ಹೊನ್ನಾಳಿ: 2019-20ನೇ ಸಾಲಿನ ಮುಂಗಾರು, ಹಿಂಗಾರು ಹಾಗೂ ಬೇಸಿಗೆಯಲ್ಲಿ ಮೆಕ್ಕೆಜೋಳ ಬೆಳೆದ ಪ್ರತಿ ರೈತರು ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಹಿನ್ನಡೆ ಅನುಭವಿಸಿದ್ದಾರೆ. ಹಾಗಾಗಿ ಪ್ರತಿ ರೈತರಿಗೆ ಐದು ಸಾವಿರ ರೂ. ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಸುರೇಶ್ ತಿಳಿಸಿದರು.
ಕೃಷಿ ಇಲಾಖೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಕ್ಕೆಜೋಳ ಬೆಳೆದ ಪ್ರತಿ ರೈತನ ಖಾತೆಗೆ ನೇರ ನಗದು ವರ್ಗಾಯಿಸಲಾಗುವುದು. ಈ ಹಿನ್ನೆಲೆಯಲ್ಲಿ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ತೀರ್ಮಾನಿಸಲಾಗಿದೆ ಎಂದರು.
ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಮುಂಗಾರು ಹಂಗಾಮಿನಲ್ಲಿ ಹಿಂಗಾರು ಹಾಗೂ ಬೇಸಿಗೆಯಲ್ಲಿ ಮೆಕ್ಕೆಜೋಳ ಬೆಳೆದಿರುವ ರೈತರ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಅವರೆಲ್ಲರಿಗೂ ನೇರ ನಗದನ್ನು ಅವರ ಖಾತೆಗೆ ವರ್ಗಾಯಿಸಲಾಗುವುದು. ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಅಧ್ಯಕ್ಷರಾಗಿ ತಹಶೀಲ್ದಾರ್ ಇರುತ್ತಾರೆ. ಈಗಾಗಲೇ ಲಭ್ಯ ಇರುವ ಮಾಹಿತಿಗಳನ್ನು ತಹಶೀಲ್ದಾರ್ ಲಾಗಿನ್‌ಗೆ ವರ್ಗಾಯಿಸಲಾಗಿದೆ. ಮೆಕ್ಕೆಜೋಳ ಬೆಳೆದ ಎಲ್ಲಾ ರೈತರ ಪಟ್ಟಿಯನ್ನು ಗ್ರಾಪಂ ಕಚೇರಿ, ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಯಾವ ರೈತರ ಹೆಸರು ಪಟ್ಟಿಯಲ್ಲಿ ಬಂದಿಲ್ಲವೋ ಅಂಥವರು ಗ್ರಾಮಲೆಕ್ಕಾಧಿಕಾರಿಗಳ ಕಚೇರಿ ಹಾಗೂ ರೈತ ಸಂಪರ್ಕ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.