ಬೆಂಗಳೂರು: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣದ ರೂವಾರಿಗಳಾದ ಕದಿರೇಶ್ ಸಹೋದರಿ ಮಾಲಾ, ಆಕೆಯ ಪುತ್ರ ಅರುಳ್ ನನ್ನು ಹೆಚ್ಚಿನ ವಿಚಾರಣೆಗಾಗಿ ಜು.2ರವರೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಈ ಮಧ್ಯೆ ಆರೋಪಿಗಳು ರೇಖಾ ಕೊಲೆಗೆ 2020ರ ನವೆಂಬರ್‌ನಲ್ಲೇ ನಿರ್ಧರಿಸಿದ್ದು, ಜೈಲಿನಲ್ಲೇ ಸಂಚು ರೂಪಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮಾಲಾ ಮತ್ತು ಆಕೆಯ ಪುತ್ರ ಅರುಳ್ ಛಲವಾದಿಪಾಳ್ಯದಲ್ಲಿ ತಮ್ಮ ಅಸ್ಥಿತ್ವ ಮತ್ತು ಮುಂದಿನ ರಾಜಕೀಯ ಭವಿಷ್ಯ ಹಾಗೂ ಕಷ್ಟದ ಸಂದರ್ಭದಲ್ಲಿ ನೆರವಿಗೆ ಬಾರದ್ದರಿಂದ ಆಕ್ರೋಶಗೊಂಡು ಕೃತ್ಯ ಎಸಗಿದ್ದಾರೆ ಎಂಬುದು ಗೊತ್ತಾಗಿದೆ.
ಆದರೆ, ಆರೋಪಿಗಳಿಂದ ಕೃತ್ಯದಲ್ಲಿ ಭಾಗಿಯಾದ ಇತರರ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ನಾಲ್ಕು ದಿನಗಳಕಾಲ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಜೈಲಿನಲ್ಲೇ ಸಂಚು: ಮಾರ್ಚ್‌ನಲ್ಲಿ ಡಕಾಯಿತಿ ಪ್ರಕರಣದಲ್ಲಿ ಅರುಳ್ ಜೈಲು ಸೇರಿದ್ದ. ಆಗ ಮಾಲಾ, ರೇಖಾ ಬಳಿ ಪುತ್ರನ ಬಿಡುಗಡೆಗೆ ನೆರವು ನೀಡುವಂತೆ ಕೋರಿದ್ದಳು. ಆದರೆ, ರೇಖಾ ನಿರಾಕರಿಸಿದ್ದರು. ಜತೆಗೆ ಹೆಚ್ಚು ಒತ್ತಡ ಹಾಕಿದರೆ ಗಾಂಜಾ ದಂಧೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದಾಗಿ ರೇಖಾ ಮಾಲಾಗೆ ಎಚ್ಚರಿಕೆ ನೀಡಿದ್ದರು. ಈ ವಿಚಾರ ತಿಳಿದ ಅರುಳ್ ಜೈಲಿನಲ್ಲೇ ರೇಖಾ ಕೊಲೆಗೆ ಸಂಚು ರೂಪಿಸಿದ್ದ. ಅದೇ ವೇಳೆ ಬೇರೆ ಬೇರೆ ಪ್ರಕರಣಗಳಲ್ಲಿ ಜೈಲು ಸೇರಿದ್ದ ಪರಿಚಯಸ್ಥ ರೌಡಿಶೀಟರ್‌ಗಳ ಜತೆ ಈ ಬಗ್ಗೆ ಚರ್ಚಿಸಿದ್ದ. ಆದರೆ, ಎಲ್ಲರೂ ಪೀಟರ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಇದೇ ವೇಳೆ ಕದಿರೇಶ್ ಕೊಲೆ ಹಂತಕರಿಗೆ ರೇಖಾ ಸಹಕಾರ ನೀಡಿದ್ದರು ಎಂಬುದು ಗೊತ್ತಾಗಿತ್ತು. ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ಬಳಿಕ ಇದೇ ವಿಚಾರವನ್ನು ಪೀಟರ್‌ಗೆ ತಿಳಿಸಿ ಆತನನ್ನು ಪ್ರಚೋದಿಸಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದರು.
ನವೆಂಬರ್‌ನಲ್ಲೇ ಸಂಚು: ಕದಿರೇಶ್ ಕೊಲೆ ಬಳಿಕ ತನ್ನ ಕುಟುಂಬವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ರೇಖಾ ಹತ್ಯೆಗೆ ಮಾಲಾ ಮತ್ತು ಆಕೆಯ ಪುತ್ರ ಅರುಳ್ ನವೆಂಬರ್‌ನಲ್ಲೇ ಸಂಚು ರೂಪಿಸಿದ್ದರು. ಒಂದೆರಡು ಬಾರಿ ಹತ್ಯೆಗೆ ವಿಫಲ ಯತ್ನಿಸಿದ್ದರು. ಆದರೆ, ಸಾಧ್ಯವಾಗಿರಲಿಲ್ಲ. ಪುತ್ರ ಅರುಳ್ ಜೈಲಿನಿಂದ ಹೊರಗಡೆ ಬರುತ್ತಿದ್ದಂತೆ ಕೃತ್ಯಕ್ಕೆ ಸಂಚು ರೂಪಿಸಿದ್ದರು. ಪೀಟರ್, ಸ್ಟೀಫನ್, ಸೂರ್ಯ, ಅಜಯ್, ಪುರುಷೋತ್ತಮ್, ಕ್ಯಾಪ್ಟನ್ ಅಲಿಯಾಸ್ ಸೆಂಥಿಲ್ ಅಲಿಯಾಸ್ ಊಬಾಳನ್ ಜತೆ ತಾಯಿ-ಮಗ ಸಭೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.
ಕೃತ್ಯಕ್ಕೆ ನೀಲ ನಕ್ಷೆ ಸಿದ್ಧಪಡಿಸಿದ್ದಕ್ಯಾಪ್ಟನ್: ಕ್ಯಾಪ್ಟನ್ ಅಲಿಯಾಸ್ ಊಬಾಳನ್ ಮತ್ತು ಕದಿರೇಶ್ ಅತ್ಯಾಪ್ತ ಸ್ನೇಹಿತರು. ಶ್ರೀರಾಮಪುರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಈ ಮಧ್ಯೆ ಕದಿರೇಶ್ ಕೊಲೆಗೆ ರೇಖಾ ಕಾರಣ ಎಂಬ ಮಾಹಿತಿಯಿಂದ ಆಕ್ರೋಶಗೊಂಡು ಮಾಲಾ ಜತೆ ಕೃತ್ಯಕ್ಕೆ ಕೈ ಜೋಡಿಸಿದ್ದಾನೆ. ಬಳಿಕ ಮಾಲಾ, ಅರುಳ್ ಕೃತ್ಯಕ್ಕೆ ಸಂಚು ರೂಪಿಸಿದ್ದರೆ, ಕ್ಯಾಪ್ಟನ್ ಎಲ್ಲ ಆರೋಪಿಗಳಿಂದ ರೇಖಾ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ. ಬಳಿಕ ರೇಖಾಳನ್ನು ಯಾವ ರೀತಿ? ಎಲ್ಲಿ? ಹೇಗೆ ಕೊಲ್ಲಬೇಕು? ಎಂಬೆಲ್ಲ ನೀಲನಕ್ಷೆ ಸಿದ್ಧ ಪಡಿಸಿದ್ದ. ಸದ್ಯ ಈತ ತಲೆಮರೆಸಿಕೊಂಡಿದ್ದಾನೆ.
ಕೃತ್ಯ ಎಸಗಿದ ಬಳಿಕ ಭೇಟಿ: ಗುರುವಾರ ಬೆಳಗ್ಗೆ ರೇಖಾ ಕದಿರೇಶ್ ರನ್ನು ಹತ್ಯೆಗೈದ ಬಳಿಕ ಮಾಲಾ, ಅರುಳ್ ಹೊರತು ಪಡಿಸಿ ಇತರೆ ಎಲ್ಲ ಆರೋಪಿಗಳು ಪರಸ್ಪರ ಭೇಟಿಯಾಗಿದ್ದಾರೆ. ಕೊಲೆಗೈದು ವಾರ್ಡ್‌ನಿಂದ ಹೋಗುತ್ತಿದ್ದಂತೆ ಡಿಸೋಜಾ ತನ್ನ ಆಟೋದಲ್ಲಿ ಪೀಟರ್, ಸೂರ್ಯನನ್ನು ಕರೆದೊಯ್ದಿದ್ದಾನೆ. ಅನಂತರ ಇತರೆ ಆರೋಪಿಗಳು ನಗರದ ಕೆಲ ರೌಡಿಶೀಟರ್ ಗಳ ಮನೆ ಅಥವಾ ಅಡ್ಡಗಳಲ್ಲಿ ಆಶ್ರಯ ಪಡೆದು ನಂತರ ರಾತ್ರಿ ವೇಳೆಗೆ ಕಾಲ್ಕಿತ್ತಿದ್ದಾರೆ. ಈ ಸಂಬಂಧ ಆರೋಪಿಗಳಿಗೆ ಆಶ್ರಯ ನೀಡಿದವರು ಸೇರಿ ಇನ್ನು ನಾಲ್ಕೈದು ಮಂದಿಗಾಗಿ ಹುಡುಕಾಟ ನಡೆಯುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.