Advertisement

ಬೆಳೆ ಪರಿಹಾರಕ್ಕಾಗಿ ಪ್ರಾಂತ ರೈತ ಸಂಘ ಪ್ರತಿಭಟನೆ

09:23 AM Feb 25, 2022 | Team Udayavani |

ಜೇವರ್ಗಿ: ತಾಲೂಕಿನಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆ ಹಾನಿಗೀಡಾದ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗುರುವಾರ ಪಟ್ಟಣದ ಮಿನಿ ವಿಧಾನಸೌಧ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

Advertisement

ಪ್ರಾಂತ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಸುಭಾಷ ಹೊಸಮನಿ ಮಾತನಾಡಿ, 60 ವರ್ಷ ದಾಟಿದ ರೈತರು ಹಾಗೂ ಕೂಲಿ ಕಾರ್ಮಿಕರಿಗೆ ಪ್ರತಿ ತಿಂಗಳು ಕನಿಷ್ಟ 7,500ರೂ. ಮಾಸಾಶನ ಮಂಜೂರಿ ಮಾಡಬೇಕು. ರೈತರು ಬೆಳೆಯುವ ಎಲ್ಲ ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸಬೇಕು. ಬೆಳಗ್ಗೆ 9ರಿಂದ ಸಂಜೆ 4 ಗಂಟೆ ವರೆಗೆ ಉದ್ಯೋಗ ಖಾತ್ರಿ ಕೆಲಸ ನಿರ್ವಹಿಸಬೇಕು ಎನ್ನುವ ಸರ್ಕಾರದ ಆದೇಶ ರದ್ದುಪಡಿಸಬೇಕು. ಅರ್ಜಿ ಸಲ್ಲಿಸಿದ ಎಲ್ಲರಿಗೂ ನಿಗದಿ ಪಡಿಸಿದ 150 ದಿನಗಳ ಕಾಲ ನಿರಂತರ ಕೆಲಸ ನೀಡಬೇಕು. ಸಕ್ಕರೆ ಕಾರ್ಖಾನೆಗಳು ರೈತರು ಬೆಳೆದ ಕಬ್ಬನ್ನು ಕೂಡಲೇ ಕಟಾವು ಮಾಡಿ ಬೆಂಬಲ ಬೆಲೆಯಲ್ಲಿ ಖರೀದಿಸಿ ರೈತರ ಖಾತೆಗಳಿಗೆ ನೇರವಾಗಿ ಹಣ ಸಂದಾಯ ಮಾಡಬೇಕು ಎಂದು ಒತ್ತಾಯಿಸಿದರು.

ಇದಕ್ಕೂ ಮುನ್ನ ಹಳೆ ತಹಶೀಲ್ದಾರ್‌ ಕಚೇರಿಯಿಂದ ನೂರಾರು ರೈತರು, ಮಹಿಳೆಯರು, ಕೂಲಿಕಾರ್ಮಿಕರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ತಹಶೀಲ್ದಾರ್‌ ವಿನಯಕುಮಾರ ಪಾಟೀಲ ಮುಖಾಂತರ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾ ಘಟಕದ ಅಧ್ಯಕ್ಷೆ ಗೌರಮ್ಮ ಪಾಟೀಲ, ಸಿಪಿಐ(ಎಂ) ಹಿರಿಯ ಮುಖಂಡ ವೆಂಕೋಬರಾವ್‌ ವಾಗಣಗೇರಿ, ಶಂಕರಲಿಂಗ ರೇವನೂರ, ಮಲ್ಕಪ್ಪ ಹರನೂರ, ಶ್ರೀನಾಥ ಕೋಳಕೂರ, ರೇವು ಜಾಧವ ರೇವನೂರ, ರಾಜು ಸಾಥಖೇಡ, ಈರಣ್ಣ ರಾಠೊಡ, ಸಿದ್ಧು ಮುತ್ತಕೋಡ, ಬಸವರಾಜ ಗುಡೂರ, ರವಿ ಮುದವಾಳ, ಜೈ ಭೀಮ ಮುದವಾಳ, ಮಲ್ಲಿಕಾರ್ಜುನ ವರ್ಚನಳ್ಳಿ, ಅನಸೂಬಾಯಿ ಮುದವಾಳ, ನಾಗಮ್ಮ ಹನ್ನೂರ, ಮಲ್ಕಮ್ಮ ಬಳಬಟ್ಟಿ, ನಾಗಮ್ಮ ಬಿರಾದಾರ ಹಾಗೂ ರೈತರು, ಕೂಲಿಕಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next