Advertisement

Gujarat ನಲ್ಲಿ ಪರಿಹಾರ ಕಾರ್ಯ ಬಿರುಸು -ಕೇಂದ್ರ ಗೃಹಸಚಿವ ಅಮಿತ್‌ ಶಾ ವೈಮಾನಿಕ ಸಮೀಕ್ಷೆ

08:38 PM Jun 17, 2023 | Team Udayavani |

ಭುಜ್‌/ಜೈಪುರ: ಬೈಪರ್‌ಜಾಯ್‌ ಚಂಡಮಾರುತಕ್ಕೆ ತುತ್ತಾಗಿದ್ದ ಗುಜರಾತ್‌ನಲ್ಲಿ ಪರಿಸ್ಥಿತಿ ನಿಧಾನವಾಗಿ ಯಥಾಸ್ಥಿತಿಗೆ ವಾಪಸಾಗುತ್ತಿದೆ. ವಿಶೇಷವಾಗಿ ಕಛ್‌ ಜಿಲ್ಲೆಯಲ್ಲಿ ವಾಣಿಜ್ಯ ಮಳಿಗೆಗಳು ನಿಧಾನವಾಗಿ ತೆರೆಯಲಾರಂಭಿಸಿವೆ. ಹಲವಾರು ಗ್ರಾಮಗಳಲ್ಲಿ ಮುರಿದು ಬಿದ್ದ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಲಾಗುತ್ತಿದೆ. ಕಡಿದುಹೋದ ವಿದ್ಯುತ್‌ ತಂತಿಗಳನ್ನು ಬದಲಾಯಿಸಿ ವಿದ್ಯುತ್‌ ಸಂಪರ್ಕ ಯಥಾ ಸ್ಥಿತಿಗೊಳಿಸುವ ಕೆಲಸ ಸಮರೋಪಾದಿಯಲ್ಲಿ ಮುಂದುವರಿದಿದೆ.

Advertisement

ವಿದ್ಯುತ್‌ ಸಂಪರ್ಕ ಪುನಸ್ಥಾಪಿಸಲು 1, 127 ತಂಡಗಳು ಕಛ್‌, ದ್ವಾರಕ, ಜಾಮ್‌ನಗರ, ಮೊರ್ಬಿ, ಜುನಾಗಢ, ಗಿರ್‌ ಸೋಮನಾಥ, ರಾಜ್‌ಕೋಟ್‌, ಪೋರ್‌ಬಂದರ್‌ ಜಿಲ್ಲೆಗಳಲ್ಲಿ ತ್ವರಿತಗತಿಯಿಂದ ಕೆಲಸ ಮಾಡುತ್ತಿವೆ.

ಕಛ್‌ ಚಂಡಮಾರುತದಿಂದ ಹೆಚ್ಚಿನ ಹಾನಿಗೆ ಒಳಗಾಗಿದ್ದರೆ, ದ್ವಾರಕ ಜಿಲ್ಲೆಯ ಒಂದಷ್ಟು ಭಾಗಗಳಲ್ಲಿ ಗಣನೀಯವಾಗಿ ತೊಂದರೆಗೆ ಒಳಗಾಗಿದೆ. ಗುಜರಾತ್‌ನ ಕೆಲವು ಭಾಗಗಳಲ್ಲಿ ಮುಂದಿನ ಬುಧವಾರದ ವರೆಗೆ ಮಳೆಯಾಗಲಿದೆ.

ಗೃಹ ಸಚಿವ ಭೇಟಿ: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ ಅವರು ಗುಜರಾತ್‌ನಲ್ಲಿ ಹಾನಿಗೆ ಒಳಗಾದ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಕಛ…ನ ಕೆಲವು ನಿರಾಶ್ರಿತರ ಕೇಂದ್ರಗಳಿಗೆ ತೆರಳಿಗೆ ಸಾರ್ವಜನಿಕರ ಜತೆಗೆ ಮಾತುಕತೆ ನಡೆಸಿದ್ದಾರೆ.

ಧಾರಾಕಾರ ಮಳೆ: ಬೈಪರ್‌ಜಾಯ್‌ ಚಂಡಮಾರುತದ ಪ್ರಭಾವದಿಂದ ರಾಜಸ್ಥಾನದಲ್ಲಿ ಧಾರಾಕಾರ ಮಳೆಯಾಗಿದೆ. ಗಾಳಿ ಸಹಿತ ಮಳೆಯಾದ್ದರಿಂದ ದುಂಗರ್‌ಪುರ್‌, ಉದಯಪುರ, ಬಾರ್ಮೆರ್‌, ಸಿರೋಹಿ ಮತ್ತು ಪಾಲಿ ಜಿಲ್ಲೆಗಳಲ್ಲಿ ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ. ಬಾರ್ಮರ್‌ ಜಿಲ್ಲೆಯ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಜಿಲ್ಲೆಯ ಗ್ರಾಮಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ.

Advertisement

ಮೌಂಟ್‌ ಅಬುವಿನಲ್ಲಿ 210 ಮಿಮೀ, ಬಾರ್ಮರ್‌ನ ಸೆಡ್ವಾದಲ್ಲಿ 136 ಮಿಮೀ, ಜಲೋರ್‌ನ ರಾಣಿವಾಡಾದಲ್ಲಿ 110 ಮಿಮೀ, ಚುರುವಿನ ಬಿದಾಸರಿಯಾದಲ್ಲಿ 76 ಮಿಮೀ, ರೇವ್‌ದರ್‌ನಲ್ಲಿ 68 ಮಿಮೀ, ಸಾಂಚೋರ್‌ನಲ್ಲಿ 59 ಮಿಮೀ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಬಾರ್ಮರ್‌, ಜಾಲೋರ್‌, ಸಿರೋಹಿ, ಪಾಲಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ. ಈ ಜಿಲ್ಲೆಗಳಲ್ಲಿ ಪ್ರತಿ ಗಂಟೆಗೆ 30ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಬಿಕಾನೇರ್‌, ಜೋಧ್‌ಪುರ, ಚುರು, ಸಿಕರ್‌, ನಗೌರ್‌, ಝುನ್‌ರನ್‌, ಅಜ್ಮೇರ್‌, ಉದಯಪುರ, ರಾಜ್‌ಸಮಂದ್‌ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿದೆ. ಸೋಮವಾರದ ವರೆಗೆ ರಾಜಸ್ಥಾನದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ.

ಭೂಕುಸಿತ ಸಂಚಾರಕ್ಕೆ ಅಡ್ಡಿ: ಈಶಾನ್ಯ ರಾಜ್ಯ ಮೇಘಾಲಯ, ಅಸ್ಸಾಂಗಳಲ್ಲಿಯೂ ಮಳೆಯಬ್ಬರ ಮುಂದುವರಿದಿದೆ. ಮೇಘಾಲಯದಲ್ಲಿ ಧಾರಾಕಾರ ಮಳೆಗೆ ಭೂಕುಸಿತ ಉಂಟಾಗಿದೆ. ಇದರಿಂದಾಗಿ ಆ ರಾಜ್ಯಕ್ಕೆ ಅಸ್ಸಾಂನ ದಕ್ಷಿಣ ಭಾಗದಿಂದ, ತ್ರಿಪುರಾ, ಮಿಜೋರಾಮ್‌, ಮಣಿಪುರದ ಉತ್ತರ ಭಾಗದಿಂದ ಸಂಪರ್ಕ ಕಲ್ಪಿಸುವ ರಸ್ತೆಗಳು ಕಡಿದು ಹೋಗಿವೆ.

Advertisement

Udayavani is now on Telegram. Click here to join our channel and stay updated with the latest news.

Next