Advertisement
ಆರ್‌ಟಿಒ ಕಚೇರಿಯನ್ನು ಸಾರ್ವಜನಿಕ ಸ್ನೇಹಿ ಹಾಗೂ ಪೇಪರ್‌ಲೆಸ್ ಮಾಡುವ ಹಿನ್ನೆಲೆಯಲ್ಲಿ ‘ವಾಹನ- 4’ ಸಾಫ್ಟ್ವೇರ್ ಅನುಷ್ಠಾನಕ್ಕೆ ತರಲಾಗುತ್ತಿದೆ. ಮಾ. 19ರಂದು ಮಾತ್ರ ವಾಹನ ನೋಂದಣಿಗೆ ಸಂಬಂಧಿಸಿದ ಎಲ್ಲ ವಿಧದ ಶುಲ್ಕ, ದಂಡ, ತೆರಿಗೆ ಸ್ವೀಕಾರ ಸಹಿತ ಆರ್ ಟಿಒ ಕಚೇರಿಯ ಖಜಾನೆ ವಿಭಾಗದ ಕಾರ್ಯವನ್ನು ಹಾಗೂ ಆನ್‌ಲೈನ್ ಅರ್ಜಿ ಸ್ವೀಕರಿಸುವುದನ್ನು ನಿಲ್ಲಿಸಲಾಗುವುದು ಎಂದು ಮಂಗಳೂರು ಆರ್‌ಟಿಒ ಕಚೇರಿಯು ತಿಳಿಸಿತ್ತು.
ಈಗ ಆರ್ಥಿಕ ವರ್ಷದ ಕೊನೆ(ಮಾರ್ಚ್ ಕೊನೆ)ಯಲ್ಲಿ ಇದ್ದೇವೆ. ಈ ಕಾಲದಲ್ಲಿ ಸಾಫ್ಟ್ವೇರ್ ಅಳವಡಿಕೆಯ ನೆಪದಲ್ಲಿ ವಾಹನ ನೋಂದಣಿಯನ್ನು ಸ್ಥಗಿತಗೊಳಿಸುವುದರಿಂದ ವಾಣಿಜ್ಯ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ಈಗಾಗಲೇ ಕೆನರಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಯ ವತಿಯಿಂದ ರಾಜ್ಯ ಸಾರಿಗೆ ಇಲಾಖೆಗೆ ಮನವಿ ಮಾಡಲಾಗಿತ್ತು. ಆದರೆ, ಈ ಮನವಿಯನ್ನು ಪುರಸ್ಕರಿಸದ ಸಾರಿಗೆ ಇಲಾಖೆ ಹೊಸ ಸಾಫ್ಟ್ವೇರ್ ಅಳವಡಿಕೆಗೆ ಮುಂದಾಗಿದೆ.
Related Articles
ಹೊಸ ಸಾಫ್ಟ್ವೇರ್ ಅಳವಡಿಕೆ ಮಾಡುವುದು ಸ್ವಾಗತಾರ್ಹ. ಆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸುವುದು ಸಾರಿಗೆ ಇಲಾಖೆಯ ಜವಾಬ್ದಾರಿಯಾಗಿತ್ತು. ಹಳೆ ಕ್ರಮದಂತೆ ನೋಂದಣಿ ಮಾಡಿಸುತ್ತಿರುವ ಸಂದರ್ಭದಲ್ಲಿಯೇ ಪ್ರತ್ಯೇಕವಾಗಿ ಹೊಸ ಸಾಫ್ಟ್ವೇರ್ ವ್ಯವಸ್ಥೆಯನ್ನು ಅಳವಡಿಸಿದ್ದರೆ ಸಾರ್ವಜನಿಕ ಸೇವೆಯಲ್ಲಿ ವ್ಯತ್ಯಯವಾಗುವುದು ಕಡಿಮೆ ಆಗುತ್ತಿತ್ತು ಅಥವಾ ತಾತ್ಕಾಲಿಕವಾಗಿ ಒಂದು ಕೌಂಟರ್ ತೆರದು ಸಾಫ್ಟ್ ವೇರ್ ಅಳವಡಿಕೆ ನಡೆಸಿದರೂ ಉಪಯೋಗವಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ಸದ್ಯದ ಮಾಹಿತಿ ಪ್ರಕಾರ ಹೊಸ ನೋಂದಣಿ ಒಂದು ವಾರ ನಡೆಯುವುದು ಅನುಮಾನ.
Advertisement
ಮಂಗಳೂರು ನಗರದ ಸ್ಥಿತಿಈಗ ಮಂಗಳೂರು ಪ್ರಾದೇಶಿಕ ಕಚೇರಿ ವ್ಯಾಪ್ತಿ ಮಂಗಳೂರು ಹಾಗೂ ಬಂಟ್ವಾಳ ತಾಲೂಕು ಸೇರಿ 6.54 ಲಕ್ಷ ವಾಹನಗಳು ನೋಂದಣಿಯಾಗಿವೆ. ಇದರಲ್ಲಿ 3.22 ಲಕ್ಷ ದ್ವಿಚಕ್ರ ವಾಹನಗಳು, 12,000 ಸಾರಿಗೆ ವಾಹನಗಳು. ದಿನವೊಂದಕ್ಕೆ 150 ದ್ವಿಚಕ್ರ ವಾಹನಗಳು, 30 ಲಘು ವಾಹನಗಳು ನೋಂದಣಿಯಾಗುತ್ತಿವೆ. ಮಾ. 27ರಿಂದ ಹೊಸ ಸಾಫ್ಟ್ ವೇರ್
‘ವಾಹನ-4’ ಸಾಫ್ಟ್ವೇರ್ ಅನುಷ್ಠಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗ ಡಿಎಲ್ ಹಾಗೂ ಎಲ್‌ಎಲ್ ಆರ್ ಹೊರತುಪಡಿಸಿ ವಾಹನ ನೋಂದಣಿಯನ್ನು ಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಸಾರಿಗೆ ಇಲಾಖೆಯ ಕೇಂದ್ರ ಕಚೇರಿಯ ಸೂಚನೆಯ ಮೇರೆಗೆ ಮಾ. 26ರ ವರೆಗೆ ನೋಂದಣಿ ನಡೆಯುವುದಿಲ್ಲ. ಮಾ. 27ರಿಂದ ಆರ್ ಟಿಒ ಕಚೇರಿಯಲ್ಲಿ ವಾಹನ- 4 ಸಾಫ್ಟ್ ವೇರ್ ಅನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲಾಗುವುದು.
– ಜಿ.ಎಸ್. ಹೆಗಡೆ,
ಪ್ರಾದೇಶಿಕ ಸಾರಿಗೆ ಆಯುಕ್ತರು (ಪ್ರಭಾರ)
ಮಂಗಳೂರು ಆಟೋಮೊಬೈಲ್ ಕ್ಷೇತ್ರಕ್ಕೆ ಹೊಡೆತ
‘ವಾಹನ-4’ ಸಾಫ್ಟ್ವೇರ್ ಅನುಷ್ಠಾನ ನೆಪದಿಂದ ಈ ಆರ್ಥಿಕ ವರ್ಷದ ಕೊನೆಯ ಅವಧಿಯಲ್ಲಿ ವಾಹನ ನೋಂದಣಿ ಸ್ಥಗಿತಗೊಳಿಸಿರುವುದು ವಾಣಿಜ್ಯ ದೃಷ್ಟಿಯಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಹೊಸ ವ್ಯವಸ್ಥೆಯಿಂದ ಉಪಕಾರ ಆಗುವುದಾದರೂ ಕೆಲಸ ಸ್ಥಗಿತದಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ಬಹಳಷ್ಟು ಕೆಟ್ಟ ಪರಿಣಾಮ ಎದುರಾಗಲಿದೆ.
– ಶಶಿಧರ ಪೈ,
ಮಾರೂರು, ಪದಾಧಿಕಾರಿ,
ಆಟೋಮೊಬೈಲ್ ಡೀಲರ್ಸ್
ಅಸೋಸಿಯೇಶನ್, ಮಂಗಳೂರು