ಬೆಂಗಳೂರು: 2ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಭಿನ್ನ ಕೋಮಿನ ಜೋಡಿಯ ಪ್ರೇಮ ಮತಾಂತರದ ವಿಚಾರದಲ್ಲಿ ಮುರಿದುಬಿದ್ದು, ಇದೀಗ ಠಾಣೆಯ ಮೆಟ್ಟಿಲೇರಿದ ಘಟನೆ ನಗರದಲ್ಲಿ ನಡೆದಿದೆ.
ಛತ್ತೀಸ್‌ಘಡದ ಹಿಂದೂ ಯುವತಿ ಸ್ವಾತಿ ಸಾಹು ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಕೇರಳ ಮೂಲದ ಅಲೆನ್‌ದಾಸ್ ಎಂಬ ಯುವಕ ಓಲಾ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು ,ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಮದುವೆಗೆ ಧರ್ಮ ಅಡ್ಡಿಯಾಗಿದೆ.
ಅಲೆನ್ ಪೋಷಕರು ಕ್ರೈಸ್ತ ಧರ್ಮಕ್ಕೆ ಸ್ವಾತಿ ಮತಾಂತರವಾದರೆ ಮಾತ್ರ ಮದುವೆ ಎಂದಿದ್ದಾರೆ. ಇದರಿಂದಾಗಿ ಅಲೆನ್ ಮತಾಂತರಕ್ಕಾಗಿ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಸ್ವಾತಿ ಮತಾಂತರಕ್ಕೆ ಒಪ್ಪದೇ ಪ್ರೀತಿಯನ್ನೇ ತೊರೆಯಲು ನಿರ್ಧರಿಸಿದ್ದಾಳೆ. ಆದರೂ ಅಲೆನ್ ಆಕೆಗೆ ಕಾಟ ಕೊಡುತ್ತಿದ್ದ ಎನ್ನಲಾಗಿದೆ.
ಅಲೆನ್ ಕಾಟದಿಂದ ಬೇಸತ್ತ ಸ್ವಾತಿ ಮನೆಯನ್ನೇ ಬದಲಾಯಿಸಿದ್ದು ಅರಿಕೆರೆ ಎಂಬಲ್ಲಿ ಹೊಸದಾಗಿ ಮನೆ ಮಡಿಕೊಂಡಿದ್ದಳು. ಅಲ್ಲಿಗೂ ಬಂದು ಕಿರುಕುಳ ನೀಡಿದ ಅಲೆನ್ ನೀನು ಮತಾಂತರವಾಗಿ ಮದುವೆಯಾಗು, ಇಲ್ಲದಿದ್ದರೆ ನಿನ್ನ ತಾಯಿ ಮತ್ತು ತಂಗಿಯ ಮೇಲೆ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಹೇಳಿಕೊಂಡಿದ್ದಾಳೆ.
ಹುಳಿಮಾವು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.