ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಅಡ್ಡಿಯಾಗಿರುವ ಸಿಆರ್‌ಝಡ್ ನಿಯಮವನ್ನು ಸಡಿಲಿಸುವ ಪ್ರಕ್ರಿಯೆ ಮುಂದಿನ 2 ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
2019ರ ಅಧಿಸೂಚನೆಯಂತೆ ಸಿಆರ್‌ಝಡ್ ವ್ಯಾಪ್ತಿ ಸಡಿಲಿಕೆಯ ಮ್ಯಾಪಿಂಗನ್ನು ಕ್ಲಿಯರೆನ್ಸ್‌ಗಾಗಿ ವಾರದೊಳಗೆ ಚೆನ್ನೈಯಲ್ಲಿರುವ ನೋಡಲ್ ಕಚೇರಿಗೆ ಕಳುಹಿಸಲಾಗುವುದು. ಒಪ್ಪಿಗೆ ಸಿಕ್ಕಿದ ಕೂಡಲೇ ಕೇಂದ್ರದ ಅನುಮತಿಗೆ ಕಳುಹಿಸಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ತಿಂಗಳೊ ಳಗೆ ಪೂರ್ಣಗೊಂಡು ಸಿಆರ್‌ಝಡ್ ನಿಯಮ ಸಡಿಲಿಕೆ ಆಗುವ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಶಾಸಕರು, ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಅವರು ತಿಳಿಸಿದರು.
ಕರ್ನಾಟಕದ ಕರಾವಳಿ ಗೋವಾಕ್ಕಿಂತಲೂ ಹೆಚ್ಚು ಸುಂದರ ಬೀಚ್‌ಗಳನ್ನು ಹೊಂದಿದ್ದು, ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ಗೋವಾ ಮಾದರಿಯಲ್ಲಿ ರಾಜ್ಯದ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವುದು ಮುಖ್ಯ ಮಂತ್ರಿಯವರ ಕನಸಾಗಿದೆ ಎಂದರು.
2011ರ ಸಿಆರ್‌ಝಡ್ ನಿಯಮದಂತೆ ಸಮುದ್ರ ತೀರದಿಂದ 500 ಮೀ. ವ್ಯಾಪ್ತಿಯ ಹೊರಗೆ ಶಾಶ್ವತ ನಿರ್ಮಾಣ ಕಾಮಗಾರಿ ಮಾಡಬಹುದಾಗಿತ್ತು. 2019ರ ಪ್ರಸ್ತಾವನೆಯಲ್ಲಿ ಸಮುದ್ರದ ಹೈ ಟೈಡ್‌ನಿಂದ 10 ಮೀ. ಬಿಟ್ಟು ತಾತ್ಕಾಲಿಕ ಕಟ್ಟಡಗಳ ರಚನೆ ಮಾಡಬಹುದಾಗಿದೆ. ನದಿ ತೀರದಿಂದ 50 ಮೀ. ದೂರದಲ್ಲಿ ಹಾಗೂ ದ್ವೀಪ ಪ್ರದೇಶಗ ಳಲ್ಲಿ 20 ಮೀ. ದೂರದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾದ ತಾತ್ಕಾಲಿಕ ಕಟ್ಟಡಗಳ ರಚನೆಗೆ ಅವಕಾಶ ಇದೆ. ಇದಕ್ಕೆ ಪೂರಕವಾಗಿ ಸಿದ್ಧಪಡಿ ಸಿರುವ ಮ್ಯಾಪಿಂಗ್‌ಗೆ ಅನುಮತಿ ಲಭಿಸಿದ ಬಳಿಕ ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದರು.
ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಸಿಆರ್‌ಝಡ್ ನಿಯಮ ಸಡಿಲಿಕೆಯಾದ ಕೂಡಲೇ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು. ತಣ್ಣೀರು ಬಾವಿ, ಪಣಂಬೂರು, ಸಸಿಹಿತ್ಲು ಬೀಚ್‌ಗಳ ಅಭಿವೃದ್ಧಿಗೆ ಆದ್ಯತೆಯ ನೆಲೆಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದರು.
ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ನುರಿತ ಗೈಡ್‌ಗಳನ್ನು ನೇಮಕ ಮಾಡಲು ಸರಕಾರ ನಿರ್ಧರಿಸಿದೆ. ಪಿಲಿಕುಳದಲ್ಲಿ ಆಗಬೇಕಾಗಿರುವ ಅಗತ್ಯ ಕ್ರಮಗಳ ಬಗ್ಗೆ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಆನಂದ ಸಿಂಗ್ ಹೇಳಿದರು. ಶಾಸಕರಾದ ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ, ಡಿಸಿಎಫ್ ದಿನೇಶ್ ಕುಮಾರ್ ಉಪಸ್ಥಿತರಿದ್ದರು.