ಕೋಲ್ಕತಾ: ಪಶ್ಚಿಮಬಂಗಾಳದಲ್ಲಿ ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಬೆಳವಣಿಗೆ ನಡುವೆಯೇ ಬಿಜೆಪಿ ಸಂಸದರೊಬ್ಬರ ಪತ್ನಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಸೇರ್ಪಡೆಯಾಗಿರುವ ಘಟನೆ ನಡೆದಿದೆ.
ಸೋಮವಾರ(ಡಿಸೆಂಬರ್ 21, 2020) ಸುಜಾತಾ ಮೊಂಡಲ್ ಖಾನ್ ಟಿಎಂಸಿಗೆ ಸೇರ್ಪಡೆಯಾದ ಬೆನ್ನಲ್ಲೇ ಬಂಗಾಳದ ಸಂಸದ, ಮೊಂಡಲ್ ಪತಿ ಸೌಮಿತ್ರ ಖಾನ್, ತಾನು ಪತ್ನಿಗೆ ವಿವಾಹ ವಿಚ್ಛೇದನ ನೋಟಿಸ್ ಕಳುಹಿಸುವುದಾಗಿ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.
ಸುಜಾತಾ ಖಾನ್ ಕೂಡಾ ಬಿಜೆಪಿ ಸದಸ್ಯರಾಗಿದ್ದು, ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಕೆಲವು ಸಮಾರಂಭಗಳಲ್ಲಿ ವೇದಿಕೆ ಹಂಚಿಕೊಂಡಿದ್ದರು. ನಾನು ಹಲವು ಅಪಾಯ ಎದುರಿಸಿ ಪತಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ನೆರವಾಗಿದ್ದದ್ದೆ, ಆದರೂ ನನ್ನ ಶ್ರಮಕ್ಕೆ ಗೌರವ ನೀಡಲಿಲ್ಲ. ನಾನು ಕೂಡಾ ಇನ್ನು ಉಸಿರಾಡಬೇಕು, ನನಗೆ ಗೌರವ ಬೇಕಾಗಿದೆ. ನನಗೆ ಒಳ್ಳೆಯ ಪಕ್ಷದ ಸಮರ್ಥ ನಾಯಕಿಯಾಗಬೇಕು. ಅದಕ್ಕಾಗಿ ನಾನು ದೀದಿ ಪಕ್ಷದಲ್ಲಿ ಕಾರ್ಯನಿರ್ವಹಿಸಲು ಬಯಸಿದ್ದೇನೆ ಎಂದು ಸುಜಾತಾ ಮೊಂಡಲ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಸೌಮಿತ್ರ ಖಾನ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಾಟುಲ್ಪುರ್ ವಿಧಾನಸಭಾ ಕ್ಷೇತ್ರದಿಂದ ಶಾಸಕಾಗಿ ಆಯ್ಕೆಯಾಗಿದ್ದರು. 2013ರಲ್ಲಿ ಖಾನ್ ಆಡಳಿತಾರೂಢ ಟಿಎಂಸಿಗೆ ಸೇರ್ಪಡೆಯಾಗಿದ್ದು, 2014ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಬಿಷ್ಣುಪುರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ಅಧ್ಯಕ್ಷರಾಗಿದ್ದರು.
ಇದನ್ನೂ ಓದಿ:ಯುಪಿ: ಯುವತಿ ಅಪಹರಣದ ನಂತರ ಮತಾಂತರಗೊಳಿಸಿ ವಿವಾಹಕ್ಕೆ ಯತ್ನ; ಇಬ್ಬರ ಬಂಧನ
2019ರಲ್ಲಿ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಖಾನ್ ವಿರುದ್ಧ ಹಣ ಸುಲಿಗೆಯ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಷೇತ್ರ ಪ್ರವೇಶಿಸದಂತೆ ಕೋಲ್ಕತಾ ಹೈಕೋರ್ಟ್ ನಿರ್ಬಂಧ ವಿಧಿಸಿತ್ತು. ಈ ಸಂದರ್ಭದಲ್ಲಿ ಪತಿ ಖಾನ್ ಪರವಾಗಿ ಪತ್ನಿ ಸುಜಾತಾ ಮೊಂಡಲ್ ಪ್ರಚಾರ ನಡೆಸಿದ್ದು, ಇದರ ಪರಿಣಾಮ ಖಾನ್ 78 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿರುವುದಾಗಿ ವರದಿ ವಿವರಿಸಿದೆ.