ಆಳಂದ: ರೈತ ಶಕ್ತಿ ಯೋಜನೆ ಅಡಿಯಲ್ಲಿ ಸಹಾಯಧನ ಪಡೆಯಲು ನೋಂದಾಯಿಸಿ ಕೊಳ್ಳದ ರೈತರು ಫ್ರೂಟ್ಸ್ ಐಡಿಯಲ್ಲಿ (ಫಾರ್ಮರ್) ಐಡಿಯಲ್ಲಿ ದಾಖಲೆಗಳು ನೀಡಿ ನೋಂದಾಯಿಸಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಪಿ.ಎಂ. ಮಲ್ಲಿಕಾರ್ಜುನ ರೈತರಿಗೆ ಸಲಹೆ ನೀಡಿದರು.
ತಾಲೂಕಿನ ಮುನ್ನೊಳ್ಳಿ ವಲಯದ ಮುಂಗಾರಿನ ಬಿತ್ತನೆ ಕಾರ್ಯ ವೀಕ್ಷಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರೈತರ ಶಕ್ತಿ ಯೋಜನೆ ಅಡಿಯಲ್ಲಿ ಡಿಸೇಲ್ ಸಹಾಯಧನ ನೀಡಲು ಇಲಾಖೆ ಮುಂದಾಗಿದ್ದು, ರಾಜ್ಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಕೃಷಿ ಯಂತ್ರೋಪಕರಣ ಪ್ರೋತ್ಸಾಹಿಸಲು ಹಾಗೂ ರೈತರ ಇಂಧನ ವೆಚ್ಚದ ಭಾರ ಕಡಿಮೆ ಮಾಡುವ ಸರ್ಕಾರದ ಉದ್ದೇಶ ಹೊಂದಿ ರೈತ ಶಕ್ತಿ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಯೋಜನೆ ಅಡಿಯಲ್ಲಿ ಪ್ರತಿ ಎಕರೆಗೆ 250ರೂ. ರಂತೆ ಗರಿಷ್ಠ ಐದು ಎಕರೆ ವರೆಗೆ 1250ರೂ. ರೈತರ ಖಾತೆಗಳಿಗೆ ನೇರ ಮತ್ತು ನಗದು ವರ್ಗಾವಣೆ ಮಾಡಲಾಗುವುದು. ಇದರ ಲಾಭವನ್ನು ರೈತರು ಪಡೆದುಕೊಳ್ಳಬೇಕು. ಇದಕ್ಕಾಗಿ ರೈತರಿಂದ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಆದರೂ ಫಾರ್ಮರ್ ಐಡಿಯಲ್ಲಿ ನೋಂದಾಯಿಸಿ ಎಂದು ತಿಳಿಸಿದ್ದಾರೆ.
ಈಗಾಗಲೇ ಶೇ. 90ರಷ್ಟು ರೈತರ ಫ್ರೂಟ್ಸ್ ಐಡಿಯಲ್ಲಿ ನೋಂದಣಿ ಕೈಗೊಳ್ಳಲಾಗಿದೆ. ನೋಂದಣಿ ಆಗದ ರೈತರು ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗೆ ಆಧಾರ ಕಾರ್ಡ್, ಬ್ಯಾಂಕ್ ಫಾಸಬುಕ್, ಪಹಣಿ, ಎಸ್ಸಿ, ಎಸ್ಟಿ ಜನಾಂಗಕ್ಕೆ ಜಾತಿ ಪ್ರಮಾಣ ಪತ್ರ ನೀಡಿ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಯಿಂದ ಪಡೆದುಕೊಳ್ಳಬೇಕು ಎಂದು ಹೇಳಿದರು.
31ಕೊನೆ ದಿನ: ರೈತರು ಕಡ್ಡಾಯವಾಗಿ ಪ್ರಧಾನಮಂತ್ರಿ ಫಸಲು ಬಿಮಾ ಯೋಜನೆಯ ಬೆಳೆ ವಿಮೆ ಕೈಗೊಳ್ಳಲು ಜು.31 ಕೊನೆ ದಿನವಾಗಿದೆ. ವಿಮೆ ಕೈಗೊಳ್ಳದ ರೈತರು ತಮ್ಮ ಹತ್ತಿರದ ಗ್ರಾಮ ಒನ್ ಸೇವಾ ಕೇಂದ್ರ, ವಿಎಸ್‌ಎಸ್‌ಎಸ್ ಮತ್ತು ಸಂಬಂಧಿ ತ ಬ್ಯಾಂಕ್‌ಗಳಲ್ಲಿ ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.