Advertisement

ಪದವೀಧರರ ಮತದಾರರ ಪಟ್ಟಿಗೆ ನೋಂದಾಯಿಸಿ

09:11 PM Jan 04, 2020 | Lakshmi GovindaRaj |

ತುಮಕೂರು: ಪದವಿ ಹೊಂದಿರುವವರನ್ನು ಮತದಾರರ ಪಟ್ಟಿಗೆ ನೋಂದಣಿಗೆ ಕ್ರಮ ಕೈಗೊಳ್ಳಲು ವಿವಿಧ ಇಲಾಖಾ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2020, ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆಗೆ ಸಂಬಂಧಿಸಿ ಶನಿವಾರ ಸಭೆ ನಡೆಸಿ ಮಾತನಾಡಿ,

Advertisement

ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಮತಪಟ್ಟಿಗೆ ನೋಂದಣಿಯಾದವರ ಪ್ರಮಾಣ ಕಡಿಮೆಯಿದ್ದು, 2016ರ ಅಕ್ಟೋಬರ್‌ 31ಕ್ಕೂ ಮೊದಲು ಪದವಿ ಪೂರ್ಣಗೊಳಿಸಿದವರನ್ನು ತಪ್ಪದೇ ಮತಪಟ್ಟಿಗೆ ನೋಂದಾಯಿಸಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು. ಅರ್ಹ ಪದವೀಧರ ಮತದಾರರು ನಿಗದಿತ ನಮೂನೆ 18 ಭರ್ತಿ ಮಾಡಿ ಪದವಿ ತೇರ್ಗಡೆ ಪ್ರಮಾಣ ಪತ್ರ ಹಾಗೂ ಭಾವಚಿತ್ರ ಸಲ್ಲಿಸುವ ಮೂಲಕ ಮತಪಟ್ಟಿಗೆ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.

ಎಲ್ಲಾ ರಾಜಕೀಯ ಪಕ್ಷದವರು, ಇಲಾಖಾ ಮುಖ್ಯಸ್ಥರು, ಖಾಸಗಿ ಉದ್ದಿಮೆಗಳ ಮಾಲೀಕರು, ಸರ್ಕಾರಿ, ಅರೆ ಸರ್ಕಾರಿ ಕಚೇರಿ ಅಧಿಕಾರಿಗಳು, ಖಾಸಗಿ ಸಂಸ್ಥೆಗಳು, ಇತರೆ ಸಾರ್ವಜನಿಕ ಉದ್ದಿಮೆಗಳ ಮುಖ್ಯಸ್ಥರು ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಹ ಪದವೀಧರರನ್ನು ತಪ್ಪದೇ ಮತಪಟ್ಟಿಗೆ ನೋಂದಣಿಗೆ ಸೂಚಿಸಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಮತಪಟ್ಟಿ ಪ್ರಕಟ: ಚುನಾವಣಾ ಆಯೋಗದ ನಿರ್ದೇಶನದಂತೆ 2019 ನ.1ನ್ನು ಅರ್ಹತಾ ದಿನಾಂಕವೆಂದು ಪರಿಗಣಿಸಿ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಮತಪಟ್ಟಿ ತಯಾರಿಸಲಾಗುವುದು. ಈಗಾಗಲೇ 2019ರ ಡಿ.7ರಂದು ಕರಡು ಮತದಾರರ ಪಟ್ಟಿ ಎಲ್ಲಾ ಮತಗಟ್ಟೆ, ಸಹಾಯಕ ಮತದಾರರ ನೋಂದಣಾಧಿಕಾರಿ, ಮತದಾರರ ನೋಂದಣಾಧಿಕಾರಿ ಕಚೇರಿಯಲ್ಲಿ ಪ್ರಕಟಿಸಲಾಗಿದೆ.

ಕರಡು ಮತ ಪಟ್ಟಿಯನುಸಾರ ಜಿಲ್ಲೆಯ ಪಾವಗಡ ತಾಲೂಕಿನಲ್ಲಿ 2191, ಮಧುಗಿರಿ-2137, ಶಿರಾ-3078, ಚಿಕ್ಕನಾಯಕನಹಳ್ಳಿ-1300, ತಿಪಟೂರು-1697, ತುರುವೇಕೆರೆ-1296, ಕುಣಿಗಲ್‌-1105, ಗುಬ್ಬಿ-1411, ತುಮಕೂರು ನಗರ-4981, ತುಮಕೂರು ಗ್ರಾಮಾಂತರ-1626 ಹಾಗೂ ಕೊರಟಗೆರೆ-1250 ಸೇರಿ ಒಟ್ಟು 22072 ಪದವೀಧರ ಮತದಾರರು ಮತಪಟ್ಟಿಗೆ ನೋಂದಾಯಿಸಿಕೊಂಡಿದ್ದಾರೆ ಎಂದರು.

Advertisement

ಮಿಂಚಿನ ನೋಂದಣಿ ಕಾರ್ಯಕ್ರಮದಡಿ ಸಂಬಂಧಿಸಿದ ಮತಗಟ್ಟೆಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ನಿಗಧಿತ ದಿನಾಂಕಗಳಂದು ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ಹಾಜರಿದ್ದು, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಿದ್ದಾರೆ. ಸ್ವೀಕೃತವಾಗುವ ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇಪಡಿಸಿ ಫೆ. 7 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಮಿಂಚಿನ ನೋಂದಣಿ ಅವಧಿಯಲ್ಲಿ 18 ರಿಂದ 19 ವರ್ಷ ವಯಸ್ಸಿನವರು ನಮೂನೆ 6 ಹಾಗೂ ಅರ್ಹ ಪದವೀಧರರು ನಮೂನೆ-18ರಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವ ಮೂಲಕ ಮತಪಟ್ಟಿಗೆ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಎಲ್ಲಾ ಅಧಿಕಾರಿಗಳಿಗೆ ನಮೂನೆ-18 ವಿತರಿಸಲಾಯಿತು. ಭಾರತ್‌ ಕಮ್ಯೂನಿಸ್ಟ್‌ ಪಕ್ಷದ ಜಿಲ್ಲಾ ಕಾರ್ಯದರ್ಶಿ ಗಿರೀಶ್‌, ಭಾರತ್‌ ಕಮ್ಯೂನಿಸ್ಟ್‌ ಪಕ್ಷ(ಮಾರ್ಕ್ಸ್ವಾದಿ)ದ ಜಿಲ್ಲಾ ಕಾರ್ಯದರ್ಶಿ ಉಮೇಶ್‌, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಚುನಾವಣಾ ತಹಶೀಲ್ದಾರ್‌ ನಾಗಭೂಷಣ್‌, ಲೀಡ್‌ಬ್ಯಾಂಕ್‌ ಮ್ಯಾನೇಜರ್‌ ಜ್ಯೋತಿಗಣೇಶ್‌, ಡಿಡಿಪಿಐ ಎಂ.ಆರ್‌. ಕಾಮಾಕ್ಷಿ, ಜಿಲ್ಲಾ ನೋಂದಣಾಧಿಕಾರಿ ಎಂ. ಶ್ರೀದೇವಿ ಮತ್ತಿತರರಿದ್ದರು.

ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2020: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2020 ಜ.1ನ್ನು ಅರ್ಹತಾ ದಿನಾಂಕವೆಂದು ಪರಿಗಣಿಸಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2020 ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ 2019ರ ಡಿ. 16ರಂದು ಕರಡು ಮತದಾರರ ಪಟ್ಟಿ ಎಲ್ಲಾ ಮತಗಟ್ಟೆ, ಸಹಾಯಕ ಮತದಾರರ ನೋಂದಣಾಧಿಕಾರಿ, ಮತದಾರರ ನೋಂದಣಾಧಿಕಾರಿ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಈ ಕರಡು ಮತದಾರರ ಪಟ್ಟಿ ಅನ್ವಯ ಜಿಲ್ಲೆಯಲ್ಲಿ 1104451 ಪುರುಷ ಮತ್ತು 1093094 ಮಹಿಳೆಯರು ಸೇರಿ ಒಟ್ಟು 2197545 ಮತದಾರರು ನೋಂದಣಿಯಾಗಿರುತ್ತಾರೆ. ಕರಡು ಮತ ಪಟ್ಟಿಗೆ ಸಂಬಂಧಿಸಿ ಜ. 15ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ಎಡಿಸಿ ಕೆ.ಚನ್ನಬಸಪ್ಪ ತಿಳಿಸಿದರು.

ಜ.6ರಿಂದ ಮಿಂಚಿನ ನೋಂದಣಿ: ಜಿಲ್ಲೆಯಲ್ಲಿ 18 ರಿಂದ 19 ವರ್ಷ ವಯಸ್ಸಿನ ಮತದಾರರ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸುವ ಸಲುವಾಗಿ ಜ. 6ರಿಂದ 8ರವರೆಗೆ ಎಲ್ಲಾ ಮತಗಟ್ಟೆ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ, ಶಿಕ್ಷಣ ಸಂಸ್ಥೆ, ಪ್ರಮುಖ ಸ್ಥಳಗಳಲ್ಲಿ ಮಿಂಚಿನ ನೋಂದಣಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಕೂಡಲೇ ಮತಗಟ್ಟೆ ಮಟ್ಟದ ಏಜೆಂಟರುಗಳನ್ನು ಎಲ್ಲಾ ಮತಗಟ್ಟೆಗಳಿಗೆ ನೇಮಿಸಲು ಕ್ರಮ ವಹಿಸಬೇಕೆಂದು ಎಡಿಸಿ ಕೆ.ಚನ್ನಬಸಪ್ಪ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next