ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (RRVL) ಬುಧವಾರ ಬಾಲಿವುಡ್ ನಟಿ ಆಲಿಯಾ ಭಟ್ ಒಡೆತನದ ಮಕ್ಕಳ ಉಡುಪಿನ ಬ್ರಾಂಡ್ ಎಡ್-ಎ-ಮಮ್ಮಾ ಜತೆ ಜಂಟಿ ಉದ್ಯಮವನ್ನು ಘೋಷಿಸಿದೆ. ‘RRVL 51% ರಷ್ಟು ಹೆಚ್ಚಿನ ಪಾಲನ್ನು ಹೊಂದಿ ಎಲ್ಲಾ ಅಂಶಗಳಲ್ಲಿ ಮಕ್ಕಳ ಮತ್ತು ಗರ್ಭಿಣಿಯರ ಉಡುಪುಗಳ ಬ್ರ್ಯಾಂಡ್ ಅನ್ನು ವಿಸ್ತರಿಸಲು ಮತ್ತು ಬೆಳೆಸಲು ಯೋಜಿಸುತ್ತಿದೆ’ ಎಂದು ರಿಲಯನ್ಸ್ ರಿಟೇಲ್ ಹೇಳಿದೆ.
ಎಡ್-ಎ-ಮಮ್ಮಾ ಸಂಸ್ಥಾಪಕಿ ಆಲಿಯಾ ಭಟ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವುದಾಗಿ ಮತ್ತು ಅದರ ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್ ಅಂಗಸಂಸ್ಥೆಯ ಸಮರ್ಪಕ ನಿರ್ವಹಣೆಯ ನೆರವಿನೊಂದಿಗೆ ವ್ಯವಹಾರವನ್ನು ಮುನ್ನಡೆಸಲಿದ್ದೇವೆ’ ಎಂದು ಪ್ರಕಟಣೆ ತಿಳಿಸಿದೆ.
‘RRVL ನ ಮಹತ್ವದ ಹೆಜ್ಜೆ ಯುವ ಪೀಳಿಗೆಗೆ ಜಾಗೃತ ಫ್ಯಾಷನ್ ಅನ್ನು ಉತ್ತೇಜಿಸುವ ನಡೆಯನ್ನು ಸೂಚಿಸುತ್ತದೆ’ ಎಂದು ಕಂಪನಿ ಹೇಳಿದೆ.
‘ಎಡ್-ಎ-ಮಮ್ಮಾ ಮತ್ತು ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ ಜಂಟಿ ಉದ್ಯಮಕ್ಕೆ ಪ್ರವೇಶಿಸಿರುವುದನ್ನು ಹಂಚಿಕೊಳ್ಳಲು ಸಂತೋಷವಾಗಿದೆ’ ಎಂದು ಆಲಿಯಾ ಭಟ್ ತಮ್ಮ ಇನ್ಸ್ಟಾ ಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆಲಿಯಾ ಭಟ್ 2020 ರಲ್ಲಿ ಎಡ್-ಎ-ಮಮ್ಮಾವನ್ನು ಮಕ್ಕಳ ಉಡುಪು ಬ್ರ್ಯಾಂಡ್ ಆಗಿ ಸ್ಥಾಪಿಸಿದ್ದರು. 2 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಫ್ಯಾಶನ್ ಆಯ್ಕೆಗಳು ಲಭ್ಯವಿದ್ದವು. ನೈಸರ್ಗಿಕ ಬಟ್ಟೆಗಳು ಮತ್ತು ಪ್ರಕೃತಿ-ವಿಷಯದ ಬಟ್ಟೆಗಳ ಮೇಲೆ ಬ್ರ್ಯಾಂಡ್ ಗಮನ ಸೆಳೆದು ಯುವ ಪೋಷಕರನ್ನು ಆಕರ್ಷಿಸಿತ್ತು. ಬ್ರ್ಯಾಂಡ್ ತ್ವರಿತವಾಗಿ ಕೇವಲ ಆನ್‌ಲೈನ್ ವ್ಯಾಪಾರ ಮಾತ್ರವಲ್ಲದೆ ವಿವಿಧ ಮಳಿಗೆಗಳಲ್ಲೂ ಬೇಡಿಕೆ ಪಡೆದುಕೊಂಡು ಮಾರಾಟವಾಗುತ್ತಿದೆ.
ಆಲಿಯಾ ಭಟ್ ಅವರು ಗರ್ಭಿಣಿಯಾದ ಬಳಿಕ ಎಡ್ ಎ ಬ್ರ್ಯಾಂಡ್ ಕಳೆದ ವರ್ಷ ತಾಯಂದಿರ ಉಡುಪುಗಳಿಗೆ ವಿಸ್ತರಿಸಿತ್ತು.ಅದರ ನಂತರ ಬ್ರ್ಯಾಂಡ್ ಶಿಶು, ಗರ್ಭಿಣಿ ಮತ್ತು ಬಾಣಂತಿಯರ ಬಟ್ಟೆಗಳನ್ನು ಪರಿಚಯಿಸಿ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಿತ್ತು.