ಹೊಸದಿಲ್ಲಿ: ವಿಮಾನಯಾನ ನಿಯಂತ್ರಕ ಡಿಜಿಸಿಎ ಸೋಮವಾರ ವಿಮಾನಯಾನ ಸಂಸ್ಥೆ ಗೋ ಫರ್ಸ್ಟ್‌ಗೆ “ಸೇವೆಯ ಕಾರ್ಯಾಚರಣೆಯನ್ನು ಸುರಕ್ಷಿತ, ದಕ್ಷ ಮತ್ತು ವಿಶ್ವಾಸಾರ್ಹ ರೀತಿಯಲ್ಲಿ ಮುಂದುವರಿಸಲು ವಿಫಲವಾದ ಕಾರಣಕ್ಕಾಗಿ” ಶೋಕಾಸ್ ನೋಟಿಸ್ ನೀಡಿದೆ. ಅಲ್ಲದೆ ಮುಂದಿನ ಆದೇಶದವರೆಗೆ ನೇರವಾಗಿ ಅಥವಾ ಪರೋಕ್ಷವಾಗಿ ಟಿಕೆಟ್ ಬುಕ್ಕಿಂಗ್ ಮತ್ತು ಮಾರಾಟವನ್ನು ತಕ್ಷಣವೇ ನಿಲ್ಲಿಸುವಂತೆ ನಿರ್ದೇಶಿಸಿದೆ.
ಈ ಸೂಚನೆಯನ್ನು ಸ್ವೀಕರಿಸಿದ 15 ದಿನಗಳೊಳಗೆ ತಮ್ಮ ಉತ್ತರವನ್ನು ಸಲ್ಲಿಸಲು ಗೋ ಫರ್ಸ್ಟ್ ನಿರ್ವಾಹಕರನ್ನು ಕೇಳಲಾಗಿದೆ. ಅದರ ಆಧಾರದ ಮೇಲೆ ಅವರ ಏರ್ ಆಪರೇಟರ್‌ಗಳ ಪ್ರಮಾಣಪತ್ರವನ್ನು (ಎಒಸಿ) ಮುಂದುವರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ.
ಇದಕ್ಕೂ ಮುನ್ನ ಮೇ 15ರವರೆಗೆ ಟಿಕೆಟ್ ಮಾರಾಟವನ್ನು ಸ್ಥಗಿತಗೊಳಿಸಿದ್ದ ಏರ್‌ಲೈನ್ ಮೇ 12ರವರೆಗೆ ವಿಮಾನ ಹಾರಾಟವನ್ನು ರದ್ದುಗೊಳಿಸಿತ್ತು.
ವಾಡಿಯಾ ಗ್ರೂಪ್ ಮಾಲೀಕತ್ವದ ಏರ್‌ಲೈನ್, ಹಿಂದೆ ಗೋ ಏರ್ ಎಂದು ಕರೆಯಲಾಗುತ್ತಿತ್ತು. ಇದೀಗ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮುಂದೆ ಸ್ವಯಂಪ್ರೇರಿತ ದಿವಾಳಿತನ ಪರಿಹಾರ ಪ್ರಕ್ರಿಯೆಗಾಗಿ ಮನವಿ ಸಲ್ಲಿಸಿದೆ. ಅದು ತನ್ನ ಆದೇಶವನ್ನು ಕಾಯ್ದಿರಿಸಿದೆ.