ಹಾಸನ: ಸತ್ಯಾನ್ವೇಷಣೆಯಿಂದ ಜೀವನದಲ್ಲಿ ಸಂತೋಷ ಸಿಗುತ್ತದೆ. ದುಃಖ ಬಂದಾಗ ಕುಗ್ಗದೆ ಸಮಾನ ಮನಸ್ಥಿತಿ ರೂಢಿಸಿಕೊಳ್ಳಬೇಕು ಎಂದು ಶ್ರೀ ರಾಮಕೃಷ್ಣ ಆಶ್ರಮದ ಶಾಂತಿವ್ರತಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಹಾಸನದ ಶಾಂತಿನಗರ ವೃತ್ತದಲ್ಲಿರುವ ಗಹನ ಯೋಗ ಕೇಂದ್ರದಲ್ಲಿ ಪತಾಂಜಲಿ ಪರಿವಾರದಿಂದ ಹಮ್ಮಿಕೊಂಡಿದ್ದ “”ಆನಂದಮಯ ಜೀವನ ” ಕುರಿತು ಉಪನ್ಯಾಸ ನೀಡಿದ ಅವರು, ವೇದಶಾಸ್ತ್ರ ಹೇಳುವಂತೆ ಮೊದಲು ನಮ್ಮನ್ನು ನಾವು ಅರ್ಥ ಮಾಡಿಕೊಂಡರೆ ಅಲ್ಲೆ ಆನಂದ ಸಿಗುತ್ತದೆ. ಜಗತ್ತಿನ ಪ್ರತಿಯೊಬ್ಬರೂ ಆನಂದಮಯ ಜೀವನಕ್ಕಾಗಿ ಪರಿತಪಿಸುತ್ತಿದ್ದಾರೆ. ನಾವು ಮಾಡಿದ ಫಲ ನಾವು ಭೂಮಿ ಮೇಲೆಯೇ ಅನುಭವಿಸ ಬೇಕು. ಆಧ್ಯಾತ್ಮಿಕ, ಧರ್ಮ ಹಾಗೂ ಸಾಧುಸಂತರನ್ನು ಅರಸಿ ಹೋಗಿರುವುದರಿಂದ ಆನಂದ ಎಂಬುದು ಸಿಗುತ್ತದೆ ಎಂದರು.
ಸುಖ ಮತ್ತು ಮಜಕ್ಕಾಗಿ ಇಡೀ ಜೀವನವ ಮೀಸಲಿಡುತ್ತಿದ್ದೇವೆ. ಜೀವನ ನಿರ್ವಹಣೆಗಾಗಿ ಹಣದ ಅವಶ್ಯಕತೆ ಇದೆ. ಆದರೆ ಹಣ ಸಂಪಾದನೆಗೆ, ಜೀವನಕ್ಕಾಗಿ ನಾವು ಏನೇನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಯಾರು ಯೋಚನೆ ಮಾಡುತ್ತಿಲ್ಲ. ಜೀವನದಲ್ಲಿ ಆದರ್ಶವನ್ನು ಅಳವಡಿಸಿಕೊಳ್ಳಬೇಕು.
ಅಣ್ಣ ಹಜಾರೆ ತಮ್ಮ ಜೀವನಕ್ಕಾಗಿ ಹೋರಾಟ ಮಾಡದೆ ದೇಶಕ್ಕಾಗಿ ಹೋರಾಡುತ್ತಿದ್ದಾರೆ. ಅವರಲ್ಲಿನ ಕೆಲ ಅಂಶಗಳನ್ನಾದರೂ ನಾವು ಅಳವಡಿಸಿ ಕೊಳ್ಳ ಬೇಕು. ಮಜಾ, ಸುಖ, ದುಃಖ ಇಂದ್ರಿಯಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಸುಖದ ಜೊತೆಗೆ ದುಃಖ ಕಟ್ಟಿಟ್ಟ ಬುತ್ತಿ. ಒಂದನ್ನು ಪಡೆದರೇ ಮತ್ತೂಂದನ್ನು ಅನುಭವಿಸಲೇಬೇಕು. ಎರಡು ಜೊತೆ ಜೊತೆ ಯಲ್ಲಿಯೇ ಹಿಂಬಾಲಿಸುತ್ತವೆ ಎಂದು ಹೇಳಿದರು.
ಆನಂದವನ್ನು ನಮ್ಮಲ್ಲೆ ಇಟ್ಟುಕೊಂಡು ಜಗತ್ತಿನ ಮೂಲೆ ಮೂಲೆಗಳಲ್ಲಿ ಹುಡುಕಾಟ ನಡೆಸುವುದು ವ್ಯರ್ಥದ ಕೆಲಸ. ಭೂಮಿ ಮೇಲೆ ಹುಟ್ಟಿದವರು ಎಂದಾದರೂ ಸಾಯಲೇಬೇಕು. ನಾವು ಮಾಡುತ್ತಿರುವುದು ತಪ್ಪು ಎಂದು ತಿಳಿದಿದ್ದರೂ ಅಜ್ಞಾನದಿಂದ ಮತ್ತೆ ಮತ್ತೆ ಮರುಕಳಿಸುತ್ತಿರುತ್ತೇವೆ. ವೇದ ಶಾಸ್ತ್ರ ಹೇಳುವಂತೆ ಮೊದಲು “ನಿನ್ನನ್ನು ನೀ ಅರ್ಥ ಮಾಡಿಕೋ… ಅಲ್ಲೆ ಆನಂದವಿದೆ’ ಸುಖ ಬಂದಾಗ ಹಿಗ್ಗದೆ, ಸತ್ಯಾನ್ವೇಷಣೆ ಮಾಡುವವರಿಗೆ ಜೀವನದಲ್ಲಿ ಸಂತೋಷ ಸಿಗುತ್ತದೆ. ದುಃಖ ಬಂದಾಗ ಕುಗ್ಗದೆ ಸಮಾನ ಮನಸ್ಥಿತಿ ರೂಢಿಸಿಕೊಳ್ಳಬೇಕು ಇರಬೇಕು ಎಂದು ಸಲಹೆ ನೀಡಿದರು.
ಭಾರತ್ ಸ್ವಾಭಿಮಾನ್ ಟ್ರಸ್ಟ್ ಜಿಲ್ಲಾ ಪ್ರಭಾರಿ ಶೇಷಪ್ಪ, ಹಿರಿಯ ಸದಸ್ಯ ರಂಗನಾಥ್, ನಗರ ಸಹ ಪ್ರಭಾರಿ ಗಿರೀಶ್, ಮಂಜುನಾಥ್, ಪರಮೇಶ್, ಜಿಲ್ಲಾ ಪ್ರಭಾರಿ ಹೇಮಲತಾ, ಹೇಮ ಪರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.