Advertisement

ತುಂಗಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ: ಡ್ಯಾಂನಲ್ಲಿ 83.18 ಟಿಎಂಸಿ ನೀರು ಸಂಗ್ರಹ

06:18 PM Aug 03, 2023 | Team Udayavani |

ಕೊಪ್ಪಳ: ಸರ್ಕಾರದ ನಿರ್ದೇಶನದಂತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ 2023-24ನೇ ಸಾಲಿನ ಮುಂಗಾರು ಹಂಗಾಮಿಗೆ ತುಂಗಭದ್ರಾ ಜಲಾಶಯದಿಂದ ವಿವಿಧ ಕಾಲುವೆಗಳಿಗೆ ನೀರು ಹರಿಸಲಾಗಿದೆ ಎಂದು ತುಂಗಭದ್ರಾ ಯೋಜನಾ ವೃತ್ತ ಮುನಿರಾಬಾದ್‌ ನ ಅಧೀಕ್ಷಕ ಅಭಿಯಂತರ ಎಲ್.ಬಸವರಾಜ್ ಅವರು ತಿಳಿಸಿದ್ದಾರೆ.

Advertisement

ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ 83.18 ಟಿ.ಎಂ.ಸಿ ನೀರು ಸಂಗ್ರಹವಿದೆ. ಒಳ ಹರಿವು 21,492 ಕ್ಯೂಸೆಕ್ ಇದೆ. ಜಲಾಶಯದ ನೀರಿನ ಲಭ್ಯತೆ ಆಧರಿಸಿ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ.

ಕಾಲಾವಧಿ ಕಾಲುವೆವಾರು: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಆ.೦3ರಿಂದ ಸರಾಸರಿ 3000 ಕ್ಯೂಸೆಕ್‌ನಂತೆ (ಕುಡಿಯುವ ನೀರಿಗಾಗಿ ಗಣೇಕಲ್ ಜಲಾಶಯ ತುಂಬುವವರೆಗೆ) ಅಥವಾ ಕಾಲುವೆಯಡಿ ಲಭ್ಯತೆ ಇರುವವರೆಗೆ (ಇದರಲ್ಲಿ ಯಾವುದು ಮೊದಲು ಅದು ಅನ್ವಯ) ನೀರು ಹರಿಸಲಾಗುವುದು.

ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಆ.೦3ರಿಂದ ಸರಾಸರಿ 1200 ಕ್ಯೂಸೆಕ್‌ ನಂತೆ ಅಥವಾ ಕಾಲುವೆಯಡಿ ಲಭ್ಯತೆ ಇರುವವರೆಗೆ (ಇದರಲ್ಲಿ ಯಾವುದು ಮೊದಲು ಅದು ಅನ್ವಯ) ನೀರು ಹರಿಸಲಾಗುವುದು. ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಆ.೦3 ರಿಂದ ಸರಾಸರಿ 650 ಕ್ಯೂಸೆಕನಂತೆ ಅಥವಾ ಕಾಲುವೆಯಡಿ ಲಭ್ಯತೆ ಇರುವವರೆಗೆ (ಇದರಲ್ಲಿ ಯಾವುದು ಮೊದಲು ಅದು ಅನ್ವಯ) ನೀರು ಹರಿಸಲಾಗುವುದು. ರಾಯ ಬಸವಣ್ಣ ಕಾಲುವೆಗೆ ಜೂ.1 ರಿಂದ ಸರಾಸರಿ 250 ಕ್ಯೂಸೆಕ್ಸ್ ಅಥವಾ ಈ ಕಾಲುವೆಯಡಿ ನೀರು ಲಭ್ಯವಿರುವವರೆಗೆ ನೀರು ಹರಿಸಲಾಗುತ್ತಿದೆ.

ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಆ.03 ರಿಂದ ಸರಾಸರಿ 25 ಕ್ಯೂಸೆಕನಂತೆ ಅಥವಾ ಕಾಲುವೆಯಡಿ ಲಭ್ಯತೆ ಇರುವವರೆಗೆ ನೀರು ಹರಿಸಲಾಗುವುದು.

Advertisement

ರೈತಭಾಂದವರಲ್ಲಿ ಮನವಿ: ರೈತಭಾಂಧವರು ಅಧಿಕೃತ ಅಚ್ಚುಕಟ್ಟು ಪ್ರದೇಶದಲ್ಲಿ ನಿಗಧಿಪಡಿಸಿದ ಬೆಳೆಗಳನ್ನು ಮಾತ್ರ ಬೆಳೆಯಬೇಕು. ಬೆಳೆ ಉಲ್ಲಂಘನೆ ಮಾಡುವುದು, ಕಾಲುವೆ ಜಾಲದ ಗೇಟ್‌ ಗಳನ್ನು ಹಾನಿ ಮಾಡುವುದು, ಎಸ್ಕೇಪ್ ಮೂಲಕ ಹಳ್ಳಕ್ಕೆ ನೀರು ಹರಿಸುವುದು, ಸೈಫನ್‌ಗಳ ಮೂಲಕ ಪಂಪ್ ಸೆಟ್‌ಗಳ ಮೂಲಕ ಮತ್ತು ನಿರ್ಮಿಸಿರುವ ಬಾವಿಗಳ ಮೂಲಕ ನೀರು ಕೊಂಡೋಯ್ಯುವುದನ್ನು ಹಾಗೂ ಅನಧಿಕೃತ ಬೆಳೆ ಬೆಳೆಯುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಈ ರೀತಿ ಉಲ್ಲಂಘನೆ ಮಾಡಿದಲ್ಲಿ ಅವರ ವಿರುದ್ಧ ಕಾನೂನಿನ ಕ್ರಮ ಜರುಗಿಸಲಾಗುವುದು. ರೈತರು ಸಮರ್ಪಕ ನೀರು ನಿರ್ವಹಣೆಗೆ ಇಲಾಖೆಯೊಡನೆ ಸಹಕರಿಸಬೇಕು ಎಂದು ಸೂಚನೆ ನೀಡಿದ್ದಾರೆ.

ದೆಹಲಿಯಿಂದಲೇ ಡಿಕೆಶಿ ಸೂಚನೆ: ತುಂಗಭದ್ರಾ ಡ್ಯಾಂ ಬಹುಪಾಲು ಭರ್ತಿಯ ಹಂತಕ್ಕೆ ತುಲುಪಿದ್ದರೂ ಕಾಲುವೆಗಳಿಗೆ ನೀರು ಬಿಡಲು ವಿಳಂಬ ಧೋರಣೆಗೆ ರೈತರು ತುಂಬ ಅಸಮಾಧಾನ ವ್ಯಕ್ತಪಡಿಸಿದ್ದರು. ಕೂಡಲೇ ಕಾಲುವೆಗೆ ನೀರು ಬಿಡಬೇಕು. ಭತ್ತ ನಾಟಿಗೆ ಅನುವು ಮಾಡಿಕೊಡಬೇಕೆಂದು ಒತ್ತಾಯ ಕೇಳಿ ಬಂದಿದ್ದರೂ ಸಹ ಐಸಿಸಿ ಸಭೆ ಕರೆದಿರಲಿಲ್ಲ. ಅಲ್ಲದೇ, ಐಸಿಸಿ ಸಮಿತಿಯು ರಚನೆಯಾಗಿರಲಿಲ್ಲ. ಇದರಿಂದ ರೈತರಲ್ಲೂ ತುಂಬ ಆತಂಕವಿತ್ತು. ಸರ್ಕಾರ ಯಾವಾಗ ನೀರು ಬಿಡುತ್ತೋ ಎಂದು ಕಾದು ಕುಳಿತಿದ್ದರು. ಡ್ಯಾಂನಿಂದ ನೀರು ಬಿಡುವ ಕುರಿತಂತೆ ಮೂರು ಜಿಲ್ಲೆಗಳ ಜನಪ್ರತಿನಿಧಿಗಳು ದೆಹಲಿಯಲ್ಲಿಯೇ ಸಿಎಂ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ ಅವರಿಗೆ ಒತ್ತಡ ತಂದ ಹಿನ್ನೆಲೆಯಲ್ಲಿ ಡಿಕೆಶಿ ಅವರು ಡ್ಯಾಂನಿಂದ ನೀರು ಬಿಡುಗಡೆಗೆ ಸೂಚನೆ ನೀಡಿದ ತಕ್ಷಣ ಡ್ಯಾಂನಿಂದ ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ಕೊನೆಗೂ ಕಾಲುವೆಗೆ ನೀರು ಹರಿದಿದ್ದಕ್ಕೆ ರೈತರಲ್ಲೂ ಸಂತಸ ತರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next