ಚಿತ್ರದುರ್ಗ: ಅಧಿಕಾರಕ್ಕೆ ಬಂದ ನಂತರದ ಸರಣಿ ವೈಫಲ್ಯ ಮತ್ತು ಭ್ರಷ್ಟಾಚಾರ ಮುಚ್ಚಿ ಹಾಕಿ ಜನ ಸಾಮಾನ್ಯರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ಲಿಂಗಾಯತ ಪ್ರತ್ಯೇಕ ಧರ್ಮ, ರಾಜ್ಯ ಧ್ವಜ ವಿವಾದ ಹುಟ್ಟು ಹಾಕಿದ್ದಾರೆ. ವೀರಶೈವ-ಲಿಂಗಾಯತ ಪ್ರತ್ಯೇಕ ವಿವಾದ ಹುಟ್ಟುಹಾಕಿರುವುದರ ಹಿಂದೆ ದೊಡ್ಡ ಹುನ್ನಾರ ಅಡಗಿದೆ ಎಂದು ಮಾಜಿ ಸಂಸದ ಎಚ್. ವಿಶ್ವನಾಥ್ ಆರೋಪಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಗಳು ಧರ್ಮದ ಜತೆ ಆಟ ಆಡಬಾರದು. ಧರ್ಮದ ಹೆಸರು ಹೇಳಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು ಎಂದರು. ಈಗ ಕಾಂಗ್ರೆಸ್ ಸರ್ಕಾರದ ಸಂತೆ ನಡೀತಾ ಇದೆ. ಮುಖ್ಯಮಂತ್ರಿಗಳು, ಸಂಪುಟ ಸಚಿವರ ಮಕ್ಕಳ ಮರಳುದಂಧೆ ಬಗ್ಗೆ ಮಾತನಾಡಿದೆ. ಹೀಗಾಗಿ ನನ್ನನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಯಿತು. ಇಡೀ ಮೈಸೂರಿನಲ್ಲಿ ಸಿದ್ದರಾಮಯ್ಯ ಪುತ್ರ, ಹಾಗೂ ಮಹಾದೇವಪ್ಪ ಪುತ್ರ ಇಬ್ಬರೂ ಮರಳು ದಂಧೆ ಮಾಡುತ್ತಿದ್ದಾರೆ ಎಂದು ದೂರಿದರು.
ಕೇರಳಕ್ಕೆ ಮರಳು ಸಾಗಾಟ ನಡೆಯುತ್ತಿದೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ನೀವು ಜನರಿಗೆ ಯಾವ ವಚನ ನೀಡಿ ಅ ಧಿಕಾರಕ್ಕೆ ಬಂದಿದ್ದೀರಿ, ಆ ಭರವಸೆ ಈಡೇರಿದೆಯಾ ಎಂದು ಪ್ರಶ್ನಿಸಿದ್ದೆ. ಆದರೆ ಉತ್ತರಿಸಬೇಕಾದ ಸಿದ್ದರಾಮಯ್ಯ ಇವನು ನಮ್ಮ ಮಕ್ಕಳ ಬಗ್ಗೆ ಮಾತನಾಡುತೀ¤ರಲ್ಲ ಎಂದು ನನ್ನನ್ನೇ ಮರು ಪ್ರಶ್ನಿಸಿದ್ದರು. ಅವರಿಗೂ ನನಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ ಎಂದು ಹೇಳಿದರು. ನಾನು ಮರಳು, ಗಣಿ, ವರ್ಗಾವಣೆ ದಂಧೆ ಮಾಡುವವನಲ್ಲ. ನಾನು ಕ್ಲೀನ್ ಹಾಗೂ ಫ್ರಿ ಮನುಷ್ಯ. ಹೀಗಾಗಿ, ನಾನು ತಪ್ಪು ಕಂಡಲ್ಲಿ ಟೀಕಿಸುತ್ತೇನೆ. ಎಸ್.ಎಂ. ಕೃಷ್ಣ, ವೀರಪ್ಪ ಮೊಯ್ಲಿ ಅವರ ಬಗ್ಗೆಯೂ ಟೀಕೆ ಮಾಡಿದ್ದೆ. ಈಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಡೆಯನ್ನು ಟೀಕಿಸಿದ್ದೇನೆ. ಆದರೆ ಈ ಸರ್ಕಾರ, ಇಲ್ಲಿಯ ಸಚಿವರು ಹಾಗೂ ಸಿಎಂ ಸಿದ್ದರಾಮಯ್ಯನವರನ್ನು ಪ್ರಶ್ನಿಸುವಂತಿಲ್ಲ. ಯಾರಾದರೂ ಅವರನ್ನು ಪ್ರಶ್ನಿಸಿದರೆ ಸಹಿಸುವುದಿಲ್ಲ ಹೀಗಾಗಿಯೇ ಪಕ್ಷದಲ್ಲಿ ನಾನು ಏಕಾಂಗಿಯಾಗುವಂತೆ ಮಾಡಿದರು ಎಂದು ಆರೋಪಿಸಿದರು.
ರಾಜ್ಯದ ಸಂಪತ್ತು ಲೂಟಿ ಆಗುತ್ತಿದೆ. ಅದನ್ನು ತಡೆದು ರಾಜ್ಯದ ಬೊಕ್ಕಸ ತುಂಬಿಸುತ್ತೇನೆ. ಅಧಿಕಾರ ಕೊಡಿ ಎಂದು ಬೆಂಗಳೂರಿನಿಂದ ಬಳ್ಳಾರಿ ವರೆಗೆ 330 ಕಿಲೋ ಮೀಟರ್ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಗಣಿ ಧಣಿಗಳ ವಿರುದ್ಧ ನೀಡಿದ್ದ 800 ಪುಟದ ವರದಿಯನ್ನು ತೆಗೆದೂ
ನೋಡಲಿಲ್ಲ. ವರದಿ ನೀಡಿದ ಸಂತೋಷ್ ಹೆಗ್ಡೆ, ಯು.ವಿ.ಸಿಂಗ್, ಒತ್ತುವರಿ ಭೂಮಿ ಅಧ್ಯಯನ ಸಮಿತಿ ಅಧ್ಯಕ್ಷ ರಾಮಸ್ವಾಮಿ, ಎಸ್.ಆರ್.ಹಿರೇಮಠ ಅವರನ್ನು ಸಿಎಂ ಸಿದ್ದರಾಮಯ್ಯ ಮನೆಗೆ ಕರೆದುಕೊಂಡು ಹೋದರೆ ಸಿಎಂ ಗಣಿ ವರದಿ ಬಗ್ಗೆ ಚಕಾರವೆತ್ತಲಿಲ್ಲ ಎಂದರು.
ಯಡಿಯೂರಪ್ಪ ವೀರಶೈವ ಜಾತಿ ನಾಯಕ, ಎಚ್.ಡಿ. ಕುಮಾರಸ್ವಾಮಿ ಒಕ್ಕಲಿಗರ ನಾಯಕ, ಸಿದ್ದರಾಮಯ್ಯ ಕುರುಬರ ನಾಯಕ ಎಂದು ಬ್ರಾಡ್ ಮಾಡಬಾರದು. ಅವರು ಅದನ್ನು ಮೀರಿ ಬೆಳೆದವರು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಕಾಂಗ್ರೆಸ್ ಹುಸಿ ಭಾಗ್ಯಗಳ ಭ್ರಮೆಯಲ್ಲಿದೆ. ಆ ಭಾಗ್ಯ ಬರೆದು ಕೊಟ್ಟವನೇ ನಾನು. ಬಿಜೆಪಿ ಕೊಲೆಗಳ ತಪ್ಪು ಲೆಕ್ಕಗಳಲ್ಲಿ ಎಡವಿದೆ ಎಂದು ದೂರಿದರು.