Advertisement

ಉತ್ತಮ ಆಡಳಿತ ಕುರಿತ ಪ್ರಾದೇಶಿಕ ಸಮ್ಮೇಳನಕ್ಕೆ ಚಾಲನೆ: ಇಂದು ಸಿಎಂ, ಜಿತೇಂದ್ರ ಸಿಂಗ್‌ ಭಾಗಿ

10:43 PM Jul 11, 2022 | Team Udayavani |

ಬೆಂಗಳೂರು: “ಉತ್ತಮ ಆಡಳಿತಕ್ಕಾಗಿ ನಾಗರಿಕರು, ಉದ್ಯಮಿಗಳು ಮತ್ತು ಸರ್ಕಾರದ ನಡುವಿನ ಸಮನ್ವಯತೆ’ಗಾಗಿ ಪ್ರಾದೇಶಿಕ ಸಮ್ಮೇಳನಕ್ಕೆ ಸೋಮವಾರ ಚಾಲನೆ ದೊರೆಯಿತು.

Advertisement

ಎರಡು ದಿನಗಳ ಈ ಅಪರೂಪದ ಸಮ್ಮೇಳನದಲ್ಲಿ ಆಡಳಿತ ಸುಧಾರಣೆ, ತಂತ್ರಜ್ಞಾನ ಅಳವಡಿಕೆಗೆ ಸಂಬಂಧಿಸಿದಂತೆ ಮೊದಲ ದಿನ ಹಲವು ಗೋಷ್ಠಿಗಳು ನಡೆದವು. ಈ ವೇಳೆ “ಕರ್ನಾಟಕದಲ್ಲಿ ಆಡಳಿತಾತ್ಮಕ ಸುಧಾರಣೆಗಳು’ ಕುರಿತು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಟಿ.ಎಂ. ವಿಜಯ ಭಾಸ್ಕರ್‌, “ವಿಜನ್‌ ಇಂಡಿಯಾ 2047- ಆಡಳಿತ’ದ ಬಗ್ಗೆ ಐಐಪಿಎ ಮಹಾನಿರ್ದೇಶಕ ಎಸ್‌.ಎನ್‌. ತ್ರಿಪಾಠಿ, “ಸಚಿವಾಲಯ ಸುಧಾರಣೆಗಳು, ಸ್ವಚ್ಛತಾ ಅಭಿಯಾನ, ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಮತ್ತು ಸೇವಾ ವಿತರಣೆಯಲ್ಲಿ ಸುಧಾರಣೆ’ ಕುರಿತು ಡಿಎಆರ್‌ಪಿಜಿ ಕಾರ್ಯದರ್ಶಿ ವಿ. ಶ್ರೀನಿವಾಸ್‌ ಮಾತನಾಡಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅಧ್ಯಕ್ಷತೆ ವಹಿಸಿದ್ದರು.

ಇಂದು ಸಿಎಂ ಭಾಗಿ
ಸಮ್ಮೇಳನ ಪೂರ್ವ ಸಮಾರಂಭದಲ್ಲಿ ಮಾತನಾಡಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಪ್ರಧಾನ ಕಾರ್ಯದರ್ಶಿ ಡಾ.ಶ್ರೀವತ್ಸ ಕೃಷ್ಣ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ್ಯ ಭಾಷಣ ಮಾಡಲಿದ್ದು, ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಖಾತೆ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್‌ ಉತ್ತಮ ಆಡಳಿತದ ಬಗ್ಗೆ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಕೇಂದ್ರದ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ, ಸಿಬ್ಬಂದಿ ಸಚಿವಾಲಯ (ಡಿಎಆರ್‌ಪಿಜಿ), ಸಾರ್ವಜನಿಕ ಕುಂದುಕೊರತೆಗಳು ಹಾಗೂ ಪಿಂಚಣಿ ಇಲಾಖೆ ಸಹಯೋಗದಲ್ಲಿ ರಾಜ್ಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಹೋಟೆಲ್‌ ಶಾಂಗ್ರಿ ಲಾದಲ್ಲಿ ಜುಲೈ 11 ಮತ್ತು 12ರಂದು ಪ್ರಾಂತೀಯ ಪ್ರಾದೇಶಿಕ ಸಮ್ಮೇಳನ ನಡೆಯಲಿದೆ ಎಂದು ಹೇಳಿದರು.

ಕಾರ್ಯಕ್ರಮದ ರೂಪುರೇಷೆ ಕುರಿತು ಮಾಹಿತಿ ನೀಡಿದ ಡಿಎಆರ್‌ಪಿಜಿ ಹೆಚ್ಚುವರಿ ಕಾರ್ಯದರ್ಶಿ ಅಮರನಾಥ್‌, ನಾಗರಿಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಸುಧಾರಿತ ತಂತ್ರಜ್ಞಾನ ಅಳವಡಿಸಲು ಪ್ರಯತ್ನಿಸುತ್ತಿದ್ದೇವೆ. ನಾಗರಿಕರಿಗೆ ಸಮಗ್ರ ಸೇವೆ ಒದಗಿಸುವುದು ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ಸಮ್ಮೇಳನ ಆಯೋಜಿಸಲಾಗಿದೆ.

Advertisement

ಕೇಂದ್ರ ಮತ್ತು ರಾಜ್ಯಗಳೆರಡರಲ್ಲೂ ಉತ್ತಮ ಆಡಳಿತಕ್ಕಾಗಿ ಹೊಸ ಆಲೋಚನೆಗಳನ್ನು ಹುಟ್ಟುಹಾಕುವ ಈ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳ ಸಮಾನ ಮನಸ್ಕರು ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next