ನವದೆಹಲಿ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಇದೀಗ ದೇಶದ ಅತೀ ದೊಡ್ಡ ಹೋಲ್ ಸೇಲ್ ಮತ್ತು ಫುಡ್ ರೀಟೈಲ್ ಸಂಸ್ಥೆ “ಮೆಟ್ರೋ ಕ್ಯಾಶ್ ಆ್ಯಂಡ್ ಕ್ಯಾರಿ ಇಂಡಿಯಾವನ್ನು” 2,850 ಕೋಟಿ ರೂಪಾಯಿಗೆ ಖರೀದಿಸಿರುವುದಾಗಿ ಉಭಯ ಕಂಪನಿಗಳು ಗುರುವಾರ (ಡಿಸೆಂಬರ್ 22) ಘೋಷಿಸಿದೆ.
ಇದನ್ನೂ ಓದಿ:ಕಠಿಣ ಪದ ಬಳಕೆ ಮಾಡಬೇಕು, ಕುಲದೀಪ್ ರನ್ನು ಕೈಬಿಟ್ಟಿದ್ದು ನಂಬಲಸಾಧ್ಯ: ಗಾವಸ್ಕರ್ ಅಸಮಾಧಾನ
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಪ್ಪಂದದೊಂದಿಗೆ ಜಗತ್ತಿನ 5ನೇ ಅತೀ ದೊಡ್ಡ ಆರ್ಥಿಕತೆಯಿಂದ ಮೆಟ್ರೋ ಕ್ಯಾಶ್ ಆ್ಯಂಡ್ ಕ್ಯಾರಿ ನಿರ್ಗಮಿಸಿದಂತಾಗಿದೆ. 2003ರಲ್ಲಿ ಜರ್ಮನ್ ಮೂಲದ ಮೆಟ್ರೋ ಭಾರತದಲ್ಲಿ ಆರಂಭಗೊಂಡಿತ್ತು.
ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಕ್ಯಾಶ್ ಆ್ಯಂಡ್ ಕ್ಯಾರಿ ವಹಿವಾಟನ್ನು ಆರಂಭಿಸಿದ್ದ ಮೊದಲ ಕಂಪನಿ ಮೆಟ್ರೋ ಎಂಬ ಹೆಗ್ಗಳಿಕೆ ಪಡೆದಿತ್ತು. ಭಾರತದ 21 ನಗರಗಳಲ್ಲಿ ಮೆಟ್ರೋ ಸಂಸ್ಥೆಯ 31 ಬೃಹತ್ ಮಳಿಗೆಗಳಿದ್ದು, 3,500 ಮಂದಿ ನೌಕರರನ್ನು ಹೊಂದಿರುವುದಾಗಿ ವರದಿ ತಿಳಿಸಿದೆ.
ಇದೀಗ ಮೆಟ್ರೋ ಕ್ಯಾಶ್ ಆ್ಯಂಡ್ ಕ್ಯಾರಿ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಪ್ರಮುಖ ನಗರಗಳಲ್ಲಿರುವ ಮೆಟ್ರೋ ಇಂಡಿಯಾದ ಮಳಿಗೆಗಳ ವಹಿವಾಟನ್ನು ತನ್ನ ಸುಪರ್ದಿಗೆ ಪಡೆದಂತಾಗಿದೆ.
ಮೆಟ್ರೋ ಸಂಸ್ಥೆ 30 ಲಕ್ಷಕ್ಕೂ ಅಧಿಕ ಗ್ರಾಹಕರನ್ನು ಹೊಂದಿದೆ. 2022ರ ಸೆಪ್ಟೆಂಬರ್ 30ರವರೆಗಿನ ಆರ್ಥಿಕ ವರ್ಷದಲ್ಲಿ ಮೆಟ್ರೋ ಇಂಡಿಯಾ ಬರೋಬ್ಬರಿ 7,700 ಕೋಟಿ ರೂಪಾಯಿ ವಹಿವಾಟು ನಡೆಸಿದೆ ಎಂದು ವರದಿ ವಿವರಿಸಿದೆ.