Advertisement

ಜೆಡಿಎಸ್‌ ಪಾಳೆಯದಲ್ಲಿ ಈಗ ನಿರಾಳತೆ ;ಸಿಎಂ ಬೇಸರ ?

12:40 AM Jan 19, 2019 | |

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಅಳಿವು-ಉಳಿವು ಕುರಿತು ಕಳೆದೊಂದು ವಾರದಿಂದ ಜೆಡಿಎಸ್‌ ವಲಯದಲ್ಲಿ ಆವರಿಸಿದ್ದ ಆತಂಕ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಂತರ ನಿವಾರಣೆಯಾಗಿದೆ.

Advertisement

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ನಾಲ್ವರು ಹೊರತುಪಡಿಸಿ ಉಳಿದೆಲ್ಲ ಶಾಸಕರು ಹಾಜರಾಗಿದ್ದು ಆ ಮೂಲಕ ಬಿಜೆಪಿ ಹೇಳಿಕೊಳ್ಳುತ್ತಿದ್ದಂತೆ 15 ರಿಂದ 18 ಶಾಸಕರು ಅವರ ಸಂಪರ್ಕದಲ್ಲಿ ಇಲ್ಲ ಎಂಬುದು ಸಾಬೀತಾದಂತಾಗಿದೆ. ಹೀಗಾಗಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸದ್ಯಕ್ಕೆ ನಿರಾಳವಾಗಿ ದ್ದಾರೆ. ಆದರೂ ಆತಂಕ ದೂರವಾಗಿಲ್ಲ. ಬಿಜೆಪಿ ಮತ್ತೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರನ್ನು ಸೆಳೆಯಬಹುದೆಂಬ ಅನುಮಾನದಿಂದ ಎಲ್ಲ ಶಾಸಕರ ಮೇಲೆ ಕಣ್ಣಿಡಲಾಗಿದೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಎಚ್‌.ಡಿ.ದೇವೇಗೌಡರು ಹಾಗೂ ಎಚ್‌.ಡಿ.ಕುಮಾರಸ್ವಾಮಿ ದೂರವಾಣಿ ಮೂಲಕ ಚರ್ಚಿಸಿದರು. ನಂತರ ಕುಮಾರಸ್ವಾಮಿ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಶಾಸಕರ ಮನವಿಗೆ ಸ್ಪಂದಿಸಿ. ನಿಗಮ ಮಂಡಳಿ ಅಧ್ಯಕ್ಷರು, ಸಂಸದೀಯ ಕಾರ್ಯದರ್ಶಿಗಳ ಜತೆ ಸಮನ್ವಯತೆಯಿಂದ ಕೆಲಸ ಮಾಡಿ. ಜೆಡಿಎಸ್‌ ಸಚಿವರ ವ್ಯಾಪ್ತಿಗೆ ಬರುವ ನಿಗಮ ಮಂಡಳಿ ಅಧ್ಯಕ್ಷರ ಜತೆ ಸಂಘರ್ಷ ಉಂಟಾಗದಂತೆ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು ಎಂದು ಹೇಳಲಾಗಿದೆ.

ಸಿಎಂ ಬೇಸರ ?
ಕಳೆದ ಏಳು ತಿಂಗಳಿನಿಂದ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿ ನಾನು ಬಹಳಷ್ಟು ತಾಳ್ಮೆಯಿಂದಲೇ ಕೆಲಸ ಮಾಡುತ್ತಿದ್ದೇನೆ. ಎಲ್ಲರ ಜತೆ ಸಮನ್ವಯತೆ ಯಿಂದ ಇದ್ದೇನೆ. ಆದರೂ ಕೆಲ ನಾಯಕರು ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೆ.ಸಿ.ವೇಣುಗೋಪಾಲ್‌ ಅವರ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ. ಆಗಾಗ್ಗೆ ಇಂತಹ ಘಟನೆಗಳು ಸಮ್ಮಿಶ್ರ ಸರ್ಕಾರದ ವರ್ಚಸ್ಸಿಗೂ ಧಕ್ಕೆಯಾಗುತ್ತದೆ. ರೈತರ ಸಾಲ ಮನ್ನಾ ಸೇರಿ ನಾವು ಮಾಡಿದ ಅಭಿವೃದ್ಧಿ  ಕೆಲಸಗಳು ನಮ್ಮ ಗೊಂದಲಗಳಿಂದ ಜನರಿಗೆ ಕಾಣದಂತಾಗುತ್ತದೆ ಎಂದು ಹೇಳಿದರು ಎನ್ನಲಾಗಿದೆ. ಲೋಕಸಭೆ ಚುನಾವಣೆವರೆಗೂ ತಾಳ್ಮೆ ವಹಿಸಿ ಎಂದು ವೇಣುಗೋಪಾಲ್‌ ಸಮಾಧಾನಪಡಿಸಿದರು ಎಂದು ತಿಳಿದುಬಂದಿದೆ.

ರಾಜ್ಯ ಸರ್ಕಾರವನ್ನು ಉರುಳಿಸಲು ಬಿಜೆಪಿ ದೆಹಲಿಯಲ್ಲಿ ಕುಳಿತು ಯೋಜನೆ ಹಾಕುತ್ತಿದೆ. ಇದು ಯಾವ ಮ್ಯಾಜಿಕ್‌ ಎಂದು ತಿಳಿಯುತ್ತಿಲ್ಲ. ಆದರೆ, ಅವರ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಕಾಂಗ್ರೆಸ್‌ ಸರ್ಕಾರ ಬದಲಾಗುವುದಿಲ್ಲ. ಈ ಬಾರಿ ಮೋದಿ ಪ್ರಧಾನಿ ಸ್ಥಾನ ಬಿಟ್ಟು ಹೋಗಬೇಕಾಗುತ್ತದೆ.
● ವೇಣುಗೋಪಾಲ್‌,ರಾಜ್ಯ ಕಾಂಗ್ರೆಸ್‌ಉಸ್ತುವಾರಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next