ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿ ಅರಣ್ಯ ಭೂಮಿ ಸಾಗುವಳಿ ಹಕ್ಕಿಗಾಗಿ ಸಲ್ಲಿಸಿದ ಬಹುತೇಕರ ಅರಣ್ಯವಾಸಿಗಳ ಅರ್ಜಿ ಮಂಜೂರಿ ಪ್ರಕ್ರಿಯೆಯಲ್ಲಿ ತಿರಸ್ಕೃತಗೊಂಡಿದ್ದು, ಅವುಗಳ ನ್ಯಾಯಕ್ಕಾಗಿ ಸಾಗರದಿಂದ ಮೇಲ್ಮನವಿ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಜುಲೈ 3 ರ ಸೋಮವಾರ ಮುಂಜಾನೆ11 ಗಂಟೆಗೆ ಸಾಗರದ ಉಪ ವಿಭಾಗ ಕಚೇರಿ ಆವಾರದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ, ಈ ಅಭಿಯಾನ ಮಾಡಲಾಗುತ್ತದೆ ಎಂದು ವಿವರಿಸಿದ್ದಾರೆ.
ಸಾಗರ ತಾಲೂಕಿನಾದ್ಯಂತ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳು ಸಲ್ಲಿಸಿದ ಅರ್ಜಿ ಕಾನೂನು ಬಾಹಿರ ಮತ್ತು ಕಾನೂನಿಗೆ ವ್ಯತಿರಿಕ್ತವಾಗಿ ತೀರಸ್ಕರಿಸಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸಲಾಗುತ್ತದೆ. ಅದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮತ್ತು ಅಧ್ಯಕ್ಷರು ಉಪವಿಭಾಗ ಅರಣ್ಯ ಹಕ್ಕು ಸಮಿತಿ ಅವರೊಂದಿಗೆ ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ ವಿಧಾನ ಅನುಸರಿಸದೇ ಅರ್ಜಿಗಳನ್ನು ತಿರಸ್ಕೃತಗೊಂಡಿದ್ದರ ಬಗೆಯೂ ಚರ್ಚಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆ ವಿವಿಧ ಗ್ರಾಮ ಅರಣ್ಯ ಹಕ್ಕು ಸಮಿತಿಗಳಲ್ಲಿ ಬುಡಕಟ್ಟು- 4,577, ಪಾರಂಪರಿಕ- 90,854 ಹಾಗೂ ಸಮೂಹ ಉದ್ದೇಶಕ್ಕಾಗಿ-1,644 ಹೀಗೆ ಒಟ್ಟು 97,075 ಅರಣ್ಯವಾಸಿಗಳು ಅರ್ಜಿ ಸಲ್ಲಿಸಿದ್ದು ಇದೆ. ಅವುಗಳಲ್ಲಿ ಬುಡಕಟ್ಟು 1,970, ಪಾರಂಪರಿಕ 439, ಸಮೂಹ ಉದ್ದೇಶಕ್ಕೆ 35 ಹೀಗೆ ಒಟ್ಟು 2,444 ಅರ್ಜಿಗಳಿಗೆ ಮಾನ್ಯತೆ ಸಿಕ್ಕಿರುವುದಾಗಿ ಹಾಗೂ ಬುಡಕಟ್ಟು ಪಂಗಡ1,755 ಪಾರಂಪರಿಕ 19,917 ಸಮೂಹ ಉದ್ದೇಶ 244 ಹೀಗೆ ಒಟ್ಟು 21,916 ಅರ್ಜಿಗಳು ತಿರಸ್ಕಾರವಾಗಿದೆ. 2021 ರ ಮೇ ಅಂಕೆ-ಸಂಖ್ಯೆ ಪ್ರಕಾರ ಶೇ. 22.57 ರಷ್ಟು ಅರ್ಜಿ ತಿರಸ್ಕಾರವಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಆಸಕ್ತ ಅರಣ್ಯವಾಸಿಗಳು ಜುಲೈ 3, ಸೋಮವಾರ ಮುಂಜಾನೆ 10 ಗಂಟೆಗೆ ಪೋಲಿಸ್ ಠಾಣೆ ಸರ್ಕಲ್, ಸಾಗರ ಬಳಿ ಸೇರಬೇಕು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.