ಬೆಂಗಳೂರು: ರಾಜ್ಯ ಸರಕಾರ ಹಾಗೂ ಕಾಂಗ್ರೆಸ್ ವಿರುದ್ಧ ಬಿಜೆಪಿ ನಡೆಸುತ್ತಿರುವ ಹೋರಾಟಕ್ಕೆ ಪ್ರತಿಯಾಗಿ ದಾಖಲೆಗಳ ಬಿಡುಗಡೆ ಮೂಲಕ ತಿರುಗೇಟು ನೀಡಲು ಕಾಂಗ್ರೆಸ್ ಸಜ್ಜಾಗುತ್ತಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿರುವ ಅವ್ಯವಹಾರ, ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಪ್ರತಿ ದಿನ ಒಬ್ಬೊಬ್ಬ ಸಚಿವರ ಮೂಲಕ ದಾಖಲೆ ಬಿಡುಗಡೆಗೊಳಿಸಲು ಮುಂದಾಗಿದೆ.
ಬಿಜೆಪಿಯ “ಬೆಂಗಳೂರು ಉಳಿಸಿ’ ಪಾದಯಾತ್ರೆಗೆ ಪ್ರತ್ಯುತ್ತರ ನೀಡಲು ಬಿಜೆಪಿ ಅವಧಿಯಲ್ಲಿ ಬಿಬಿಎಂಪಿಯಲ್ಲಿ ನಡೆದಿದ್ದ ಅವ್ಯವಹಾರಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಹೋರಾಟ ಮಾಡಲು ನಿರ್ಧರಿಸಿದೆ.
ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ನಗರ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಬಿಜೆಪಿ ಬಿಡುಗಡೆ ಮಾಡಿರುವ ಚಾರ್ಜ್‌ಶೀಟ್ ವೇಸ್ಟ್ ಬಂಡಲ್, ಕಸದ ಡಬ್ಬಿಗೂ ಹಾಕಲು ಲಾಯಕ್ ಇಲ್ಲ ಎಂದು ಅಣಕವಾಡಿದರು.
ಚುನಾವಣೆ ಮುಂದೂಡಿಕೆಗೆ ಬಿಜೆಪಿ ಕಸರತ್ತು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಭೀತಿ ಇರುವುದರಿಂದ ಬಿಜೆಪಿ ನಾಯಕರು ಚುನಾವಣೆ ಮುಂದೂಡಲು ಯೋಚನೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ಅಮಿತ್ ಶಾ, ಹಾಗೂ ಪ್ರಧಾನಿ ಮೋದಿ ರಾಜ್ಯಕ್ಕೆ ಬಂದರೆ ಎಲ್ಲವೂ ಬದಲಾಗುತ್ತದೆ ಎಂದು
ಬಿಜೆಪಿಯವರು ನಂಬಿಕೊಂಡಿದ್ದರು. ಆದರೆ ಅವರು ಮೂರು ನಾಲ್ಕು ಬಾರಿ ಬಂದರೂ ಗೆಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಅವರ ಕಾರ್ಯಕ್ರಮಗಳಿಗೆ ಜನರು ಬರುತ್ತಿಲ್ಲ. ಹೀಗಾಗಿ ಈ ಸರಕಾರದ ಅವಧಿ ಮುಗಿದ ಮೇಲೆ ಆರು ತಿಂಗಳು ರಾಷ್ಟ್ರಪತಿ ಆಡಳಿತ ಹೇರುವ ಆಲೋಚನೆಯನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂಬ ಸುದ್ದಿ ಇದೆ ಎಂದರು.
ಓಪನ್ ಚಾಲೆಂಜ್
ಸಚಿವ ಜಾರ್ಜ್ ಅವರು, ನನ್ನ ವಿರುದ್ಧ ಭೂ ಕಬಳಿಕೆ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಅವರ ಬಳಿ ಯಾವುದಾದರೂ ದಾಖಲೆ ಇದ್ದರೆ ಕೊಡಲಿ ನೋಡೋಣ. ನಾನು ಜನ ಸೇವಕ. ರಿಯಲ್ ಎಸ್ಟೇಟ್ ಡಾನ್ ಅಲ್ಲ. ಹಿಂದಿನ ಗೃಹ ಸಚಿವರಾದವರು ಡಾನ್ ಎಂದು ಆರೋಪಿಸಿದರು.