Advertisement

IPL; ಪಂತ್‌ ಇಲ್ಲದ ಡೆಲ್ಲಿ ಎದುರಾಳಿ: ಆರ್‌ಸಿಬಿಗೆ ಬೇಕಿದೆ 6ನೇ ಜಯ

12:49 AM May 12, 2024 | Team Udayavani |

ಬೆಂಗಳೂರು: ಕೊನೆಯ ಹಂತದಲ್ಲಿ ಗೆಲುವಿನ ಓಟ ಆರಂಭಿಸಿರುವ ಆರ್‌ಸಿಬಿಗೆ ಪ್ಲೇ ಆಫ್ ಸಾಧ್ಯವೇ ಎಂಬ ಪ್ರಶ್ನೆಗೆ ರವಿವಾರ ರಾತ್ರಿ ತವರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಮತ್ತೂಂದು ಹಂತದ ಉತ್ತರ ಲಭಿಸಲಿದೆ. 13ನೇ ಪಂದ್ಯವನ್ನು ಆಡಲು ಕಣಕ್ಕಿಳಿಯಲಿರುವ ಆರ್‌ಸಿಬಿ, ನಾಯಕ ರಿಷಭ್‌ ಪಂತ್‌ ಇಲ್ಲದ ಡೆಲ್ಲಿಯನ್ನು ಎದುರಿಸಲಿದೆ. ಪಂತ್‌ ಒಂದು ಪಂದ್ಯದ ನಿಷೇಧಕ್ಕೊಳಗಾಗಿರುವ ಕಾರಣ ಈ ಮಹತ್ವದ ಪಂದ್ಯದಿಂದ ಹೊರಗುಳಿಯುವ ಸಂಕಟಕ್ಕೆ ಸಿಲುಕಿದ್ದಾರೆ.

Advertisement

ಕಳೆದ ನಾಲ್ಕೂ ಪಂದ್ಯಗಳನ್ನು ಗೆದ್ದು ಓಟ ಬೆಳೆಸಿರುವ ಆರ್‌ಸಿಬಿ ಪ್ಲೇ ಆಫ್ ರೇಸ್‌ನಲ್ಲಿ ಉಳಿದುಕೊಂಡ ಕಾರಣ ಪಂದ್ಯಾವಳಿಯ ಕುತೂಹಕ ಹೆಚ್ಚಿದೆ. ಬಹುಶಃ ಎ. 21ರಂದು ಕೆಕೆಆರ್‌ ವಿರುದ್ಧ ಒಂದು ರನ್‌ ಅಂತರದ ಸೋಲು ಅನುಭವಿಸದೇ ಹೋದಲ್ಲಿ ಆರ್‌ಸಿಬಿಯ ಮುನ್ನಡೆ ಲೆಕ್ಕಾಚಾರ ಇನ್ನಷ್ಟು ಸರಳವಾಗಿರುತ್ತಿತ್ತು. ಈಗ ಉಳಿದೆರಡೂ ಪಂದ್ಯಗಳನ್ನು ಸಾಧ್ಯವಾದಷ್ಟು ದೊಡ್ಡ ಅಂತರದಿಂದ ಗೆಲ್ಲಬೇಕು, ಹಾಗೂ ಉಳಿದ ಕೆಲವು ತಂಡಗಳ ಸೋಲನ್ನೂ ಹಾರೈಸಬೇಕು. ಆಗ ಬೆಂಗಳೂರು ಟೀಮ್‌ಗೆ 14 ಅಂಕಗಳೊಂದಿಗೆ 4ನೇ ಸ್ಥಾನದ ಅವಕಾಶ ತೆರೆಯಲ್ಪಡುವ ಸಾಧ್ಯತೆ ಇದೆ. ಹೀಗಾಗಿ ಮೊದಲು ಡೆಲ್ಲಿಯನ್ನು ಮಣಿಸಬೇಕು.

ಕಳೆದ 4 ಪಂದ್ಯಗಳಲ್ಲಿ ಬಲಿಷ್ಠ ಹೈದರಾಬಾದ್‌ ಮತ್ತು ಪಂಜಾಬ್‌ ವಿರುದ್ಧ ಆರ್‌ಸಿಬಿ ಜಯ ಸಾಧಿಸಿತ್ತು. ಗುಜರಾತನ್ನು ಎರಡು ಸಲ ಕೆಡವಿತ್ತು. ಇದೀಗ ಡೆಲ್ಲಿ ಸವಾಲು ಕಾದಿದೆ. ಕೊನೆಯ ಎದುರಾಳಿ ಚೆನ್ನೈ. ಈ ಮುಖಾಮುಖೀ ಮೇ 18ರಂದು ಬೆಂಗಳೂರಿನಲ್ಲೇ ನಡೆಯಲಿದೆ.

ಕಾಡಲಿದೆ ಪಂತ್‌ ಗೈರು
ನಾಯಕ ರಿಷಭ್‌ ಪಂತ್‌ ನಿಷೇಧಕ್ಕೊಳಗಾದದ್ದು ಡೆಲ್ಲಿಗೆ ಎದುರಾದ ಭಾರೀ ಹಿನ್ನಡೆ ಎಂಬುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಆರ್‌ಸಿಬಿ ಇದರ ಲಾಭವನ್ನು ಎತ್ತಬೇಕಿದೆ. ಹೇಳಿ ಕೇಳಿ ಡೆಲ್ಲಿ ಅನಿಶ್ಚಿತ ಆಟಕ್ಕೆ ಹೆಸರುವಾಸಿಯಾದ ತಂಡ. ಮುಂಬೈ ವಿರುದ್ಧ 4ಕ್ಕೆ 257 ರನ್‌ ಪೇರಿಸಿದ ಡೆಲ್ಲಿ, ಬಳಿಕ ಕೆಕೆಆರ್‌ ವಿರುದ್ಧ 9ಕ್ಕೆ 153 ರನ್‌ ಮಾಡಿ ಕುಸಿತ ಅನುಭವಿಸಿತ್ತು.

ಡೆಲ್ಲಿ ತಂಡ ಜೇಕ್‌ ಫ್ರೆàಸರ್‌ ಮೆಕ್‌ಗರ್ಕ್‌, ಅಭಿಷೇಕ್‌ ಪೊರೆಲ್‌, ಟ್ರಿಸ್ಟನ್‌ ಸ್ಟಬ್ಸ್, ಸ್ಪಿನ್ನರ್‌ಗಳಾದ ಕುಲದೀಪ್‌ ಯಾದವ್‌ ಮತ್ತು ಅಕ್ಷರ್‌ ಪಟೇಲ್‌ ಅವರನ್ನು ಹೆಚ್ಚು ಅವಲಂಬಿಸಿದೆ. ಆರ್‌ಸಿಬಿಗಿಂತ 2 ಹೆಚ್ಚು ಅಂಕವನ್ನು ಹೊಂದಿರುವುದು ಡೆಲ್ಲಿಯ ಹೆಚ್ಚುಗಾರಿಕೆ.

Advertisement

ಮಳೆಯ ಮುನ್ಸೂಚನೆ
ಈ ನಿರ್ಣಾಯಕ ಪಂದ್ಯ ಸುಸೂತ್ರವಾಗಿ ಹಾಗೂ ರೋಚಕ ವಾಗಿ ಸಾಗಲು ಮಳೆರಾಯನ ಸಹಕಾರವೂ ಅಗತ್ಯ. ಕಳೆದ ಕೆಲವು ದಿನಗಳಿಂದ ಸಂಜೆ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ರವಿವಾರವೂ ಮಳೆಯ ಮುನ್ಸೂಚನೆ ಇದೆ.

ಆತ್ಮವಿಶ್ವಾಸದಲ್ಲಿ ಆರ್‌ಸಿಬಿ
ಆರ್‌ಸಿಬಿ ತುಂಬು ಆತ್ಮವಿಶ್ವಾಸದಲ್ಲಿದೆ. ಕೊಹ್ಲಿ, ಡು ಪ್ಲೆಸಿಸ್‌, ಜಾಕ್ಸ್‌, ಪಾಟಿದಾರ್‌, ಕಾರ್ತಿಕ್‌, ಗ್ರೀನ್‌ ಅವರೆಲ್ಲ ಸರಿಯಾದ ಹೊತ್ತಿನಲ್ಲಿ ಸಿಡಿಯುತ್ತಿದ್ದಾರೆ. ಒಂದು ವೇಳೆ ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಪಡೆದು ಬೃಹತ್‌ ಮೊತ್ತ ಪೇರಿಸಿದರೆ ಆರ್‌ಸಿಬಿಗೆ ಅದು ಖಂಡಿತವಾಗಿಯೂ ಬೋನಸ್‌ ಆಗಿ ಪರಿಣಮಿಸಲಿದೆ.
ಆರ್‌ಸಿಬಿ ಬೌಲಿಂಗ್‌ ಮೇಲೂ ಈಗ ಹೆಚ್ಚಿನ ನಂಬಿಕೆ ಇಡಬಹುದಾಗಿದೆ. 10 ದಿನಗಳ ಬ್ರೇಕ್‌ ಬಳಿಕ ಆಡಲಿಳಿದ ಸಿರಾಜ್‌, ಯಶ್‌ ದಯಾಳ್‌, ಎಡಗೈ ಸ್ಪಿನ್ನರ್‌ ಸ್ವಪ್ನಿಲ್‌ ಸಿಂಗ್‌, ಕಣ್‌ì ಶರ್ಮ ಲಯ ಕಂಡುಕೊಂಡಿದ್ದಾರೆ.

ಪ್ಲೇ ಆಫ್ಗೆ ಕಾದಿದೆ ಚೆನ್ನೈ ಸೂಪರ್‌ ಕಿಂಗ್ಸ್‌
ಚೆನ್ನೈ,: ಐಪಿಎಲ್‌ ಪ್ಲೇ ಆಫ್ ಬಾಗಿಲಲ್ಲಿ ನಿಂತಿರುವ ದ್ವಿತೀಯ ಸ್ಥಾನಿ ರಾಜಸ್ಥಾನ್‌ ರಾಯಲ್ಸ್‌ ಮತ್ತು 4ನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ರವಿವಾರ ನಿರ್ಣಾಯಕ ಸಮರದಲ್ಲಿ ಮುಖಾಮುಖೀ ಆಗಲಿವೆ.

ಈಗಿನ ಲೆಕ್ಕಾಚಾರದಂತೆ ರಾಜಸ್ಥಾನ್‌ ಗೆದ್ದರೆ ಪ್ಲೇ ಆಫ್ ಪ್ರವೇಶ ಅಧಿಕೃತಗೊಳ್ಳಲಿದೆ. ಹೈದರಾಬಾದ್‌ ಮತ್ತು ಡೆಲ್ಲಿ ವಿರುದ್ಧ ಸತತ ಸೋಲನುಭವಿಸಿದ್ದು ರಾಜಸ್ಥಾನ್‌ ಮುನ್ನಡೆಗೆ ಬ್ರೇಕ್‌ ಹಾಕಿತ್ತು.

ಚೆನ್ನೈ ಉಳಿದೆರಡೂ ಪಂದ್ಯಗಳನ್ನು ಗೆಲ್ಲ ಬೇಕಾದ ಸ್ಥಿತಿಯಲ್ಲಿದೆ. ಇದು ತವರಿನ ಪಂದ್ಯ ವಾದ ಕಾರಣ ಹಾಲಿ ಚಾಂಪಿಯನ್‌ ಸಿಎಸ್‌ಕೆ ಪೂರ್ಣ ಸಾಮರ್ಥ್ಯ ಪ್ರದರ್ಶಿಸಿ 7ನೇ ಗೆಲು ವನ್ನು ಕಾಣಬೇಕಿದೆ. ಆಗಷ್ಟೇ ಗಾಯಕ್ವಾಡ್‌ ಬಳಗಕ್ಕೆ ಉಳಿಗಾಲ. ಸೋತರೆ ಉಳಿದವರಿಗೆ ಲಾಭವಾಗಲಿದೆ.

ಶುಕ್ರವಾರವಷ್ಟೇ ಅಹ್ಮದಾಬಾದ್‌ನಲ್ಲಿ ಗುಜರಾತ್‌ಗೆ ಶರತಣಾಗಿ ಬಂದಿರುವ ಚೆನ್ನೈ ತವರಲ್ಲಿ ಗೆಲುವಿನ ಟ್ರ್ಯಾಕ್‌ ಏರಬೇಕಾದುದು ಅನಿವಾರ್ಯ. ಆದರೆ ರಹಾನೆ, ರಚಿನ್‌ ರವೀಂದ್ರ ಅವರ ಕಳಪೆ ಫಾರ್ಮ್ ಚೆನ್ನೈಗೆ ಮುಳುವಾಗಿ ಪರಿಣಮಿಸಿದೆ. ಬೌಲಿಂಗ್‌ ಕೂಡ ಘಾತಕವಾಗಿ ಕಾಣುತ್ತಿಲ್ಲ. ಗುಜರಾತ್‌ಗೆ 231 ರನ್‌ ಬಿಟ್ಟುಕೊಟ್ಟದ್ದೇ ಇದಕ್ಕೆ ಸಾಕ್ಷಿ. ಆದರೆ ಇದು ಹಗಲು ಪಂದ್ಯವಾದ್ದರಿಂದ ಚೆನ್ನೈ ಸ್ಪಿನ್ನರ್ಗೆ ಮಂಜಿನ ಕಾಟ ಎದುರಾಗುವ ಯಾವುದೇ ಸಾಧ್ಯತೆ ಇಲ್ಲ.

ರಾಜಸ್ಥಾನ್‌ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡರಲ್ಲೂ ಬಲಿಷ್ಠವಾಗಿರುವ ತಂಡ. ಪ್ಲೇ ಪ್ರವೇಶ ಇನ್ನು ವಿಳಂಬವಾಗಬಾರದು ಎಂಬ ಯೋಜನೆಯೊಂದಿಗೆ ಸ್ಯಾಮ್ಸನ್‌ ಪಡೆ ಹೋರಾಟ ನಡೆಸುವುದರಲ್ಲಿ ಅನುಮಾನವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next