ಬಳ್ಳಾರಿ: ಪ್ರಸಕ್ತ ಸಾಲಿನಲ್ಲಿ ಕನಿಷ್ಠ ಬೆಂಬಲ ಯೋಜನೆ ಅಡಿ ಭತ್ತ ಖರೀದಿಗೆ ನ. 30ರಿಂದ ಆರಂಭವಾಗಲಿರುವ ನೋಂದಣಿ ಪ್ರಕ್ರಿಯೆ ಡಿ. 30ರವರೆಗೆ ನಡೆಯಲಿದೆ. ರೈತರಿಂದ ಪ್ರತಿ ಎಕರೆಗೆ 16 ಕ್ವಿಂಟಲ್‌ಗಳಂತೆ ಗರಿಷ್ಠ 40 ಕ್ವಿಂಟಲ್‌ಗಳನ್ನು ಖರೀದಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಸಕ್ತ 2020-21ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆ ಕಾರ್ಯಾಚರಣೆಗೆ ಸಂಬಂಧಿ ಸಿದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಭತ್ತ ಖರೀದಿಸಲು ಜಿಲ್ಲೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವನ್ನು ಸಂಗ್ರಹಣಾಮಂಡಳಿ ಏಜೆನ್ಸಿಯನ್ನಾಗಿ ನೇಮಿಸಲಾಗಿದ್ದು, ಬಳ್ಳಾರಿ, ಸಿರಗುಪ್ಪ, ಕಂಪ್ಲಿಗಳಲ್ಲಿ ಖರೀದಿ ಕೇಂದ್ರಗಳನ್ನು ತೆಗೆಯಲಾಗುತ್ತದೆ. ರೈತರು ಖರೀದಿ ಕೇಂದ್ರಗಳಿಗೆ ಬಂದು ಅಲ್ಲಿಯೇ ಆನ್‌ಲೈನ್‌ಲ್ಲಿಯೇ ನೋಂದಣಿ ಮಾಡಬೇಕು ಎಂದ ಎಡಿಸಿ ಮಂಜುನಾಥ ಅವರು ಕಳೆದ ವರ್ಷ 47 ಸಾವಿರ ಕ್ವಿಂಟಲ್ ಭತ್ತವನ್ನು ಕೇಂದ್ರಗಳ ಮೂಲಕ ಖರೀದಿ ಮಾಡಲಾಗಿತ್ತು. ಈ ವರ್ಷ 60 ಸಾವಿರ ಕ್ವಿಂಟಲ್ ಖರೀದಿಯಾಗುವ ನಿರೀಕ್ಷೆ ಇದೆ ಎಂದರು.
ಜಿಲ್ಲೆಯಲ್ಲಿ ಕಾರ್ಯನಿರತವಾಗಿರುವ ಅಕ್ಕಿಗಿರಣಿಗಳನ್ನು ಭತ್ತ ಖರೀದಿ ಕಾರ್ಯಕ್ಕೆ ನೋಂದಾಯಿಸಿಕೊಂಡು ಅಕ್ಕಿಗಿರಣಿಗಳ ಹಲ್ಲಿಂಗ್ ಹಾಗೂ ಶೇಖರಣಾ ಸಾಮರ್ಥ್ಯಕ್ಕನುಗುಣವಾಗಿ ಸಂಗ್ರಹಣಾ ಕಾರ್ಯ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರವು ಸಾಮಾನ್ಯ ಭತ್ತಕ್ಕೆ ಕ್ವಿಂಟಲ್‌ಗೆ 1868 ರೂ. ಮತ್ತು ಗ್ರೇಡ್-ಎ ಭತ್ತಕ್ಕೆ 1888 ರೂ.ನಿಗದಿಪಡಿಸಲಾಗಿದೆ ಎಂದು ವಿವರಿಸಿದ ಎಡಿಸಿ ಮಂಜುನಾಥ ಅವರು ಬೆಂಬಲ ಬೆಲೆ ಯೋಜನೆ ಅಡಿ ಭತ್ತ ಖರೀದಿ ಬಗ್ಗೆ ಜಿಲ್ಲಾ ವ್ಯಾಪ್ತಿಯಲ್ಲಿ ರೈತರಿಗೆ ಅಗತ್ಯ ಪ್ರಚಾರ ಮಾಡುವಂತೆ ಸೂಚಿಸಿದರು. ಜಿಲ್ಲಾಮಟ್ಟದಲ್ಲಿಗುಣಮಟ್ಟ ಪರಿಶೀಲನೆಗಾಗಿ ಅಸ್ಸೇಯರ್ ನೇಮಕಾತಿ ಮತ್ತು ತರಬೇತಿ ಏರ್ಪಡಿಸುವಂತೆ ತಿಳಿಸಿದರು.
ಪ್ರತಿದಿನ ಖರೀದಿಸುವ ಕೃಷಿ ಉತ್ಪನ್ನಗಳ ವಿವರಗಳನ್ನು ಖರೀದಿ ಏಜೆನ್ಸಿ ಪತ್ರದಲ್ಲಿ ನೀಡಿರುವ ವಹಿಯಲ್ಲಿದಾಖಲಿಸಬೇಕು. ಈ ಬಗ್ಗೆ ಕೃಷಿ ಉತ್ಪನ್ನ ಖರೀದಿ ವಹಿ ನಿರ್ವಹಿಸಬೇಕು ಎಂದರು. ಗುಣಮಟ್ಟ ಪರಿಶೀಲನೆ ಹೆಸರಿನಲ್ಲಿ ರೈತರಿಗೆ ಯಾವುದೇ ಅನಾನೂಕುಲವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದ ಅವರು ಪ್ರತಿ ಖರೀದಿ ಕೇಂದ್ರಗಳಿಗೆ ನುರಿತ ಗುಣಮಟ್ಟ ಪರೀಕ್ಷಕರನ್ನು ನೇಮಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಇನ್ನಿತರೆವಿಷಯಗಳ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಧರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.