾತ್ವಿಕರು, ತಪಸ್ವಿಗಳು ಹಾಗೂ ದುರ್ಗಾದೇವಿ ಆರಾಧಕರಾದ ಸಂತ ಸೇವಾಲಾಲರ ಸಂದೇಶಗಳು ಲಿಂಗಾಯತ ಧರ್ಮ ಸ್ಥಾಪಕರಾದ ಬಸವಾದಿ ಶರಣರ ತತ್ವಾದರ್ಶಗಳಿಗೆ ಸಮಾನವಾಗಿವೆ. ಧರ್ಮ ಹಾಗೂ ಜಾತಿಯನ್ನು ಮೀರಿದ ದಾರ್ಶನಿಕರು, ಶರಣ ಸಂತರು ನೀಡಿದ ದಿವ್ಯ ಸಂದೇಶಗಳನ್ನು ಸಮಾಜ ಸುಧಾರಣೆಯಲ್ಲಿ ಬಳಸಿಕೊಂಡರೆ ಬದುಕು ಸುಂದರವಾಗುತ್ತದೆ ಎಂದು ಲಿಂಗಸ್ಗೂರಿನ ಅನುಭವ ಮಂಟಪದ ಸಿದ್ದಲಿಂಗ ಶ್ರೀಗಳು ಹೇಳಿದರು.

Advertisement

ನಗರದಲ್ಲಿ ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಬಂಜಾರಾ ಸಮಾಜದ ಸಂತ ಸೇವಾಲಾಲರ ಬದುಕು-ಸಾಧನೆ ಕುರಿತ ದತ್ತಿ ಕಾರ್ಯಕ್ರಮದಲ್ಲಿ ಇಂದುಮತಿ ಲಮಾಣಿ ಅವರ ನವರತ್ನ ಕಥಾ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಂತರು, ಶರಣದ ಸಂದೇಶ ಸಾರುವ ಇಂಥ ಕಾರ್ಯಕ್ರಮಗಳಿಂದ ಧರ್ಮ-ಧರ್ಮಗಳ ಮಧ್ಯದ ಗೋಡೆಗಳು ಉರುಳಿ ಬೀಳುತ್ತವೆ. ಜೊತೆಗೆ ಜಗತ್ತಿನಲ್ಲಿ ಸೌಹಾರ್ದತೆ ಬೆಳೆದು ಸುಖ ಶಾಂತಿ ನೆಲೆಸುತ್ತವೆ. ಹೀಗಾಗಿ ಧರ್ಮಗಳು ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕೃತಿ ಪರಿಚಯಿಸಿದ ಪ್ರೊ| ಶರಣಗೌಡ ಪಾಟೀಲ, ಸದರಿ ಕೃತಿಯಲ್ಲಿರುವ 9 ಕಥೆಗಳು ವೈವಿಧ್ಯಮಯ ಕಥಾವಸ್ತು ಹೊಂದಿದ್ದು ಸುಂದರ ನಿರೂಪಣೆಯಿಂದ ಕೂಡಿವೆ. ಪ್ರಸ್ತುತ ಸಮಾಜದ ಸಮಸ್ಯೆಗಳನ್ನು ಕುರಿತು ಕಥೆಗಳು ಮಾರ್ಮಿಕವಾಗಿ ಮೂಡಿಬಂದಿವೆ ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ಬಂಜಾರಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಿ.ಎಲ್‌. ಚವ್ಹಾಣ ಮಾತನಾಡಿ, ಜಗತ್ತಿನಲ್ಲಿ ಎಲ್ಲ ಧರ್ಮಗಳನ್ನು ಮೀರಿದ ಧರ್ಮವೇ ಮಾನವ ಧರ್ಮ. ಮಾನವ ಧರ್ಮಕ್ಕೆ ಸಮನಾದ ಧರ್ಮ ಮತ್ತೂಂದಿಲ್ಲ. ಮಾನವ ಧರ್ಮ ಪಾಲನೆಯಿಂದ ಜೀವನ ಪಾವನವಾಗುತ್ತದೆ ಎಂದು ಹೇಳಿದರು. 

Advertisement

ಸಾನ್ನಿಧ್ಯ ವಹಿಸಿದ್ದ ಕೆಸರಟ್ಟಿಯ ಶಂಕರಲಿಂಗ ಗುರುಪೀಠದ ಬಾಲಯೋಗಿ ಸೋಮಲಿಂಗ ಶ್ರೀಗಳು ಮಾತನಾಡಿ, ಜಗತ್ತಿನ
ದಾರ್ಶನಿಕರ ಸಾಲಿನಲ್ಲಿ ಸಂತ ಸೇವಾಲಾಲರ ಹೆಸರು ಸೇರಿದ್ದು ಬಂಜಾರಾ ಸಮಾಜದ ಹಿರಿಮೆ ಹೆಚ್ಚಿಸಿದೆ. ಸಂತ ಸೇವಾಲಾಲರು ಸದಾ ನಮ್ಮೊಡನೆ ಇರುತ್ತಾರೆ. ಆದ್ದರಿಂದ ನಾವೆಲ್ಲ ತಪ್ಪು ಮಾಡದೆ ಸಕಲ ಜೀವಿಗಳನ್ನು ಸಮಾನವಾಗಿ ಕಾಣಬೇಕೆಂದು ಕಿವಿಮಾತು ಹೇಳಿದರು.

ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ ಪ್ರಾಸ್ತಾವಿಕ ಮಾತನಾಡಿದರು. ಸಂತ ಸೇವಾಲಾಲರ ಬದುಕು-ಸಾಧನೆ ಕುರಿತು ಬಸವನಬಾಗೇವಾಡಿ ಪುರಸಭೆ ಸದಸ್ಯ ನೀಲು ನಾಯಕ ಉಪನ್ಯಾಸ ನೀಡಿದರು. ಸಭೆಯಲ್ಲಿ ಬಿ.ಎಚ್‌. ಬಾದರಬಂಡಿ, ವಿ.ಸಿ. ನಾಗಠಾಣ, ಎಸ್‌.ಎಸ್‌. ಪಾಟೀಲ, ಬಸವರಾಜ ಲಮಾಣಿ, ಎಸ್‌. ವೈ. ಗದಗ, ಎಂ.ಎಂ.ಅಂಗಡಿ, ಶಂಕರ ಲಮಾಣಿ ಹಾಗೂ ಜಾಧವ ಇದ್ದರು.

ಇಂದುಮತಿ ಲಮಾಣಿ ಮಾತನಾಡಿದರು. ಶರಣ ಸಾಹಿತ್‌ ಪರಿಷತ್‌ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮ.ಗು. ಯಾದವಾಡ ಸ್ವಾಗತಿಸಿದರು. ಸಿದ್ದಲಿಂಗಪ್ಪ ಹದಿಮೂರ ನಿರೂಪಿಸಿದರು. ಸಾಹೇಬಗೌಡ ಬಸರಕೋಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next