ಮಂಡ್ಯ: ತಾಲೂಕಿನ ಬಸರಾಳು ಹೋಬಳಿ ಕಾರೆಕಟ್ಟೆ ಗ್ರಾಮದ ಮೆ.ಕೀರ್ತಿ ರಾಸಾಯನಿಕ ಸಲ್ಫೋರಿಕ್ ಆ್ಯಸಿಡ್ ತಯಾರಿಕಾ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಿಂದ ಬೆಳೆ ನಷ್ಟವಾಗಿದ್ದ 12 ಮಂದಿ ರೈತರಿಗೆ 6.89 ಲಕ್ಷ ರೂ. ಪರಿಹಾರದ ಚೆಕ್‌ಗಳನ್ನು ಶಾಸಕ ಎಂ.ಶ್ರೀನಿವಾಸ್ ವಿತರಿಸಿದರು.
ಪರಿಹಾರ ವಿತರಣೆಗೆ ಆದೇಶಿಸಿತ್ತು: ನಗರದ ತಾಲೂಕು ಕಚೇರಿಯಲ್ಲಿ ಶನಿವಾರ 12 ಮಂದಿ ರೈತರಿಗೆ ಚೆಕ್ ವಿತರಿಸಿದರು. ಇದರಲ್ಲಿ ಕೃಷಿ ಬೆಳೆ ಹಾನಿಯಾಗಿದ್ದ 5 ಮಂದಿ ಹಾಗೂ ತೋಟ ಗಾರಿಕೆ ಬೆಳೆ ಹಾನಿಯಾಗಿದ್ದ 7 ಮಂದಿಗೆ ಮೆ.ಕೀರ್ತಿ ರಾಸಾಯನಿಕ ಸಲ್ಫೋರಿಕ್ ಆ್ಯಸಿಡ್ ತಯಾರಿಕಾ ಕಂಪನಿ ವತಿ ಯಿಂದಲೇ ಪರಿಹಾರ ವಿತರಣೆಗೆ ಸರ್ಕಾರ ಆದೇಶಿಸಿತ್ತು.
ವಿವಿಧ ಬೆಳೆಗಳು ನಾಶವಾಗಿದ್ದವು: ಕಾರೇಕಟ್ಟೆ ಗ್ರಾಮದಲ್ಲಿರುವ ಕೀರ್ತಿ ರಾಸಾಯನಿಕ ಸಲ್ಫೋರಿಕ್ ಆ್ಯಸಿಡ್ ತಯಾರಿಕಾ ಕಾರ್ಖಾನೆಯಿಂದ ಜ.15ರಂದು ವಿಷಾನಿಲ ಸೋರಿಕೆ ಯಾಗಿತ್ತು. ಇದರಿಂದ ರೈತರಿಗೆ ಸೇರಿದ 15 ಎಕರೆ ಜಮೀನು ಹಾಗೂ ಸುಮಾರು 20 ಎಕರೆ ಗೂ ಮೇಲ್ಪಟ್ಟು ಅರಣ್ಯ ಇಲಾಖೆಗೆ ಸೇರಿದ ಪ್ರದೇಶ ಹಾನಿಗೊಳಗಾಗಿತ್ತು. ಇದರಲ್ಲಿ ರೈತರು ಬೆಳೆದ ನೂರಾರು ತೆಂಗಿನಗಿಡ, ಟೊಮೆಟೋ, ರಾಗಿ ಹಾಗೂ ಹುರುಳಿ ಸೇರಿದಂತೆ ಇತರೆ ಬೆಳೆಗಳು ನಷ್ಟವಾಗಿದ್ದವು.
ಕ್ರಿಮಿನಲ್ ಕೇಸ್: ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ ಮತ್ತು ಸೇವೆಗಳು) ಸರ್ಕಾ ರದ ಅಧಿಧೀನ ಕಾರ್ಯದರ್ಶಿ ಜಿ.ಎನ್. ಸುಶೀಲಾ ಬೆಳೆ ಹಾನಿಯಾಗಿರುವ ಸಂತ್ರಸ್ತ ರೈತರಿಗೆ ಕಂಪನಿಯವರಿಂದ ಪರಿಹಾರ ಪಾವತಿ ಸು ವಂತೆ ಆದೇಶಿಸಿದ್ದರು. ಈ ಹಿನ್ನೆಲೆ ಯಲ್ಲಿ ವಿಷಾನಿಲ ಸೋರಿಕೆಯಿಂದ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ನೀಡುವ ಹಿನ್ನೆಲೆ ಮಂಡ್ಯ ಉಪವಿಭಾಗಾಧಿಕಾರಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕರು, ತೋಟಗಾರಿಕೆ ಇಲಾಖೆ, ವಲಯ ಅರಣ್ಯಾಧಿಕಾರಿ ಅವರನ್ನೊಳಗೊಂಡ ತಂಡ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡಿದ್ದರು. ವರದಿಯಂತೆ ಕಾರ್ಖಾನೆ ಹಾಗೂ ರೈತರು ಪರಿಹಾರ ಮೊತ್ತದ ಕುರಿತಂತೆ ಸಭೆ ನಡೆಸಿ ಇಬ್ಬರ ಒಪ್ಪಿಗೆಯಂತೆ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗಿತ್ತು. ಸದ್ಯ ಕಂಪನಿ ವಿರುದ್ಧ 2ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.
ಒತ್ತಡ ಹಾಕಿದ್ದರು: ರೈತರಿಗೆ ಪರಿಹಾರ ವಿತರಿಸುವಂತೆ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಶಾಸಕ ಎಂ.ಶ್ರೀನಿವಾಸ್ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ ನಿರಂತರ ಒತ್ತಡ ಹಾಕಿದ್ದರು.
ಎಷ್ಟೆಷ್ಟು ಪರಿಹಾರ? : ಕೃಷಿ ಬೆಳೆ ಹಾನಿಯಾಗಿದ್ದ ಕಾರೆಕಟ್ಟೆ ಗ್ರಾಮದ ರೈತರಾದ ಮನುಕುಮಾರ್‌ಗೆ 67,617 ರೂ., ಬಿ.ಮುದ್ದೇಗೌಡಗೆ 16,162 ರೂ., ನಿಂಗರಾಜೇಗೌಡಗೆ 66,695 ರೂ., ಚಿಕ್ಕಸುಬ್ಬಮ್ಮ 43,605 ರೂ., ಪ್ರಕಾಶ್ 35,524 ರೂ. ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದ್ದ ಚಿಕ್ಕಸುಬ್ಬಮ್ಮ 58,363 ರೂ., ಬುಸೀಗೌಡ, ಅಶೋಕ ತಲಾ 60 ಸಾವಿರ ರೂ., ಎಂ.ಕೆ. ಅಶೋಕ 1.20 ಲಕ್ಷ ರೂ., ಕೃಷ್ಣೇಗೌಡ 30 ಸಾವಿರ ರೂ., ಮಧುಕುಮಾರ್ 72,954 ರೂ., ಅನಿಲ್‌ಕುಮಾರ್ 58,363 ರೂ. ಸೇರಿ ಒಟ್ಟು 6.89 ಲಕ್ಷ ರೂ. ವಿತರಿಸಲಾಯಿತು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಐಶ್ವರ್ಯ, ತಹಶೀಲ್ದಾರ್ ಕುಂಞ ಅಹಮದ್ ಮತ್ತಿತರರು ಉಪಸ್ಥಿತರಿದ್ದರು.