Advertisement

ಜಪ್ತಿ ಮಾಡಿದ ವಾಹನಗಳ ರಿಲೀಸ್‌; ಠಾಣೆಗಳ ಮುಂದೆ ವಾಹನ ಪಡೆಯಲು ಜನರ ದಂಡು

12:58 PM May 02, 2020 | mahesh |

ಬೆಂಗಳೂರು: ಲಾಕ್‌ಡೌನ್‌ ಉಲ್ಲಂಘನೆಯಿಂದ ಪೊಲೀಸರ ವಶದಲ್ಲಿರುವ ವಾಹನಗಳನ್ನು ವಾಪಾಸ್‌ ಪಡೆಯಲು ಅವಕಾಶ ನೀಡಿದ ಬೆನ್ನಲ್ಲೇ ಶುಕ್ರವಾರ ಮಾಲೀಕರುಗಳ ದಂಡು ಪೊಲೀಸ್‌ ಠಾಣೆಗಳತ್ತ ಹರಿದುಬಂತು. ಆದರೆ, ಆ ಪೈಕಿ ವಾಹನಗಳು ದಕ್ಕಿದ್ದು ಕೆಲವೇ ಕೆಲವರಿಗೆ! ಕಾನೂನು ಸುವ್ಯವಸ್ಥೆ ಠಾಣೆಗಳ ಮುಂದೆ ಸಾಲುಗಟ್ಟಿ ನಿಂತಿದ್ದ ವಾಹನ ಸವಾರರು “ವಾಹನ ಪಡೆದರೆ ಸಾಕಪ್ಪ’ ಎನ್ನುವಷ್ಟು ಹೈರಾಣಾಗಿದರು. ಕೆಲವರು ಸೂಕ್ತ ದಾಖಲೆ ಸಲ್ಲಿಸಿ ವಾಹನ ಪಡೆದು ಮನೆಗಳಿಗೆ ತೆರಳಿದರು. ಇನ್ನೂ ಹಲವರು ಮಾಹಿತಿ ಕೊರತೆ ಸೂಕ್ತ ದಾಖಲೆಗಳನ್ನು ಸಲ್ಲಿಸಲಾಗದೆ, ನಿರಾಶೆಯಿಂದ ಮನೆ ಕಡೆಗೆ ಹೆಜ್ಜೆ ಹಾಕುತ್ತಿರುವುದು ಕಂಡುಬಂತು. ಹೈಕೋರ್ಟ್‌ ಸೂಚನೆಗಳು, ವಾಹನಗಳ ಮೇಲೆ ಉಳಿದಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು, ಅವುಗಳಿಗೆ ದಂಡ ಇನ್ನಿತರೆ ವಿಚಾರಗಳಿಗೆ ವಾಹನ ಮಾಲಿಕರಿಗೆ ಮನದಟ್ಟು ಮಾಡಿಸುವಲ್ಲಿ ಪೊಲೀಸರು ಕೂಡ ಸುಸ್ತಾದರು. ಇದರಿಂದ ಬಹುತೇಕ ಕಡೆಗಳಲ್ಲಿ ಜಪ್ತಿಯಾಗಿದ್ದ ವಾಹನಗಳನ್ನು ಪಡೆಯಲು ಮಾಲಿಕರಿಗೆ ಸಾಧ್ಯವಾಗಲಿಲ್ಲ.

Advertisement

ಜೇಬಿಗೆ ಕತ್ತರಿ: ಜಪ್ತಿ ಮಾಡಲಾದ ವಾಹನಗಳನ್ನು ಆಯಾ ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳಿಗೆ ವಹಿಸಲಾಗಿದೆ. ಲಾಕ್‌ಡೌನ್‌ ಉಲ್ಲಂಘನೆ ದಂಡದ ಜತೆಗೆ, ಸಂಚಾರ ನಿಯಮ ಉಲ್ಲಂಘನೆ ಹಳೇ ಕೇಸ್‌ಗಳೂ ಸೇರಿದ್ದರಿಂದ ದಂಡದ ಮೊತ್ತದ ಮಾಲಿಕರ ಜೇಬು ಸುಡುವಂತೆ ಮಾಡಿತು. ಮತ್ತೂಂದೆಡೆ ಸಂಚಾರ ವಿಭಾಗದ ಪೊಲೀಸರು ಹಳೇ ಕೇಸ್‌ಗಳನ್ನು ಪರಿಶೀಲಿಸಿ, ವಾಹನಗಳ ಬಿಡುಗಡೆಗೆ ಎನ್‌ಓಸಿ ಪತ್ರ ನೀಡಲು ಸಮಯ ಹಿಡಿಯುತ್ತಿತ್ತು. ಠಾಣೆಗಳ ಹೊರಭಾಗದಲ್ಲಿ ಸ್ಥಳೀಯ ಮೈದಾನದಲ್ಲಿ ವಾಹನಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ವಾಹನ ಬಿಡಿಸಿಕೊಳ್ಳಲು ಬರುವ ಜನರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ದಾಖಲೆ ಸ್ವೀಕರಿಸುವ ಸಿಬ್ಬಂದಿ ಕೈಗವಸು ಮತ್ತು ಮುಖಗವಸು ಜತೆಗೆ ವೈಸರ್‌ ಧರಿಸಬೇಕು. ಇಡೀ ಪ್ರಕ್ರಿಯೆಯಲ್ಲಿ ಸ್ಯಾನಿಟೈಸರ್‌ ಕಡ್ಡಾಯವಾಗಿ ಬಳಸಲಾಗುತ್ತಿತ್ತು.

ಬಾಂಡ್‌ ಖರೀದಿ ಸಮಸ್ಯೆ: ಕೋರ್ಟ್‌ ಸೂಚನೆಯಂತೆ ದಂಡ ಕಟ್ಟುವುದರ ಜತೆಗೆ ಇನ್ಮುಂದೆ ಲಾಕ್‌ಡೌನ್‌ ಉಲ್ಲಂಘಿಸುವುದಿಲ್ಲ ಎಂದು ಬಾಂಡ್‌ ಪೇಪರ್‌ನಲ್ಲಿ ಮುಚ್ಚಳಿಕೆ ಬರೆದುಕೊಡಬೇಕು. ಆದರೆ, ಮೇ 1 ಕಾರ್ಮಿಕರ ದಿನದ ಹಿನ್ನೆಲೆಯಲ್ಲಿ ಬ್ಯಾಂಕ್‌ ಬಂದ್‌ ಆಗಿದ್ದವು. ಹೀಗಾಗಿ, ಬಾಂಡ್‌ ಖರೀದಿಸಲು ಸಾಧ್ಯವಾಗಲಿಲ್ಲ. ಲಾಕ್‌ಡೌನ್‌ ಉಲ್ಲಂಘನೆಯ ದಂಡ ವಸೂಲಿ ಮಾಡಲು ಸ್ಪಷ್ಟತೆ ಕೊರತೆಯಿಂದ, ನಗರದ ಬಹುತೇಕ ಠಾಣೆಗಳಲ್ಲಿ ಮಧ್ಯಾಹ್ನದವರೆಗೂ ಗೊಂದಲ ಉಂಟಾಗಿತ್ತು. ಕೆಲವೆಡೆ ಖಾಲಿ ಪೇಪರ್‌ ನಲ್ಲಿ ಮುಚ್ಚಳಿಕೆ ಬರೆಸಿಕೊಂಡು, ಸೂಕ್ತ ದಾಖಲೆಗಳನ್ನು
ಪಡೆದು, ದಂಡ ವಸೂಲಿ ಮಾಡಿ ವಾಹನ ಬಿಟ್ಟು ಕಳುಹಿಸಿದರು. ಜಪ್ತಿಯಾದ ವಾಹನಗಳಿಗೆ ಮಾಲಿಕರು ನೀಡಿರುವ ದಾಖಲೆಗಳು ಪೂರಕವಾಗಿವೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಹೀಗಾಗಿ ವಾಹನಗಳನ್ನು ಹಸ್ತಾಂತರಿಸಲು ನಿಧಾನವಾಗುತ್ತಿದೆ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ. ಬಿ.ಆರ್‌. ರವಿಕಾಂತೇಗೌಡ ತಿಳಿಸಿದರು.

ದುಬಾರಿಯಾದ ಹಳೇ ದಂಡ!
ವಾಹನ ವಾಪಸ್‌ ಪಡೆಯಲು ಈ ಹಿಂದೆ ಸಂಚಾರ ನಿಯಮಗಳ ಉಲ್ಲಂಘಿಸಿರುವ ಪ್ರಕರಣಗಳ ಬಾಕಿದಂಡದ ಮೊತ್ತವೂ ಪಾವತಿಸಬೇಕಾಗಿರುವ ಕ್ರಮ ವಾಹನ ಮಾಲಿಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಲಾಕ್‌ಡೌನ್‌ ಪರಿಣಾಮ ಕೆಲಸಗಳು ನಡೆಯುತ್ತಿಲ್ಲ, ಹಣಕಾಸಿನ ವ್ಯವಹಾರಗಳು ಕೂಡ ಸರಿಯಾಗಿ ನಡೆಯುತ್ತಿಲ್ಲ. ಇಂತಹ ಸಂಕಷ್ಟದ
ಸಮಯದಲ್ಲಿ ಹಳೆ ಕೇಸ್‌ಗಳ ದಂಡಪಾವತಿ ಕಡ್ಡಾಯ ದುಬಾರಿಯಾಗಿದೆ ಎಂದು ಕೆಲವು ವಾಹನ ಮಾಲಿಕರು ಅಭಿಪ್ರಾಯ ವ್ಯಕ್ತಪಡಿಸಿದರು.

ವಾಹನ ಬಿಡಿಸಿಕೊಳ್ಳಲು ಏನು ಮಾಡಬೇಕು?
1 ಸಂಚಾರ ನಿಯಮ ಉಲ್ಲಂಘನೆಯ ಹಳೇ ಕೇಸ್‌ಗಳ ದಂಡ ಬಾಕಿ ಇದ್ದರೆ, ಅದನ್ನು ಪಾವತಿಸಿಬೇಕು.
2 ಸಂಚಾರ ಪೊಲೀಸರಿಂದ ಕ್ಲಿಯರೆನ್ಸ್ ರಸೀದಿ ಪಡೆದು, ಪ್ರತಿಯನ್ನು ವಾಹನ ಜಪ್ತಿ ಮಾಡಿದ ಪೊಲೀಸರಿಗೆ ನೀಡಬೇಕು.
3 ಬಾಂಡ್‌ ಪೇಪರ್‌ನಲ್ಲಿ “ಲಾಕ್‌ಡೌನ್‌ ಮುಗಿಯುವರೆಗೂ ರಸ್ತೆಗೆ ಇಳಿಯುವುದಿಲ್ಲ’ ಎಂದು ಮುಚ್ಚಳಿಕೆ ರೆದುಕೊಡಬೇಕು.
4 ವಾಹನದ ಆರ್‌ಸಿ ಬುಕ್‌, ಇನ್ಶೂರೆನ್ಸ್ ಹಾಗೂ ಮಾಲಿಕನ ಆಧಾರ್‌ ಕಾರ್ಡ್‌, ಫೋಟೋ ಕೊಡಬೇಕು. ದಾಖಲೆಗಳು ಪೂರಕವಾಗಿದ್ದರೆ, ಮಾತ್ರ ವಾಹನ ಸಿಗುತ್ತದೆ. ಇಲ್ಲವಾದರೆ ಕೋರ್ಟ್‌ನಿಂದ ಬಿಡಿಸಿಕೊಳ್ಳಬೇಕು.
5 ದ್ವಿಚಕ್ರ ಮತ್ತು ತ್ರಿಚಕ್ರ ವಾಹನಕ್ಕೆ 500 ರೂ. ಹಾಗೂ ನಾಲ್ಕು ಚಕ್ರ ವಾಹನಕ್ಕೆ 1000 ರೂ. ದಂಡ ಪಾವತಿಸಿ, ವಾಹನ ಬಿಡಿಸಿಕೊಳ್ಳಬೇಕು.

Advertisement

ಸಾರ್ವಜನಿಕ ಹಿತಾಸಕ್ತಿಗಾಗಿ ಲಾಕ್‌ಡೌನ್‌ ಅವಧಿ ವಿಸ್ತರಣೆಯಾಗಿದ್ದು, ಸ್ವಾತಂತ್ರ್ಯ ನಿರ್ಬಂಧಿಸುವುದು ಅನಿವಾರ್ಯ. ನಮ್ಮ ಶಕ್ತ್ಯಾನುಸಾರ ಅತ್ಯಧಿಕ ಸೇವೆ ನೀಡುತ್ತೇವೆ. ದಯವಿಟ್ಟು ಸಹಕಾರ ನೀಡಿ ಜಪ್ತಿ ಮಾಡಿದ ವಾಹನಗಳ ಬಿಡುಗಡೆ ಹಾಗೂ ಲಾಕ್‌ಡೌನ್‌ ಉಲ್ಲಂಘಿಸುವ ವಾಹನಗಳ ಜಪ್ತಿ ಮುಂದುವರಿಯುತ್ತದೆ.
● ಭಾಸ್ಕರ್‌ ರಾವ್‌, ನಗರ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next