Advertisement

ರೆಗ್ಯುಲರ್‌ ಸಂಚಾರ ಮುಂದಿನ ತಿಂಗಳು?

10:05 PM May 16, 2020 | Team Udayavani |

ಉಡುಪಿ: ಜಿಲ್ಲಾಡಳಿತ ಬಸ್ಸುಗಳನ್ನು ಓಡಿಸಲು ಅನುವು ಮಾಡಿಕೊಟ್ಟರೂ ಪ್ರಯಾಣಿಕರ ಕೊರತೆ ಇರುವುದರಿಂದ ಆರಂಭಗೊಂಡ ಬೆರಳೆಣಿಕೆ ಬಸ್ಸುಗಳು ಸಂಚರಿಸುತ್ತಿದ್ದು ಹೊಸ ಬಸ್ಸುಗಳು ರಸ್ತೆಗಿಳಿದಿಲ್ಲ.

Advertisement

ಕೆಎಸ್ಸಾರ್ಟಿಸಿ ಬಸ್ಸುಗಳು ಉಡುಪಿ- ಕುಂದಾಪುರ, ಕುಂದಾಪುರ-ಬೈಂದೂರು, ಉಡುಪಿ- ಜಿಲ್ಲಾಧಿಕಾರಿ ಕಚೇರಿ ನಡುವೆ ಸಂಚರಿಸುತ್ತಿವೆ. ಇದೀಗ ಉಡುಪಿ- ಹೆಜಮಾಡಿ ನಡುವೆ ಓಡಾಡಿವೆ.

ಪ್ರಯಾಣಿಕರಿಲ್ಲದಿದ್ದರೆ ಬಸ್ಸುಗಳನ್ನು ಓಡಿಸಿಯೂ ಪ್ರಯೋಜನವಿಲ್ಲ ಎಂದು ಕೆಎಸ್ಸಾರ್ಟಿಸಿ ಉಡುಪಿ ಡಿಪೋ ಮೆನೇಜರ್‌ ಉದಯಕುಮಾರ್‌ ಶೆಟ್ಟಿ ತಿಳಿಸಿದರು.

ಕರಾವಳಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್‌ ಮಾಲಕತ್ವದ ಭಾರತೀ ಮೋಟಾರ್ ಉಡುಪಿ- ಕುಂದಾಪುರ ನಡುವೆ ಮಾತ್ರ ಸಂಚರಿಸುತ್ತಿವೆ. “ಕೊಲ್ಲೂರಿಗೆ ನಾವು ಬಸ್ಸುಗಳನ್ನು ಓಡಿಸಬಹುದಾದರೂ ಕೊಲ್ಲೂರು ದೇವಸ್ಥಾನ ತೆರೆಯದಿದ್ದರೆ ಅಲ್ಲಿಗೆ ಯಾರೂ ಹೋಗುವುದಿಲ್ಲ. ಹೀಗಾಗಿ ನಾವು ಅಲ್ಲಿಗೆ ಬಸ್‌ಗಳನ್ನು ಓಡಿಸುತ್ತಿಲ್ಲ. ಇನ್ನು ಉಡುಪಿ-ಕುಂದಾಪುರ ನಡುವೆಯೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರಿಲ್ಲ’ ಎಂದು ರಾಘವೇಂದ್ರ ಭಟ್‌ ತಿಳಿಸಿದರು.

ಕೋವಿಡ್ 19 ಹಿನ್ನೆಲೆಯಲ್ಲಿ ಮಾಸ್ಕ್ ಧಾರಣೆ ಕಡ್ಡಾಯವಾಗಿದೆ. ಸ್ಯಾನಿಟೈಸರ್‌ ಬಳಸುತ್ತಿದ್ದಾರೆ. ಪ್ರಯಾಣಿಕರು ಕಡಿಮೆ ಇರುವುದರಿಂದ ಸಹಜವಾಗಿಯೇ ಸಾಮಾಜಿಕ ಅಂತರ ಕಾಪಾಡಲಾಗುತ್ತಿದೆ.

Advertisement

ಬಸ್ಸುಗಳನ್ನು ರಸ್ತೆಗಿಳಿಸಲು ಬಸ್‌ ಮಾಲಕರು ಹಿಂದೇಟು ಹಾಕಲು ಇನ್ನೊಂದು ಕಾರಣ ಹಣಕಾಸು ಸಂಸ್ಥೆಗಳು ಕಂತುಗಳನ್ನು ಕಟ್ಟಲು ಒತ್ತಾಯಿಸುವುದು.

ಬಸ್ಸುಗಳು ನಷ್ಟದಲ್ಲಿ ಓಡುತ್ತಿರುವುದರಿಂದ ಈ ಮಾಸಾಂತ್ಯದ ವರೆಗೂ ಪರಿಸ್ಥಿತಿ ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ.

“ಬೇಡಿಕೆ ಈಡೇರಿಸಲು ಮೀನಮೇಷ’
ಸರಂಡರ್‌ ಮಾಡದ ಬಸ್ಸುಗಳಿಗೆ ಎಪ್ರಿಲ್‌, ಮೇ, ಜೂನ್‌ ತಿಂಗಳ ತೆರಿಗೆಯನ್ನು ರಿಯಾಯಿತಿ ಮಾಡಲು ಕೋರಿದ್ದೇವೆ. ಸರಂಡರ್‌ ಮಾಡದ ಇರುವುದು ಕೇವಲ ಶೇ.15ರಷ್ಟು ಬಸ್ಸುಗಳು. ಒಡಿಶಾ, ಪಂಜಾಬ್‌ನಲ್ಲಿ ಎರಡು ಪಟ್ಟು ದರ ಹೆಚ್ಚಳ ಮಾಡಲು ಅನುಮತಿ ಕೊಟ್ಟಿದ್ದಾರೆ. ಜನರನ್ನು ಕಡಿಮೆ ಸಂಖ್ಯೆಯಲ್ಲಿ ಕರೆದೊಯ್ಯಬೇಕಾದರೆ ಈಗಿನ ದರದಲ್ಲಿ ಸಾಧ್ಯವಿಲ್ಲ. ನಾವು ಒಂದೂವರೆ ಪಟ್ಟು ಹೆಚ್ಚಿಗೆ ಮಾಡಲು ಕೇಳಿದ್ದೇವೆ. ಜುಲೈ, ಆಗಸ್ಟ್‌, ಸೆಪ್ಟಂಬರ್‌ ತಿಂಗಳ ತೆರಿಗೆಯನ್ನು ವರ್ಷಾಂತ್ಯಕ್ಕೆ ಪಾವತಿಸುವುದಾಗಿ ತಿಳಿಸಿದ್ದೇವೆ.

ಎರಡು ತಿಂಗಳ ವಿಮೆ ಸೌಲಭ್ಯವನ್ನು ವಿಸ್ತರಿಸಲು ಕೇಂದ್ರ ಸರಕಾರಕ್ಕೆ ಕೇಳಿದ್ದೇವೆ. ಇವೆಲ್ಲದಕ್ಕೂ ತಾತ್ವಿಕ ಒಪ್ಪಿಗೆ ದೊರಕಿದೆಯೇ ವಿನಾ ಆದೇಶವಿನ್ನೂ ಬಂದಿಲ್ಲ. ಪ್ರಾಯಃ ಮುಂದಿನ ತಿಂಗಳು ಬಸ್ಸುಗಳನ್ನು ಆರಂಭಿಸಬಹುದು ಎಂಬ ಅಭಿಪ್ರಾಯ ಉಡುಪಿ ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ಕೆ. ಸುರೇಶ ನಾಯಕ್‌ ಅವರದು.

Advertisement

Udayavani is now on Telegram. Click here to join our channel and stay updated with the latest news.

Next