ಔರಾದ: ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ತೇಗಂಪುರ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಪ್ರತ್ಯೇಕ ಕೊಳವೆ ಬಾವಿ ಕೊರೆಸಲಾಗಿದೆ.
ಉದಯವಾಣಿ ಪತ್ರಿಕೆಯಲ್ಲಿ ಬುಧವಾರ ‘ತೇಗಂಪುರದಲ್ಲಿ ನೀರಿನ ಸಮಸ್ಯೆ’ ಎಂಬ ಶೀರ್ಷಿಕೆಯಡಿ ಪ್ರಕಟವಾದ ವಿಶೇಷ ವರದಿಯಿಂದ ಜಾಗೃತರಾದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಕೊಳವೆ ಬಾವಿ ಕೊರೆಸುವ ಮೂಲಕ ಗ್ರಾಮಸ್ಥರ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಿದ್ದಾರೆ.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿವಕುಮಾರ ಘಾಟೆ, ಸುಂಧಾಳ ಗ್ರಾಪಂ ಮಾಜಿ ಅಧ್ಯಕ್ಷ ರಘುನಾಥ ಪಾಟೀಲ್, ಗ್ರಾಪಂ ಮಾಜಿ ಸದಸ್ಯ ಸಂಗಪ್ಪ ಚಿಟ್ಮೆ, ಚಂದ್ರಕಾಂತ ಸ್ಥಳ ಪರಿಶೀಲಿಸಿ ಹಿಂದೆ ತೇಗಂಪುರ ಹಾಗೂ ಮಮದಾಪುರ ಗ್ರಾಮಕ್ಕೆ ನಿತ್ಯ ನೀರುಣಿಸುವ ತೆರೆದ ಬಾವಿ ಪಕ್ಕದಲ್ಲಿಯೇ ಕೊಳವೆ ಬಾವಿ ಕೊರೆಯಲಾಗಿದೆ.
ಭೀಕರ ಬರಗಾಲ ದಲ್ಲಿಯೂ ಕೊಳವೆ ಬಾವಿಗೆ ನಾಲ್ಕು ಇಂಚು ನೀರು ಬಂದಿರುವುದು ಸಂತೋಷದ ವಿಷಯ. ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿವಕುಮಾರ ಘಾಟೆ, ಶಾಸಕ ಪ್ರಭು ಚವ್ಹಾಣ ಗ್ರಾಮ ಸಂಚಾರಕ್ಕೆ ಬಂದಾಗ ಊರಿನಲ್ಲಿರುವ ನೀರಿನ ಸಮಸ್ಯೆ ಬಗ್ಗೆ ನಾವು ಹಾಗೂ ಗ್ರಾಮದ ಮುಖಂಡರು ಸಭೆಯಲ್ಲಿ ಮನವಿ ಮಾಡಿದ್ದೇವೆ. ಹೀಗಾಗಿ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿ ಕೊಳವೆ ಬಾವಿ ಕೊರೆಸುವಂತೆ ಮಾಡಿದ್ದಾರೆಂದು ಹರ್ಷ ವ್ಯಕ್ತ ಪಡಿಸಿದರು.
ಕೊಳವೆ ಬಾವಿಯಲ್ಲಿ ಮೋಟಾರ್ ಬಿಡಲಾಗಿದ್ದು, ನಾಳೆಯಿಂದಲೇ ತೇಗಂಪುರ ಗ್ರಾಮಕ್ಕೆ ನೂತನ ಬಾವಿಯಿಂದ ನೀರು ಸರಬರಾಜು ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.