ಕೋವಿಡ್ ಕಾರಣಕ್ಕೆ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಅನುಭವಗಳಾಗಿವೆ. ನಂಗೊಂದು ಭದ್ರ ನೌಕರಿ ಇದೆ. ಈ ಊರು ಇಲ್ಲದಿದ್ದರೆ ಇನ್ನೊಂದೂರು, ಈ ಕೆಲಸ ಇಲ್ಲದಿದ್ರೆ ಮತ್ತೂಂದು ಅನ್ನುತ್ತಿದ್ದವರು ಮಾತು ಹೊರಡದೆ ಕೂತಿದ್ದಾರೆ. ಕಾರಣ, ಅವರು ನೌಕರಿ ಮಾಡುತ್ತಿದ್ದ ಕಂಪನಿ ಬಾಗಿಲು ಹಾಕಿಕೊಂಡಿದೆ. ಸದ್ಯದ ಸಂದರ್ಭದಲ್ಲಿ ಬೇರೆ ಕಡೆಯಲ್ಲೂ ನೌಕರಿ ಸಿಗುವುದಿಲ್ಲ ಎಂಬುದು ಕೆಲಸ ಕಳೆದುಕೊಂಡಎಲ್ಲರಿಗೂಅರ್ಥವಾಗಿದೆ.ಹೀಗಿರುವಾಗಲೇ ಹುಟ್ಟಿದೂರು ನೆನಪಾಗಿದೆ. ಒಲ್ಲದ ಮನಸ್ಸಿನಿಂದಲೇ ಸಿಟಿಯಲ್ಲಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಿ, ಹೆಂಡತಿ- ಮಕ್ಕಳ ಜೊತೆ ಜನ ಹುಟ್ಟೂರನ್ನು ಸೇರಿಕೊಂಡಿದ್ದಾರೆ. ಮಕ್ಕಳ ನೌಕರಿ ಹೋಗಿದೆ, ಉದ್ಯೋಗವಿಲ್ಲದೆ ಅವರು ಖಾಲಿ ಕುಳಿತಿದ್ದಾರೆ ಎಂದು ತಿಳಿದು ಪೋಷಕರಿಗೆ ಚಿಂತೆಯಾಗಿದೆ ನಿಜ. ಆದರೆ, ಇನ್ನು ಮುಂದೆ, ಸುದೀರ್ಘ ಅವಧಿಯವರೆಗೆ ಮಕ್ಕಳು ತಮ್ಮ ಜೊತೆಗೇ ಇರುತ್ತಾರೆ ಎಂದು ತಿಳಿದು ಸಂತೋಷವೂ ಆಗಿದೆ.
ಓದು ಮುಗಿಸಿ ನೌಕರಿ ಹಿಡಿಯುವ ಮಕ್ಕಳು ತಮ್ಮ ಕಣ್ಣ ಮುಂದೆಯೇ ಇರಲಿ ಎಂದು ಹೆಚ್ಚಿನ ತಂದೆ-ತಾಯಿ ಬಯಸುವು ದುಂಟು. ವಯಸ್ಸಾದ ಕಾರಣಕ್ಕೆ ದಿಢೀರ್ ಜೊತೆಯಾಗುವ ಕಾಯಿಲೆ-ಕಸಾಲೆಯ ಸಂದರ್ಭದಲ್ಲಿ ಮಕ್ಕಳು ಜೊತೆಗಿದ್ದು ತಮ್ಮನ್ನು ನೋಡಿಕೊಳ್ಳಲಿ ಎಂಬ ಆಸೆ. ಆದರೆ, ಹುಟ್ಟಿದ ಊರಿಂದ ದೂರವಿದ್ದು ಸ್ವತ್ಛಂದವಾಗಿ ಹಾರಬೇಕು ಎಂಬ ಬಯಕೆ, ಮಕ್ಕಳಿಗೆ. ಈ ಕಾರಣದಿಂದಲೇ ಅವರು ಊರಿಗೆ ಬಂದರೂ, ರಜೆ ಇಲ್ಲ ಎಂಬ ಕಾರಣ ನೀಡಿ, ಒಂದೆರಡು ದಿನವಿದ್ದು ಹೋಗಿಬಿಡುತ್ತಿದ್ದರು. ಹಬ್ಬ-ಹುಣ್ಣಿಮೆಗಳಲ್ಲಿ ಮಾತ್ರ ಬಂದು ಹೋಗುವಮಕ್ಕಳನ್ನು ಕಣ್ತುಂಬಿಕೊಂಡು, ಮತ್ತೆ ಮುಂದಿನ ಬರುವಿಕೆಗಾಗಿ ಎದುರು ನೋಡುತ್ತ ಕಾಲ ಕಳೆಯುವ ಅನಿವಾರ್ಯತೆ ಹೆತ್ತವರದ್ದಾಗಿತ್ತು.
ಆದರೆ, ಕೋವಿಡ್ ಬಂದನಂತರಮಕ್ಕಳು ಮತ್ತು ಮೊಮ್ಮಕ್ಕಳಿಗೆ ಅನಿರ್ದಿಷ್ಟ ಅವಧಿಯ ರಜೆ ಸಿಕ್ಕಿಬಿಟ್ಟಿದೆ. ಆರೋಗ್ಯದ ದೃಷ್ಟಿಯಿಂದ ಹಳ್ಳಿಗಳಲ್ಲಿ ಇರುವುದೇ ವಾಸಿ ಎಂಬ ಸತ್ಯವೂ ಅರಿವಾಗಿದೆ. ಹೊಸದೊಂದು ಉದ್ಯೋಗದ ಆಫರ್ ಬರುವವರೆಗೂ ಹುಟ್ಟಿದ ಊರನ್ನೂ, ಹೆತ್ತವರನ್ನೂ ಬಿಟ್ಟು ಹೋಗದಿರಲು ಮಕ್ಕಳು ನಿರ್ಧರಿಸಿದ್ದಾರೆ. ಈವರೆಗೂ, ನನಗೆ ರಜೆ ಸಿಗಲ್ಲ, ಊರಿಗೆ ಬಂದು ಹೋಗೋಕೆ ಟೈಮ್ ಇರಲ್ಲ, ಬಸ್- ರೈಲು ರಿಸರ್ವೇಶನ್ ಮಾಡಿಸೋದೇ ಕಷ್ಟ ಎಂದು ಕಾರಣ ಹೇಳುತ್ತಿದ್ದ ಹೆಣ್ಣುಮಕ್ಕಳು, “ಕೋವಿಡ್ ಕಾಲದಲ್ಲಿ ಪಿ.ಜಿ.ಯಲ್ಲಿ ಇರುವುದು ಕಷ್ಟ ಕಣಮ್ಮಾ…’ ಅನ್ನುತ್ತಾ ಊರು ಸೇರಿಕೊಂಡಿದ್ದಾರೆ!
ಇದುವರೆಗೂ ವರ್ಷಕ್ಕೊಮ್ಮೆ ಇಲ್ಲವೇ ಹಬ್ಬ, ಜಾತ್ರೆಗಳಲ್ಲಿ ಮಾತ್ರ ಕೈಗೆ ಸಿಗುತ್ತಿದ್ದ ಮೊಮ್ಮಕ್ಕಳನ್ನು ಬೆಚ್ಚನೆಯ ಮಡಿಲಿನಲ್ಲಿ ಕೂರಿಸಿಕೊಂಡು ಎಷ್ಟು ಮುದ್ದು ಮಾಡಿದರೂ ಸಾಲದು ಹಿರಿಯರಿಗೆ. ಮೊಮ್ಮಕ್ಕಳಿಗೂ ಅಷ್ಟೇ; ನಿತ್ಯ ದುಡಿಯಲೆಂದು ಹೊರ ಹೋಗುತ್ತಿದ್ದ ಅಪ್ಪ-ಅಮ್ಮಂದಿರು ಈಗ ಮನೆಯಲ್ಲಿಯೇ ಇರುತ್ತಾರೆ. ಹೀಗಾಗಿ ಒಂಟಿತನ ಅವರನ್ನು ಕಾಡುವುದಿಲ್ಲ. ಪಟ್ಟಣದ ಕಿರಿ ಕಿರಿ, ಶಾಲೆಗೆ ಹೋಗು, ಓದು, ಟ್ಯೂಷನ್‌ಗಳ ಜಂಜಾಟವಿಲ್ಲ. ಹೀಗಾಗಿ ಈಗ ಮಕ್ಕಳು ಧಾವಂತ ರಹಿತ ದಿನಗಳನ್ನು ಕಳೆಯುತ್ತಿದ್ದಾರೆ. ಒಟ್ಟಿನಲ್ಲಿ ಕರೋನಾ ಒಂದು ರೀತಿಯಲ್ಲಿ ಒಡೆದು ಹೋಗಿದ್ದ ಸಂಬಂಧಗಳನ್ನು ಒಂದುಗೂಡಿಸಿದೆ. ಹಿರಿ-ಕಿರಿಯ ಜೀವಗಳಿಗೆ ಸ್ವಲ್ಪ ದಿನಗಳ ಮಟ್ಟಿಗಾದರೂ ಹಿಗ್ಗು ತಂದಿದೆ.
– ಗೌರಿ ಚಂದ್ರಕೇಸರಿ