Advertisement

Mangaluru ಶಾಲಾ ಮಕ್ಕಳ ಸಾಗಾಟ ವಾಹನಗಳಿಗೆ “ಸ್ಕೂಲ್‌ ಕ್ಯಾಬ್‌’ ನೋಂದಣಿ ಕಡ್ಡಾಯ

12:23 AM Jul 11, 2024 | Team Udayavani |

ಮಂಗಳೂರು: ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಮತ್ತು ವಾಪಸ್‌ ಮನೆಗೆ ಬಿಡುವ ಖಾಸಗಿ ವಾಹನಗಳಲ್ಲಿ ಮಕ್ಕಳ ಸುರಕ್ಷೆಗೆ ಸಂಬಂಧಿಸಿ ಸರಕಾರ ಮಹತ್ವದ ನಿರ್ಧಾರ ವೊಂದನ್ನು ತೆಗೆದುಕೊಂಡಿದೆ. ಮಕ್ಕಳನ್ನು ಕೊಂಡೊಯ್ಯುವ ವಾಹನಗಳು ಇನ್ಮುಂದೆ ಸಾರಿಗೆ ಪ್ರಾಧಿಕಾರದಲ್ಲಿ “ಸ್ಕೂಲ್‌ ಕ್ಯಾಬ್‌’ ಎಂದು ನೋಂದಣಿ ಮಾಡುವುದು ಕಡ್ಡಾಯ.

Advertisement

ಕರ್ನಾಟಕ ಮೋಟಾರು ವಾಹನ (ಶಾಲಾ ಮಕ್ಕಳ ಸಾಗಾಟ ಮಾಡುವ ವಾಹನಗಳಿಗೆ ನಿಯಮಾವಳಿ) ಕಾಯ್ದೆ 2012 (ತಿದ್ದುಪಡಿ) ಕಾಯ್ದೆ 2024ರಡಿ ಈ ಹೊಸ ಆದೇಶ ಹೊರಡಿಸಲಾಗಿದೆ. ವಾಹನದ ಮಾಲಕರು ಅಥವಾ ಚಾಲಕರು ಶಾಲಾ ಮುಖ್ಯಸ್ಥರಿಂದ ವಾಹನದ ವಿವರ, ಚಾಲಕರ ವಿವರ ಮತ್ತು ವಿದ್ಯಾರ್ಥಿಗಳ ವಿವರವನ್ನು ಒಳಗೊಂಡ ಪತ್ರವನ್ನು ಪಡೆದು ನೋಂದಣಿ ಪ್ರಾಧಿಕಾರದ ಮುಂದೆ ಹಾಜರುಪಡಿಸಿ, “ಸ್ಕೂಲ್‌ ಕ್ಯಾಬ್‌’ ಎಂದು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ತಿದ್ದುಪಡಿ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆ “ಕಾಂಟ್ರಾಕ್ಟ್ ಕ್ಯಾರೇಜ್‌’
ಕರ್ನಾಟಕ ಮೋಟಾರು ವಾಹನ (ಶಾಲಾ ಮಕ್ಕಳ ಸಾಗಾಟ ಮಾಡುವ ವಾಹನಗಳಿಗೆ ನಿಯಮಾವಳಿ) ಕಾಯ್ದೆ 2012ರ ಸೆಕ್ಷನ್‌ 74ರ ಅಡಿಯಲ್ಲಿ ನೀಡಲಾದ “ಕಾಂಟ್ರಾಕ್ಟ್ ಕ್ಯಾರೇಜ್‌ ಪರ್ಮಿಟ್‌’ ಹೊಂದಿದ್ದರೆ ಅಂತಹ ವಾಹನಗಳನ್ನು ಶಾಲಾ ಮಕ್ಕಳನ್ನು ಸಾಗಿಸಲು ಬಳಸಬಹುದಾಗಿತ್ತು. ಆದರೆ “ಬಿಳಿ ನಂಬರ್‌ ಪ್ಲೇಟ್‌’ ಹೊಂದಿರುವ ಖಾಸಗಿ ವಾಹನಗಳಲ್ಲೂ ಮಕ್ಕಳನ್ನು ಸಾಗಿಸುವುದು, ಮಕ್ಕಳ ಸುರಕ್ಷೆಗೆ ಆದ್ಯತೆ ನೀಡದಿರುವುದು ಮೊದಲಾದ ಕಾರಣಗಳಿಂದಾಗಿ ಸಾಕಷ್ಟು ಅವಘಡ ಗಳು ಸಂಭವಿಸುತ್ತಿದ್ದವು. ಆದ್ದರಿಂದ ಸರಕಾರ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ.

“ಸ್ಕೂಲ್‌ ಕ್ಯಾಬ್‌ ಸುರಕ್ಷಾ ಸಮಿತಿ’ ಕಡ್ಡಾಯ
ಕಾಯ್ದೆಯಡಿ ಪ್ರತಿ ಶಾಲೆಯಲ್ಲೂ ಸ್ಕೂಲ್‌ ಕ್ಯಾಬ್‌ ಸುರಕ್ಷಾ ರಚನೆ ಕಡ್ಡಾಯ ಮಾಡಲಾಗಿದೆ. ಮಕ್ಕಳ ಸುರಕ್ಷೆ ಕುರಿತಂತೆ ನಿಗಾ ವಹಿಸುವ ಜವಾಬ್ದಾರಿ ಸಮಿತಿಯದ್ದಾಗಿದೆ. ವಾಹನದ ಬಾಡಿಗೆ, ನಿಲುಗಡೆ ಸ್ಥಳಗಳನ್ನು ಸಮಿತಿಯೇ ಅಂತಿಮಪಡಿಸಬೇಕು. ಸಮಿತಿಯಲ್ಲಿ ವಾಹನಗಳ ಚಾಲಕ ಅಥವಾ ಮಾಲಕರು ಮತ್ತು ಹೆತ್ತವರು ಇರುವುದು ಕಡ್ಡಾಯ. ವಾಹನದ ನೋಂದಣಿ ಪ್ರಮಾಣಪತ್ರ, ಫಿಟೆ°ಸ್‌ ಸರ್ಟಿಫಿಕೆಟ್‌, ವಿಮೆ, ಪರ್ಮಿಟ್‌, ಮಾಲಿನ್ಯ ಪ್ರಮಾಣಪತ್ರ, ಚಾಲಕನ ಚಾಲನಾ ಪರವಾನಿಗೆ, ಅಗ್ನಿ ಶಮನ ಸಿಲಿಂಡರ್‌, ಪ್ರಥಮ ಚಿಕಿತ್ಸೆ ಕಿಟ್‌ ಸಹಿತ ಎಲ್ಲ ರೀತಿಯ ಸುರಕ್ಷಾ ಕ್ರಮಗಳು ಇರುವುದನ್ನು ಸಮಿತಿ ಖಾತರಿಪಡಿಸಿಕೊಳ್ಳಬೇಕು.

ಕೆಲವು ನಿಬಂಧನೆಗಳು
– ವಾಹನದಲ್ಲಿ ಗರಿಷ್ಠ ವೇಗ 40 ಕಿ.ಮೀ.ಗೆ ಅನ್ವಯಿಸುವಂತೆ ಸ್ಪೀಡ್‌ ಗವರ್ನರ್‌ ಅಳವಡಿಸಬೇಕು.
– 15 ವರ್ಷಗಳಿಗಿಂತ ಹಳೆಯ ವಾಹನಗಳನ್ನು ಉಪಯೋಗಿಸುವಂತಿಲ್ಲ.
– ವಾಹನ ಹಳದಿ ಬಣ್ಣ ಹೊಂದಿರಬೇಕು. ಜತೆಗೆ ಸ್ಕೂಲ್‌ ಕ್ಯಾಬ್‌- ಶಾಲಾ ವಾಹನ ಎಂದು ಬರೆದಿರಬೇಕು.
– ವಾಹನದ ಆಸನ ವ್ಯವಸ್ಥೆಯನ್ನು ಬದಲಾಯಿಸುವಂತಿಲ್ಲ.
– ಸಂಚರಿಸುವ ಮಕ್ಕಳ ಸಂಪೂರ್ಣ ವಿವರ ವಾಹನದಲ್ಲಿ ಇರಬೇಕು.
– 12 ವರ್ಷಗಳ ಕೆಳಗಿನ ಮಕ್ಕಳಾಗಿದ್ದರೆ ಆಸನ ಸಾಮರ್ಥ್ಯದ 1.5 ಪಟ್ಟು ಮಕ್ಕಳನ್ನು ಕರೆದುಕೊಂಡು ಹೋಗಬಹುದು.

Advertisement

ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ!
ಹೊಸ ಆದೇಶದಂತೆ ಒಂದು ಬಾರಿ “ಸ್ಕೂಲ್‌ ಕ್ಯಾಬ್‌’ ಆಗಿ ನೋಂದಣಿಯಾದ ವಾಹನವನ್ನು ವಿದ್ಯಾರ್ಥಿಗಳ ಸಾಗಾಟ ಹೊರತು ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ವಾಹನದ ಬಣ್ಣವನ್ನೂ ಬದಲಾಯಿಸಬೇಕಾಗಿರುವುದರಿಂದ ರಜಾ ದಿನಗಳಲ್ಲಿ ಬೇರೆ ಬಾಡಿಗೆಯನ್ನೂ ಮಾಡುವಂತಿಲ್ಲ. ಹಾಗಾಗಿ ಎಷ್ಟು ಮಂದಿ “ಸ್ಕೂಲ್‌ ಕ್ಯಾಬ್‌’ ಆಗಿ ಪರಿವರ್ತಿಸಲು ಮುಂದೆ ಬರುತ್ತಾರೆ ಎಂದು ಮುಂದಿನ ದಿನಗಳಲ್ಲಷ್ಟೇ ಗೊತ್ತಾಗಲಿದೆ ಎನ್ನುತ್ತಾರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್‌ ಮಲ್ಲಾಡ್‌.

ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳನ್ನು ಇನ್ಮುಂದೆ “ಸ್ಕೂಲ್‌ ಕ್ಯಾಬ್‌’ ಎಂದು ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಈ ಬಗ್ಗೆ ಸರಕಾರ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಆದೇಶ ನೀಡಿದೆ. ಈಬಗ್ಗೆ ಶೀಘ್ರ ಶಾಲಾ ಮುಖ್ಯಸ್ಥರು, ಶಾಲಾ ಮಕ್ಕಳ ವಾಹನ ಚಾಲಕರ ಸಂಘದ ಪದಾಧಿಕಾರಿಗಳ ಸಭೆ ನಡೆಸಿ ಸೂಕ್ತ ಸೂಚನೆಗಳನ್ನು ನೀಡಲಾಗುವುದು.
– ಶ್ರೀಧರ್‌ ಮಲ್ಲಾಡ್‌
ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಂಗಳೂರು.

– ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next