ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ವಯಾಕಾಮ್ 18 ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ವಾಲ್ಟ್ ಡಿಸ್ನಿ ಕಂಪನಿ ಜಂಟಿ ಉದ್ಯಮಕ್ಕಾಗಿ ನಿರ್ಣಾಯಕ ಒಪ್ಪಂದಗಳಿಗೆ ಸಹಿ ಮಾಡಿರುವುದಾಗಿ ಘೋಷಣೆ ಮಾಡಿವೆ.
ಇದರೊಂದಿಗೆ ವಯಾಕಾಮ್ 18 ಮತ್ತು ಸ್ಟಾರ್ ಇಂಡಿಯಾವನ್ನು ಒಗ್ಗೂಡಿಸಲಾಗುತ್ತದೆ. ವಹಿವಾಟಿನ ಭಾಗವಾಗಿ ವಯಾಕಾಮ್ 18ಗೆ ಸೇರಿದ ಮಾಧ್ಯಮ ಸಂಸ್ಥೆಗಳನ್ನು ಕೋರ್ಟ್ ಅನುಮೋದಿತ ವ್ಯವಸ್ಥೆಯ ಮೂಲಕ ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ವಿಲೀನಗೊಳಿಸಲಾಗುತ್ತದೆ.
ಬೆಳವಣಿಗೆ ಕಾರ್ಯತಂತ್ರದ ಭಾಗವಾಗಿ ರಿಲಯನ್ಸ್ ನಿಂದ 11,500 ಕೋಟಿ ರೂಪಾಯಿ ಹೂಡಿಕೆ ಮಾಡುವುದಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಹಣಕಾಸಿನ ನಂತರದ ಆಧಾರದಲ್ಲಿ ಈ ಜಂಟಿ ಉದ್ಯಮದ ವಹಿವಾಟಿನ ಮೌಲ್ಯ 70,352 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಜಂಟಿ ಉದ್ಯಮದ ಸಂಪೂರ್ಣ ವಹಿವಾಟು ಮುಗಿದ ನಂತರ ರಿಲಯನ್ಸ್ ಇದನ್ನು ನಿಯಂತ್ರಿಸುತ್ತದೆ. ರಿಲಯನ್ಸ್ ಪಾಲು ಶೇ 16.34ರಷ್ಟು, ವಯಾಕಾಮ್ 18 ಪಾಲು ಶೇ 46.82 ಮತ್ತು ಡಿಸ್ನಿ ಪಾಲು ಶೇ 36.84ರಷ್ಟು ಇರುತ್ತದೆ. ಈ ಜಂಟಿ ಉದ್ಯಮಕ್ಕೆ ಡಿಸ್ನಿಯಿಂದ ಇನ್ನೂ ಕೆಲವು ಮಾಧ್ಯಮ ಆಸ್ತಿಗಳನ್ನು ಕೊಡುಗೆ ನೀಡಬಹುದಾಗಿದ್ದು, ಅದು ಥರ್ಡ್ ಪಾರ್ಟಿ ಅನುಮೋದನೆಗೆ ಒಳಪಟ್ಟಿದೆ.
ಈ ಜಂಟಿ ಉದ್ಯಮದ ಮುಖ್ಯಸ್ಥರಾಗಿ ನೀತಾ ಅಂಬಾನಿ, ಉಪಾಧ್ಯಕ್ಷರಾಗಿ ಉದಯಶಂಕರ್ ಕೆಲಸ ನಿರ್ವಹಿಸಲಿದ್ದಾರೆ. ಈ ಮೂಲಕ ಭಾರತದಾದ್ಯಂತ ಎಪ್ಪತ್ತೈದು ಕೋಟಿ ವೀಕ್ಷಕರು ಒಂದೇ ಪ್ಲಾಟ್ಫಾ ರಂಗೆ ಬರಲಿದ್ದಾರೆ. ವಿಶ್ವದಾದ್ಯಂತ ಇರುವ ಭಾರತೀಯರಿಗೆ ಇದು ಸೇವೆ ಒದಗಿಸಲಿದೆ.
ಈ ಜಂಟಿ ಉದ್ಯಮದ ಮೂಲಕ ಭಾರತದಲ್ಲಿ ಎಕ್ಸ್ ಕ್ಲೂಸಿವ್ ಆಗಿ ಡಿಸ್ನಿ ಸಿನಿಮಾ ಪ್ರೊಡಕ್ಷನ್ಸ್ ಗೆ ವಿತರಣೆ ಹಕ್ಕು ದೊರೆಯಲಿದೆ. ಮೂವತ್ತು ಸಾವಿರಕ್ಕೂ ಹೆಚ್ಚು ಡಿಸ್ನಿ ಕಂಟೆಂಟ್ ಆಸ್ತಿಗಳಿಗೆ ಲೈಸೆನ್ಸ್ ದೊರೆಯಲಿದೆ.