Advertisement

ಪ್ರಾದೇಶಿಕ ಸಾರಿಗೆ ಕಚೇರಿಗೆ ಶೀಘ್ರ ಕೊನೆ ಮೊಳೆ

03:48 PM Oct 07, 2022 | Team Udayavani |

ರಾಯಚೂರು: ಸಾರ್ವಜನಿಕರ ಬಹುಬೇಡಿಕೆಯ ಪ್ರಾದೇಶಿಕ ಸಾರಿಗೆ ಕಚೇರಿ ಇನ್ನು ಮುಂದೆ ಕಾಲಗರ್ಭದಲ್ಲಿ ಲೀನವಾಗುವ ಸಾಧ್ಯತೆಗಳು ದಟ್ಟವಾಗಿವೆ. ಜನರಿಗೆ ಉತ್ತಮ ಹಾಗೂ ತ್ವರಿತ ಸೇವೆ ನೀಡಬೇಕು ಎನ್ನುವ ಕಾರಣಕ್ಕೆ ಈಗಾಗಲೇ ಕೆಲವೊಂದು ಸೇವೆಗಳನ್ನು ಆನ್‌ಲೈನ್‌ಗೊಳಿಸಿರುವ ಸರ್ಕಾರ, ಶೀಘ್ರದಲ್ಲೇ ಎಲ್ಲ 58 ಸೇವೆಗಳನ್ನು ಆನ್‌ಲೈನ್‌ಗೆ ವರ್ಗಾಯಿಸಿ ಆರ್‌ಟಿಒ ಕಚೇರಿ ನಿಷ್ಕ್ರಿಯಗೊಳಿಸುವ ಚಿಂತನೆ ನಡೆಸಿದೆ.

Advertisement

ಸರ್ಕಾರಕ್ಕೆ ಆದಾಯ ತರುವ ಕಚೇರಿ ಇದಾಗಿತ್ತು. ವಾಹನಗಳ ನೋಂದಣಿ, ವರ್ಗಾವಣೆ, ವಾಹನಗಳ ನವೀಕರಣ, ಚಾಲನಾ ಪರವಾನಗಿ ವಿತರಣೆ ಸೇರಿದಂತೆ ನಾನಾ ಕಾರ್ಯಗಳಿಗೆ ಈ ಕಚೇರಿಗೆ ನಿತ್ಯ ನೂರಾರು ಜನ ಅಲೆಯುತ್ತಿದ್ದರು. ಆದರೆ, ಸರ್ಕಾರಕ್ಕೆ ಸಂದಾಯವಾಗುವ ಶುಲ್ಕದ ದುಪ್ಪಟ್ಟು ಹಣ ಮಧ್ಯವರ್ತಿಗಳ ಜೇಬು ಸೇರುತ್ತಿತ್ತು. ಅಲ್ಲದೇ, ವಾಹನಗಳ ತಪಾಸಣೆ ಕಾರ್ಯವನ್ನು ಇದೇ ಇಲಾಖೆ ನಿರ್ವಹಿಸಬೇಕಿತ್ತು. ಈಗಾಗಲೇ ಆರ್‌ಟಿಒ ಹಂತ ಹಂತವಾಗಿ ಆನ್‌ಲೈನ್‌ ಸೇವೆಗಳನ್ನು ಆರಂಭಿಸಿದೆ. ಬೈಕ್‌ ಮತ್ತು ಕಾರುಗಳ ನೋಂದಣಿ ಸಂಖ್ಯೆಗಳನ್ನು ವಾಹನಗಳ ಶೋರೂಂಗಳಿಗೆ ನೀಡಲಾಗಿದೆ. ಸರ್ಕಾರ ನಿಗದಿ ಮಾಡಿದ ಶುಲ್ಕ ಪಾವತಿಸಿದರೆ ಆರ್‌ಟಿಒಗೆ ಬರುವ ಅಗತ್ಯವೂ ಇಲ್ಲ. ಇದರ ಜತೆಗೆ ಚಾಲನಾ ಪರವಾನಗಿ ಪಡೆಯಲು ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ, ಅಲ್ಲೇ ಪರೀಕ್ಷೆ ನೀಡುವ ವ್ಯವಸ್ಥೆ ಜಾರಿ ಮಾಡಲಾಗಿದೆ. ವಾಹನಗಳ ವರ್ಗಾವಣೆ, ನವೀಕರಣ ಸೇರಿದಂತೆ ಎಲ್ಲವೂ ಆನ್‌ಲೈನ್‌ ಮಯವಾಗುತ್ತಿದೆ.

ಮಧ್ಯವರ್ತಿಗಳಿಗೆ ಕಂಟಕ: ಸರ್ಕಾರದ ಈ ಕ್ರಮದಿಂದ ಮುಖ್ಯವಾಗಿ ಮಧ್ಯವರ್ತಿಗಳಿಗೆ ಕಂಟಕವಾಗಿ ಪರಿಣಮಿಸಲಿದೆ. ಇಷ್ಟು ದಿನ ಹೆಜ್ಜೆ ಹೆಜ್ಜೆಗೂ ಸಾರ್ವಜನಿಕರಿಂದ ವಸೂಲಿ ಮಾಡುತ್ತಿದ್ದ ಮಧ್ಯವರ್ತಿಗಳಿಗೆ ಸರ್ಕಾರ ಹೆಡೆಮುರಿ ಕಟ್ಟುವ ಕಾಲ ಸನ್ನಿಹಿತವಾದಂತಾಗಿದೆ. ಕಚೇರಿಗಳಿಗೆ ಅಲೆದು ಅಲೆದು ಸುಸ್ತಾದರೂ ಸಿಗದ ಸೌಲಭ್ಯಗಳು ಹಣ ಕೊಟ್ಟರೆ ಒಂದೆರಡು ದಿನಗಳಿಗೆ ಸಿಗುತ್ತಿದ್ದವು. ಇನ್ನು ಮುಂದೆ ಅಂಥ ದಂಧೆಗಳಿಗೆ ಕಡಿವಾಣ ಬೀಳಲಿದ್ದು, ಜನರಿಗೆ ತ್ವರಿತ ಸಿಗಬಹುದು ಎನ್ನುವುದೇ ಸಮಾಧಾನಕರ ಸಂಗತಿ.

ಆರ್‌ಟಿಒ ಕಚೇರಿ ಕಥೆ ಏನು?

ಸರ್ಕಾರ ಎಲ್ಲ ಸೇವೆಗಳು ಆನ್‌ಲೈನ್‌ ಗೊಳಿಸಿದರೆ ಆರ್‌ಟಿಒ ಕಚೇರಿ ಸಂಪೂರ್ಣ ಕಣ್ಮರೆಯಾಗಲಿದೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಇದಕ್ಕೆ ಆರ್‌ಟಿಒ ಸಿಬ್ಬಂದಿ ಕೂಡ ಹೌದು ಎನ್ನುತ್ತಾರೆ. ಸರ್ಕಾರ ಈಗ ಕೈಗೊಳ್ಳುತ್ತಿರುವ ಹೆಜ್ಜೆ ನಮ್ಮೆಲ್ಲರ ಕೆಲಸಗಳಿಗೆ ಕತ್ತರಿ ಹಾಕುವಂತಿದೆ. ಈಗಿರುವ ಸಿಬ್ಬಂದಿಯನ್ನು ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಿ ಅಗತ್ಯವಿರುವ ಒಂದೆರಡು ಹುದ್ದೆಗಳನ್ನು ಮಾತ್ರ ಉಳಿಸಿಕೊಳ್ಳಬಹುದು. ಅದಕ್ಕೆ ಇಷ್ಟೊಂದು ದೊಡ್ಡ ಕಚೇರಿಯ ಅಗತ್ಯವೂ ಇರಲಿಕ್ಕಿಲ್ಲ ಎನ್ನುತ್ತಾರೆ ಸಿಬ್ಬಂದಿ.

Advertisement

ಸಿಬ್ಬಂದಿ ಕೊರತೆಯಲ್ಲೇ ಕೆಲಸ

ಸರ್ಕಾರದ ಈ ನಿರ್ಧಾರ ಪರಿಣಾಮವೋ ಅಥವಾ ಬೇರೆ ಕಾರಣಕ್ಕೋ ಆರ್‌ಟಿಒ ಕಚೇರಿಯಲ್ಲಿ ಅಗತ್ಯವಿದ್ದರೂ ಸಿಬ್ಬಂದಿಗಳ ನೇಮಕ ಪ್ರಕ್ರಿಯೆಗೆ ಸರ್ಕಾರ ಮುಂದಾಗಿಲ್ಲ. ರಾಯಚೂರು ಆರ್‌ಟಿಒಗೆ ಯಾದಗಿರಿ ಜಿಲ್ಲೆಯ ಹೊಣೆಯನ್ನು ನೀಡಲಾಗಿದೆ. ಇನ್ನೂ ಇನ್ಸ್‌ಪೆಕ್ಟರ್‌ಗಳ ಕೊರತೆಯಿದ್ದು, ಕಚೇರಿಯಲ್ಲೂ ಕೆಲಸ ಮಾಡಬೇಕು, ಹೊರಗೆ ವಾಹನಗಳ ತಪಾಸಣೆ ಮಾಡಬೇಕಿದೆ. ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ಎನ್ನುತ್ತಾರೆ ಸಿಬ್ಬಂದಿ.

ಈಗಾಗಲೇ ಆರ್‌ಟಿಒ ಬಹುತೇಕ ಸೇವೆಗಳನ್ನು ಆನ್‌ಲೈನ್‌ ಮಾಡಲಾಗಿದೆ. ಈಗ ಎಲ್ಲ 58 ಸೇವೆಗಳನ್ನು ಆನ್‌ಲೈನ್‌ ಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿರುವ ಮಾಹಿತಿ ಇದೆ. ಬಹುಶಃ ಹಾಗಾದರೆ ನಮ್ಮ ಕಚೇರಿಯಲ್ಲೇ ಮಾಡಲು ಕೆಲಸಗಳೇ ಇರದಂಥ ಸ್ಥಿತಿ ಬರಬಹುದು.  –ವಿನಯಾ ಕಟೋಕರ್‌, ಆರ್‌ಟಿಒ, ರಾಯಚೂರು

-ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next