ಅರಸೀಕೆರೆ: ಮನುಷ್ಯ ಆಧುನಿಕತೆಯ ಯಾಂತ್ರಿಕ ಜೀವನಕ್ಕೆ ಮಾರುಹೋಗಿ ಆಧ್ಯಾತ್ಮಿಕ ಚಿಂತನೆ ಬಗ್ಗೆ ಹೆಚ್ಚಿನ ಆಸಕ್ತಿಯಿಲ್ಲದೇ ಸಮಾಜವನ್ನು ನಾಶ ಮಾಡಲು ಹೊರಟಿದ್ದಾನೆ ಎಂದು ತಾಲೂಕಿನ ದೊಡ್ಡಮೇಟಿ ಕುರ್ಕೆ ಗ್ರಾಮದ ಬೂದಿಹಾಳ್ ವಿರಕ್ತ ಮಠದ ಪೀಠಾಧ್ಯಕ್ಷರಾದ ಶಶಿಶೇಖರ ಸಿದ್ದಬಸವ ಸ್ವಾಮೀಜಿ ತಿಳಿಸಿದರು.
ತಾಲೂಕಿನ ದೊಡ್ಡಮೇಟಿಕುರ್ಕೆ ಗ್ರಾಮದ ಬೂದಿಹಾಳ್ ವಿರಕ್ತ ಮಠದ ಲಿಂಗೈಕ್ಯ ರಾಜಶೇಖರ ಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ 10 ನೇ ಸಂಕಷ್ಠ ಚತುರ್ಥಿ ಮತ್ತು ಸುಜ್ಞಾನ ಗೋಷ್ಠಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನುಷ್ಯ ಆಧುನಿಕತೆಯ ವಿಲಾಸೀ ಜೀವನಕ್ಕೆ ಮಾರು ಹೋಗಿ ಸುಖ, ಶಾಂತಿ, ನೆಮ್ಮದಿಯನ್ನೇ ಹಾಳು ಮಾಡಿಕೊಳ್ಳುತ್ತಿದ್ದಾನೆ. ತಂದೆ, ತಾಯಿ, ಗುರು, ಹಿರಿಯರು, ಬಂಧು, ಬಳಗ ಸಂಬಂಧಗಳನ್ನು ಮರೆಯುವ ಜೊತೆಗೆ ಧಾರ್ಮಿಕ ನೆಲೆಗಟ್ಟು ಆಧ್ಯಾತ್ಮಿಕ ಚಿಂತನೆಯ ನಮ್ಮ ಸಂಸ್ಕೃತಿಯ ನ್ಯಾಯ, ನೀತಿ, ಧರ್ಮಗಳನ್ನು ದೂರ ಮಾಡಿ ಸಮಾಜ ಸರ್ವನಾಶಕ್ಕೆ ಹೊರಟಿದ್ದಾನೆ ಎಂದರು.
ನೆಮ್ಮದಿಗಾಗಿ ಹುಡುಕಾಟ: ಮುಂದೆ ಒಂದು ದಿನ ಇದೇ ಮನುಷ್ಯ ನೆಮ್ಮದಿಯ ಬದುಕಿನ ಕಡೆ ಗಮನ ಹರಿಸುವ ಕಾಲ ಸನಿಹದಲ್ಲೇ ಬರಲಿದೆ ಆಗ ಅವನ ನೆಮ್ಮದಿ ಹುಡುಕಾಟವೇ ನಮ್ಮ ಭಾರತದ ಸನಾತನ ಹಿಂದೂ ಧರ್ಮದ ಸಂಸ್ಕೃತಿಯ ಆಧ್ಯಾತ್ಮಿಕ ಚಿಂತನೆಯ ನೆಲೆಗಟ್ಟು ನಮ್ಮ ದೇಶದ ಬುನಾದಿ ಆಗಿರುತ್ತದೆ.
ಅಷ್ಠಲ್ಲದೇ ಇಡೀ ಜಗತ್ತೇ ನಮ್ಮ ದೇಶದ ಕಡೆ ನೋಡುವಂತಾಗುತ್ತದೆ ಏಕೆಂದರೆ ಜಗತ್ತಿನಲ್ಲಿ ವಿಜ್ಞಾನ ಎಷ್ಟೇ ಆವಿಷ್ಕಾರಗಳಿಂದ ಮುಂದುವರಿದರೂ ಎಲ್ಲವೂ ನಾಶವಾಗಬಹುದು ಆದರೆ ನಮ್ಮ ದೇಶಕ್ಕೆ ಯಾವುದೇ ಹಾನಿ ಆಗಲಾರದು ಕಾರಣ ಜಗತ್ತಿನ ಯಾವ ರಾಷ್ಟ್ರದಲ್ಲೂ ಇಲ್ಲದಂತಹ ದೈವಿ ಶಕ್ತಿ ನಮ್ಮ ಭಾರತ ಮಾತೆಯ ಒಡಲಿನಲ್ಲಿದ್ದು, ಅದೇ ಹಿಂದೂ ಧರ್ಮದ ಜೀವಾಳವಾಗಿದ್ದು, ನಮ್ಮ ದೇಶದ ನೆಲ ಜಲದಲ್ಲಿ ಅಂತಹ ಅದ್ಬುತ ಶಕ್ತಿಯನ್ನು ತುಂಬಿದೆ ಎಂದು ಹೇಳಿದರು.
ಧಾರ್ಮಿಕ ಪ್ರಜ್ಞೆ: ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಎಡೆಯೂರಿನ ಬಾಳೆಹೊನ್ನೂರು ಶಾಖಾ ಮಠದ ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬೂದಿಹಾಳ್ ವಿರಕ್ತ ಮಠದಲ್ಲಿ ಪ್ರತಿ ತಿಂಗಳು ಸುಜ್ಞಾನ ಗೋಷ್ಠಿ ಕಾರ್ಯಕ್ರಮ ಆಯೋಜಿಸಿ ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುತ್ತಿರುವುದು ಶ್ಲಾಘನೀಯ,
ಭಕ್ತರು ದೈನಂದಿನ ಬದುಕಿನ ಜಂಜಾಟದಿಂದ ಸ್ವಲ್ಪ ಸಮಯ ದೂರವಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ ಭಾಗವಹಿಸಿ ಸಮಾಜಮುಖೀಯಾಗಿ ಚಿಂತಿಸಲು ಪ್ರೇರಕಶಕ್ತಿ ನೀಡುತ್ತಿದೆ. ಭಕ್ತಾದಿಗಳು ಲಿಂಗೈಕ್ಯ ರಾಜಶೇಖರ ಸ್ವಾಮಿಗಳ ಮೂರ್ತಿ ಪ್ರತಿಷ್ಠಾಪಿಸಿರುವುದು, ಅವರ ತತ್ವ ಆದರ್ಶ ಮುಂದಿನ ಪೀಳಿಗೆಗೆ ದಾರಿದೀಪವಾಗಲಿದೆ ಎಂದರು.
ಆರ್.ಎಸ್.ನಟರಾಜು ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು, ಕಾರ್ಯಕ್ರಮದಲ್ಲಿ ಕಂಚುಕಲ್ ಬಿದರೆ ಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ರಾಜ್ ಕೃಷ್ಣಮೂರ್ತಿ, ಆರ್.ಸಿ. ಶಿವಮೂರ್ತಿ, ನಿವೃತ್ತ ಶಿಕ್ಷಕ ಚಂದ್ರಪ್ಪ ಹಾಗೂ ದಾಸೋಹಿಗಳಾದ ರಾಂಪುರ ಗ್ರಾಮಸ್ಥರು ಮತ್ತು ಅನೇಕ ಭಕ್ತಾಧಿಗಳು ಭಾಗವಹಿಸಿದ್ದರು.