Advertisement

ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗೆ ಮುಕ್ತಿ ನೀಡಿ

11:53 PM Jun 11, 2019 | Team Udayavani |

ದನಿ ಸೇರಿಸುವ ಪ್ರಯತ್ನ ಈ ಸುದಿನ ಜನದನಿ. ಓದುಗರು ತಮ್ಮ ಪ್ರದೇಶದ ರಸ್ತೆ, ನೀರು, ಸ್ವಚ್ಛತೆ, ನೈರ್ಮಲ್ಯ, ಮಾಲಿನ್ಯ, ಸಂಚಾರ ವ್ಯವಸ್ಥೆ ಸೇರಿದಂತೆ ಯಾವುದೇ ಸಮಸ್ಯೆ ಕುರಿತು ತಿಳಿಸಬಹುದು. ಈ ಅಂಕಣ ಪ್ರತಿ ಬುಧವಾರ ಪ್ರಕಟವಾಗಲಿದೆ. ವೈಯಕ್ತಿಕ ಸಮಸ್ಯೆ, ಕಾನೂನು ವ್ಯಾಜ್ಯದ ದೂರು ಅಥವಾ ವಿವಾದದಲ್ಲಿರುವ ವಿಷಯಗಳನ್ನು ಪರಿಗಣಿಸುವುದಿಲ್ಲ. ನಾಗರಿಕರು ತಮ್ಮ ಪ್ರದೇಶದ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಬರೆದು ಪೂರಕವೆನಿಸುವ ಒಂದು ಫೋಟೊ ಜತೆ ಹೆಸರು, ವಿಳಾಸ ಮತ್ತು ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ ಅಂಚೆ, ಇಮೇಲ್‌ ಅಥವಾ ವಾಟ್ಸಪ್‌ ಮೂಲಕ ಕಳುಹಿಸಬಹುದು. ಅರ್ಹ ದೂರುಗಳನ್ನು ಪ್ರಕಟಿಸಿ, ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಸುದಿನ ಮಾಡಲಿದೆ.

Advertisement

ಬಾವಿಗಳ ಸ್ವಚ್ಛತೆಗೆ ಆದ್ಯತೆ ನೀಡಿ
ಕಾವೂರು ವ್ಯಾಪ್ತಿಯ ಜ್ಯೋತಿ ನಗರದ ಆಂಜನೇಯ ದೇವಸ್ಥಾನದ ಪಕ್ಕದಲ್ಲಿ ಇರುವ ಬಾವಿ ನೀರು ಬಳಕೆಗೆ ಯೋಗ್ಯವಲ್ಲ ಎಂದು ತಿಳಿದಿದ್ದರೂ ನೀರಿನ ಅಭಾವದ ಹಿನ್ನೆಲೆಯಲ್ಲಿ ಆ ಭಾಗದ ಜನತೆ ಆ ಬಾವಿಯ ನೀರನ್ನು ಬಳಸುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೋಗ ಹರಡುವ ಭೀತಿ ಇದ್ದರೂ ಅನಿವಾರ್ಯವಾಗಿ ಬಳಸಬೇಕಿದೆ. ಆದ್ದರಿಂದ ಮುಂದಿನ ಬೇಸಗೆ ಆರಂಭವಾಗುವ ಮೊದಲೇ ನಗರದ ಸಾರ್ವಜನಿಕ ಬಾವಿಗಳನ್ನು ಸ್ವತ್ಛ ಮಾಡಿ ಉಪಯೋಗಕ್ಕೆ ಸಿಗುವಂತೆ ಮಾಡುವ ಬಗ್ಗೆ ಸಂಬಂಧಪಟ್ಟವರು ಚಿಂತಿಸಬೇಕಿದೆ.
-ಸ್ಥಳೀಯ ನಿವಾಸಿಗಳು

ಸೇತುವೆಗಳ ಸಂದುಗಳಲ್ಲಿರುವ ಗಿಡ ತೆರವು ಮಾಡಿ
ಕೈಕಂಬ ಕುಲಶೇಖರದ ಬ್ರಿಡ್ಜ್ ಸಂದುಗಳಲ್ಲಿ ಹಲವುಗಿಡಗಳು ಬೆಳೆದಿವೆ. ಅವುಗಳು ಗಿಡಗಳು ದೊಡ್ಡದಾಗುತ್ತಾ ಹೋದಂತೆ ಬೇರುಗಳು ಬೆಳೆದು ಸೇತುವೆ ಬಿರುಕು ಬಿಡುವ ಸಾಧ್ಯತೆಯಿದೆ. ಆದ್ದರಿಂದ ಸಂಬಂಧಪಟ್ಟವರು ಅಗತ್ಯ ಶೀಘ್ರ ಕ್ರಮ ಕೈಗೊಳ್ಳಬೇಕಿದೆ.
-ವಿಶಾಲ್‌, ಕೈಕಂಬ

ರಸ್ತೆ ಬದಿ ಗಲೀಜು ನೀರು
ಮೇರಿಹಿಲ್‌ನ ವಿಕಾಸ್‌ ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ಗಲೀಜು ನೀರು ಹರಿಯುತ್ತಿರುವ ಪರಿಣಾಮ ಇಲ್ಲಿ ಜನಸಾಮಾನ್ಯರು ನಡೆದುಕೊಂಡು ಹೋಗಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಬದಿಯಲ್ಲಿ ಬಸ್‌ಗಳಿಗೆ ಕಾದು ನಿಂತಿರುವ ಪ್ರಯಾಣಿಕರಿಗೆ ಈ ನೀರಿನಿಂದಾಗಿ ನಿತ್ಯ ಸಮಸ್ಯೆ ಎದುರಾಗಿದೆ. ಕೆಲವು ಸಮಯದಿಂದ ಈ ಸಮಸ್ಯೆ ಇದ್ದರೂ ಪಾಲಿಕೆ ಇದರ ನಿವಾರಣೆಗೆ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ನಿತ್ಯವೂ ರಸ್ತೆ ಬದಿ ಗಲೀಜು ನೀರು ಹರಿಯುವಂತಾಗಿದೆ. ಸದ್ಯ ಇದಕ್ಕೆ ಚರಂಡಿ ನೀರು ಕೂಡ ಸೇರಿ ಇಲ್ಲಿ ವಾಸನೆ ಕೂಡ ತುಂಬಿದೆ. ಹೀಗಾಗಿ ಆಡಳಿತ ವ್ಯವಸ್ಥೆ ಇನ್ನಾದರೂ ರಸ್ತೆ ಬದಿ ಸ್ವತ್ಛತೆಗೆ ಪ್ರಾಧಾನ್ಯ ನೀಡಲಿ.
-ಸುಷ್ಮಾ ಆಚಾರ್ಯ, ಸ್ಥಳೀಯರು

ವಿದ್ಯುತ್‌ ಬಾಕ್ಸ್‌ ಅಪಾಯ
ಮಳೆಗಾಲ ಹತ್ತಿರದಲ್ಲಿರುವ ಈ ಸಮಯದಲ್ಲಿ ಎಲ್ಲ ಕಡೆಗಳಲ್ಲಿಯೂ ಜಾಗೃತಿ ಮೂಡುವುದು ಆವಶ್ಯಕ. ಕೊಂಚ ಸಮಸ್ಯೆಯಾದರೂ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಅದರಲ್ಲಿಯೂ ಮಳೆಗಾಲದ ಸಂದರ್ಭ ವಿದ್ಯುತ್‌ ಸಂಬಂಧಿತ ವಿಚಾರಗಳ ಬಗ್ಗೆ ಹೆಚ್ಚು ಜಾಗರೂಕತೆ ವಹಿಸಬೇಕು. ಆದರೆ, ಜಪ್ಪಿನಮೊಗರು ಗ್ರಾಮದ ಜೆಪ್ಪು ಕುಡುಪಾಡಿ ರಸ್ತೆಯ ಶ್ರೀನಿಧಿ ಸ್ಟೋರ್‌ ಪಕ್ಕದಲ್ಲಿರುವ ವಿದ್ಯುತ್‌ ಕಂಬದ ಸ್ಟ್ರೀಟ್‌ ಲೈಟ್‌ ಜಂಕ್ಷನ್‌ ಬಾಕ್ಸ್‌ ಪ್ರಸ್ತುತ ಅಪಾಯದ ಸ್ಥಿತಿಯಲ್ಲಿದೆ. ಬಾಕ್ಸ್‌ನ ಎಲ್ಲ ವಯರ್‌ಗಳು ನೇತಾಡಿಕೊಂಡಿದ್ದು, ಮಳೆಗೆ ಅಪಾಯದ ಮುನ್ಸೂಚನೆಯಂತಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆಯವರು ಇದರ ಕಡೆಗೆ ಗಮನಹರಿಸಿದರೆ ಉತ್ತಮ
 -ಸ್ಥಳೀಯರು

Advertisement

ಫುಟ್‌ಪಾತ್‌ ಸರಿಪಡಿಸಿ
ನಗರದ ಬಹುತೇಕ ರಸ್ತೆಗಳ ಬದಿಯಲ್ಲಿ ಫುಟ್‌ಪಾತ್‌ ಸಮಸ್ಯೆ ಹೇಳತೀರದ ರೀತಿಯಲ್ಲಿದೆ. ಕೆಲವೆಡೆ ಫುಟ್‌ಪಾತ್‌ ಇದ್ದರೆ ಬಹುತೇಕ ಭಾಗದಲ್ಲಿ ಫುಟ್‌ಪಾತ್‌ ಇಲ್ಲ; ಇನ್ನೂ ಹಲವೆಡೆ ನಿರ್ವಹಣೆ ಇಲ್ಲದೆ ಸಮಸ್ಯೆ ಎದುರಿಸುತ್ತಿದೆ. ಇಂತಹುದೇ ಪರಿಸ್ಥಿತಿ ಈಗ ಲೈಟ್‌ಹೌಸ್‌ ಹಿಲ್‌ ರಸ್ತೆಯಲ್ಲಿದೆ. ಇಲ್ಲಿನ ಫುಟ್‌ಪಾತ್‌ನ ಪೈಕಿ ಬಹುತೇಕ ಸ್ಲಾಬ್‌ಗಳು ಎದ್ದು ನಡೆಯಲಾಗದ ಪರಿಸ್ಥಿತಿ ಇದೆ. ಸ್ವಲ್ಪ ಎಚ್ಚರ ತಪ್ಪಿದರೂ ಚರಂಡಿಯೊಳಗೆ ಕಾಲು ಬೀಳುವ ಪರಿಸ್ಥಿತಿ ಇದೆ. ಇನ್ನಾದರೂ ಸಂಬಂಧಪಟ್ಟವರು ಫುಟ್‌ಪಾತ್‌ ಸರಿಮಾಡಲಿ; ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗೆ ಮುಕ್ತಿ ನೀಡಲಿ.
– ಜ್ಯೋತಿ, ಸ್ಥಳೀಯರು

ಫುಟ್‌ಪಾತ್‌ನದ್ದೇ ಸಮಸ್ಯೆ
ಫುಟ್‌ಪಾತ್‌ ಎಲ್ಲ ಕಡೆಗಳಲ್ಲಿ ಸಮಸ್ಯೆಯ ಕೂಪದಂತಿದೆ. ಕಿತ್ತುಹೋದ ಸ್ಲಾ$Âಬ್‌ಗಳಿಂದಾಗಿ ನಗರದ ಕೆಲವು ಫುಟ್‌ಪಾತ್‌ಗಳು ಡೇಂಜರ್‌ ರೂಪದಲ್ಲಿವೆ. ಅದರಲ್ಲಿಯೂ ಪಾಲಿಕೆಯ ಮುಂಭಾಗದ ರಸ್ತೆಯ ಫುಟ್‌ಪಾತ್‌ಗಳೆ ಈಗ ಅಪಾಯದ ರೀತಿಯಲ್ಲಿವೆ. ಪ್ರಯಾಣಿಕರು ಇಲ್ಲಿ ನಡೆದುಕೊಂಡು ಹೋಗಲು ಕಷ್ಟ ಪಡು ವಂತಾಗಿದೆ. ಅದರಲ್ಲಿಯೂ ಮಳೆಯ ಸಂದರ್ಭ ಇಲ್ಲಿ ಇನ್ನಷ್ಟು ತೊಂದರೆಯ ಅಪಾಯವಿದೆ. ಹಗಲು ಈ ಭಾಗದಲ್ಲಿ ಅತ್ತಿಂದಿತ್ತ ಹೋಗುವಾಗ ಭಾರೀ ಎಚ್ಚರಿಕೆ ವಹಿಸಬೇಕು. ರಾತ್ರಿ ಸಮಯದಲ್ಲಂತು ಇಲ್ಲಿ ಇನ್ನಷ್ಟು ಡೇಂಜರ್‌ ಪರಿಸ್ಥಿತಿ ಇದೆ.
-ಸ್ಥಳೀಯ ನಾಗರಿಕರು

ಸೆಂಟ್ರಲ್‌ ನಿಲ್ದಾಣ; ಡ್ರೈನೇಜ್‌ ಸಮಸ್ಯೆ
ನಮ್ಮ ವ್ಯವಸ್ಥೆಯ ದುರವಸ್ಥೆ ಎಂದರೆ ಸೆಂಟ್ರಲ್‌ ರೈಲು ನಿಲ್ದಾಣದ ಮುಂಭಾಗ ಡ್ರೈನೇಜ್‌ ನೀರು ಲೀಕ್‌ ಆಗಿ ಗಲೀಜು ವಾತಾವರಣ ನಿರ್ಮಾಣವಾಗಿದೆ. ವಾಸನೆಯಿಂದ ಇಲ್ಲಿ ಅತ್ತಿಂದಿತ್ತ ಹೋಗಲು ಆಗುತ್ತಿಲ್ಲ. ರಿಕ್ಷಾ ಪಾರ್ಕ್‌ ವ್ಯಾಪ್ತಿಯಲ್ಲಂತೂ ಈ ಸಮಸ್ಯೆ ಅಧಿಕವಾಗಿದೆ. ಪಾಲಿಕೆಯ ಇಂತಹ ಎಡವಟ್ಟುಗಳಿಂದ ಮಳೆಗಾಲದಲ್ಲಿ ನಿತ್ಯ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ.
– ಪ್ರಭಾವತಿ, ಜಪ್ಪು ಕುಡುಪಾಡಿ

Advertisement

Udayavani is now on Telegram. Click here to join our channel and stay updated with the latest news.

Next