ಮಸ್ಕಿ: ಕಾನೂನು ಸಂಘರ್ಷದಿಂದಾಗಿ ಇಷ್ಟು ದಿನ ಉಪಚುನಾವಣೆಯಿಂದ ವಂಚಿತವಾಗಿದ್ದ ಮಸ್ಕಿ ವಿಧಾನಸಭಾ ಕ್ಷೇತ್ರ ಈಗ ರಂಗೇರಲಿದೆ!.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ವಿರುದ್ದ ಆರ್. ಬಸನಗೌಡ ತುರುವಿಹಾಳ ದಾಖಲಿಸಿದ್ದ ಅಕ್ರಮ ಮತದಾನ ಕೇಸ್ ಹೈಕೋರ್ಟ್ ಪೀಠದಲ್ಲಿ ಸೋಮವಾರ ವಜಾಗೊಂಡಿದ್ದೇ ತಡ ಹಲವು ರಾಜಕೀಯ ನಾಯಕರು ನಿಟ್ಟುಸಿರು ಬಿಟ್ಟಿದ್ದಾರೆ. ಶಾಸಕರೇ ಇಲ್ಲದಾಗಿದ್ದ ಮಸ್ಕಿ ಮತ ಕ್ಷೇತ್ರಕ್ಕೆ ಇನ್ಮುಂದೆ ತಮ್ಮ ನೆಚ್ಚಿನ ನಾಯಕನ ಆಯ್ಕೆಗೆ ಮುಕ್ತ ಅವಕಾಶವೂ ಸಿಕ್ಕಂತಾಗಿದೆ. ಅಜ್ಞಾತ ಅಂತ್ಯ: 2018ರ ಸಾರ್ವತ್ರಿಕ ಚುನಾವಣೆ ವೇಳೆ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಪ್ರತಾಪಗೌಡ ಪಾಟೀಲ, ಬಿಜೆಪಿ ಅಭ್ಯರ್ಥಿ ಆಗಿದ್ದ ಆರ್.ಬಸನಗೌಡ ತುರುವಿಹಾಳ ವಿರುದ್ದ ಕೇವಲ 213 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದರು.
ಆಗ ಪರಾಜಿತ ಅಭ್ಯರ್ಥಿ ಬಸನಗೌಡ ಮತದಾನದ ವೇಳೆ ಅಕ್ರಮ ನಡೆದಿದೆ. ನಕಲಿ ಮತಗಳ ಮೂಲಕ ಪ್ರತಾಪಗೌಡ ಪಾಟೀಲ ಗೆದ್ದಿದ್ದಾರೆ ಎಂದು ಆಕ್ಷೇಪಿಸಿ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಈ ಕೇಸ್‌ನ ವಿಚಾರಣೆ ನಡೆಯುತ್ತಿರುವಾಗಲೇ ಪ್ರತಾಪಗೌಡ ಪಾಟೀಲ ರಾಜ್ಯದ 16 ಜನ ಶಾಸಕರ ಜತೆ ತಾವು ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ವಿರುದ್ದ ಅವಿಶ್ವಾಸ ಮಂಡಿಸಿ, ಬಿಜೆಪಿಗೆ ವಲಸೆ ಬಂದರು. ಈ ವೇಳೆ ಎದುರಾದ ಅನರ್ಹತೆ, ಕಾನೂನು ಸಂಘರ್ಷ ಎಲ್ಲವೂ ಇತಿಹಾಸ. ಆದರೆ ಆಗ ಎದುರಾಗಿದ್ದ ಕಾನೂನು ಸಂಘರ್ಷ ಬಹುತೇಕ ವಲಸಿಗರಿಗೆ ತಪ್ಪಿದ್ದರೆ, ಪ್ರತಾಪಗೌಡ ಪಾಟೀಲರಿಗೆ ತಪ್ಪಿರಲಿಲ್ಲ. ಅಕ್ರಮ ಮತದಾನದ ಕೇಸ್ ಇನ್ನು ಕೋರ್ಟ್ ನಲ್ಲಿದ್ದಿದ್ದರಿಂದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದು ವರ್ಷ ಕಳೆದರೂ ಪ್ರತಾಪಗೌಡ ಪಾಟೀಲರಿಗೆ ಚುನಾವಣೆ ಎದುರಿಸುವ ಭಾಗ್ಯ ಸಿಕ್ಕಿರಲಿಲ್ಲ. ಆದರೆ ಈಗ ಪ್ರಕಟವಾದ ಹೈಕೋರ್ಟ್ ತೀರ್ಪು ಪ್ರತಾಪಗೌಡ ಪಾಟೀಲ ಪಾಲಿಗೆ ರಾಜಕೀಯ ಅಜ್ಞಾತವನ್ನು ಅಂತ್ಯಗೊಳಿಸಿದಂತಾಗಿದೆ.
ಹೀಗಾಗಿ ಈ ಸುದ್ದಿ ತಿಳಿದಿದ್ದೇ ತಡ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ತಮ್ಮ ಬೆಂಬಲಿಗರೊಂದಿಗೆ ಸೋಮವಾರ ಸಂಜೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಇದು ಉಪ ಚುನಾವಣೆ ಪೂರಕ ಸಿದ್ಧತೆಗಾಗಿ ತೆರಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಈಗ ಚುನಾವಣೆ ರಂಗು: ಒಂದೂವರೆ ವರ್ಷದಿಂದಲೂ ಚುನಾವಣೆ ಜಪದಲ್ಲಿದ್ದ ಕ್ಷೇತ್ರದ ಜನರ ಕುತೂಹಲ ಈಗ ತಣಿದಿದೆ.
ಕೋರ್ಟ್ ತೀರ್ಪು ಹೊರಬಿದ್ದಿದ್ದೇ ತಡ ಈಗ ಯಾವ ಪಕ್ಷದಿಂದ ಯಾರು ಚುನಾವಣೆ ಕಣಕ್ಕೆ ಇಳಿಯಲಿದ್ದಾರೆ? ಎನ್ನುವ ಚರ್ಚೆಗಳು ಶುರುವಾಗಿವೆ. ಬಿಜೆಪಿಯಿಂದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಕಣಕ್ಕೆ ಇಳಿಯುವುದು ಬಹುತೇಕ ನಿಚ್ಚಳ. ಆದರೆ ಕಾಂಗ್ರಸ್‌ಗೆ ಹುರಿಯಾಳು ಯಾರು ಎನ್ನುವುದೇ ಪ್ರಶ್ನೆ? ಅಲ್ಲದೇ ಜೆಡಿಎಸ್‌ಗೂ ಇಲ್ಲಿ ಅಭ್ಯರ್ಥಿ ಇಲ್ಲ. ಸದ್ಯ ಕಾಂಗ್ರೆಸ್‌ನಲ್ಲಿ ಆದೇಶ ನಾಯಕ, ಕೂಡ್ಲಗಿಯ ಲೋಕೇಶ ನಾಯಕ ಹೆಸರು ಕೇಳಿಬರುತ್ತಿವೆ. ಕೊನೆ ಗಳಿಗೆಯಲ್ಲಿ ಈಗಿನ ಕಾಡಾ ಅಧ್ಯಕ್ಷ ಆರ್.ಬಸನಗೌಡ ತುರುವಿಹಾಳ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಹಾರಿದರೂ ಅನುಮಾನವಿಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಸುಪ್ರೀಂಗೆ ತೆರಳಿದರೆ ಮತ್ತೆ ವಿಳಂಬ : ಅಕ್ರಮ ಕೇಸ್ ಕುರಿತು ದಾವೆದಾರರಾದ ಆರ್.ಬಸನಗೌಡ ತುರುವಿಹಾಳ ಹಾಗೂ ಈ ಕೇಸ್‌ನಲ್ಲಿ ಮೊದಲೇ ತಮ್ಮನ್ನೂ ಪಾರ್ಟಿ ಮಾಡಬೇಕು ಎಂದು ಮನವಿ ಮಾಡಿದ್ದ ಬಾಬುನಾಯಕ ಅವರು ತಮಗೆ ಹೈಕೋರ್ಟ್ ತೀರ್ಪಿನಲ್ಲಿ ಸಂಶಯವಿದ್ದರೆ ಅಥವಾ ತೃಪ್ತಿದಾಯಕವಾಗದೇ ಇದ್ದರೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಒಂದು ವೇಳೆ ಇವರು ಸುಪ್ರೀಂಗೆ ತೆರಳಿದ್ದೇ ಆದರೆ ಮತ್ತೆ ಮಸ್ಕಿ ಕ್ಷೇತ್ರಕ್ಕೆ ಉಪ ಚುನಾವಣೆ ವಿಳಂಬವಾಗುವ ಸಾಧ್ಯತೆ ಇದೆ.
-ಮಲ್ಲಿಕಾರ್ಜುನ ಚಿಲ್ಕರಾಗಿ