ದಾವಣಗೆರೆ: ನಗರ ಪ್ರದೇಶದಲ್ಲಿ ಅನ್ನಭಾಗ್ಯ ಯೋಜನೆಯ ಆಯ್ದ ಕಾರ್ಡ್‌ದಾರರಿಗೆ ಪಡಿತರ ಬದಲಿಗೆ ನಗದು ರೂಪದಲ್ಲಿ ಸಹಾಯಧನ ವಿತರಿಸುವ ಪದ್ಧತಿ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಸ್ಲಂ ಜನಾಂದೋಲನ, ಸಾವಿತ್ರಿ ಬಾ ಫುಲೆ ಮಹಿಳಾ ಸಂಘಟನೆ, ಮಾನವ ಹಕ್ಕುಗಳ ವೇದಿಕೆ, ದಲಿತ ಸಂಘಟನೆಗಳ ಒಕ್ಕೂಟ, ಆಲ್ ಇಂಡಿಯಾ ತಂಜೀಮ್-ಎ-ಇನ್ಸಾಫ್, ಎಐಟಿಯುಸಿ, ಕೊಳಗೇರಿ ನಿವಾಸಿಗಳ ಸಂಘಗಳಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಆಹಾರ ಭದ್ರತಾ ಕಾಯ್ದೆಯಂತೆ ಹಸಿವುಮುಕ್ತ ವಾತಾವರಣ ನಿರ್ಮಾಣ ಮಾಡುವುದು ಸರ್ಕಾರಗಳ ಕರ್ತವ್ಯ. ಅನ್ನಭಾಗ್ಯ ಯೋಜನೆ ಜಾರಿಗೆ ತಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಈಚೆಗೆ ಇಡೀ ಯೋಜನೆಯನ್ನೇ ರದ್ಧುಪಡಿಸುವ ಹುನ್ನಾರ ನಡೆಸುತ್ತಿದೆ. ಅದರ ಭಾಗವಾಗಿ ಪಡಿತರದ ಬದಲಿಗೆ ನಗದು ರೂಪದಲ್ಲಿ ಸಹಾಯಧನ ವಿತರಿಸಲು ಮುಂದಾಗಿರುವುದು ಖಂಡನೀಯ.
ಆಯ್ದ ಕುಟುಂಬಗಳು ಬಯಸಿದರೆ ಮಾತ್ರವೇ ನಗದು ನೀಡುವುದಾಗಿ ಸುಳ್ಳು ಹೇಳುತ್ತಿರುವ ಸರ್ಕಾರ, ಇಡೀ ಯೋಜನೆಯನ್ನೇ ಸ್ಥಗಿತಗೊಳಿಸುವ ಹುನ್ನಾರ ನಡೆಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಆಹಾರ ಭದ್ರತಾ ಕಾಯ್ದೆ ಅನ್ವಯ ಎಲ್ಲಅರ್ಹ ಕುಟುಂಬಕ್ಕೆ ಆಹಾರ ಪದಾರ್ಥ ಒದಗಿಸುವ ಮೂಲಕ ಹಸಿವು ನೀಗಿಸಬೇಕು.
ಆಹಾರ ಧಾನ್ಯಗಳ ಬದಲಿಗೆ ಹಣ ನೀಡುವುದರಿಂದ ಹಸಿವು ದೂರ ಮಾಡಲಿಕ್ಕೆ ಆಗುವುದಿಲ್ಲ, ಪಡಿತರದ ಬದಲಿಗೆ ಹಣ ನೀಡುವುದರಿಂದ ಹಸಿವು ಮುಕ್ತ ಸಮಾಜ ನಿರ್ಮಾಣ ಸಾಧ್ಯವೇ ಇಲ್ಲ. ಆ ಕುಟುಂಬದ ಮುಖ್ಯಸ್ಥ 800 ರೂಪಾಯಿಯನ್ನೂ ಖರ್ಚು ಮಾಡಿದರೆ ಆ ಕುಟುಂಬಕ್ಕೆ ತಿಂಗಳಿಗೆ ಬೇಕಾದ ಪಡಿತರ ದೊರೆಯುವುದೇ ಇಲ್ಲ.
ಹಾಗಾಗಿ ರಾಜ್ಯ ಸರ್ಕಾರ ನೇರ ನಗದು ಸಬ್ಸಿಡಿ, ಪಡಿತರ ವಿತರಣಾ ವ್ಯವಸ್ಥೆಯನ್ನು ಸಾರ್ವತೀಕರಣಗೊಳಿಸಿ, ಎಲ್ಲ ಬಡ ಜನರಿಗೆ ಆಹಾರ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು. ಯೂನಿಟ್ ಪದ್ಧತಿ ರದ್ದುಗೊಳಿಸಿ, ಪ್ರತಿ ಬಿಪಿಎಲ್ ಕುಟುಂಬಕ್ಕೆ 30 ಕೆಜಿ ಅಕ್ಕಿ, ಪೌಷ್ಠಿಕ ಆಹಾರ ಧಾನ್ಯ ವಿತರಣೆ, ಪಡಿತರಕ್ಕೆ ಆಧಾರ್ ಕಾರ್ಡ್ ಕಡ್ಡಾಯ ಜೋಡಣೆ ರದ್ಧತಿ, ಅರ್ಹ ಬಿಪಿಎಲ್ ಕುಟುಂಬಕ್ಕೆ 10 ದಿನಗಳಲ್ಲಿ ಪಡಿತರ ಕಾರ್ಡ್ ವಿತರಣೆ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸ್ಲಂ ಜನಾಂದೋಲನದ ಜಿಲ್ಲಾ ಸಂಚಾಲಕಿ ರೇಣುಕ ಹಾವೇರಿ ಯಲ್ಲಮ್ಮ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಕೆ. ರಾಮಚಂದ್ರಪ್ಪ, ತಾಲೂಕು ಕಾರ್ಯದರ್ಶಿ ಆವರಗೆರೆ ವಾಸು, ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಕಾರ್ಯದರ್ಶಿ ಎಲ್.ಎಚ್. ಅರುಣ್‌ಕುಮಾರ್, ದಲಿತ ಸಂಘಟನೆಯ ಸಿ. ಬಸವರಾಜ್, ಇನ್ಸಾಫ್ ತಂಜೀಮುಲ್‌ನ ಸೈಯದ್ ಖಾಜಾಪೀರ್,
ಎಚ್.ವಿ. ಪ್ರಭುಲಿಂಗಪ್ಪ, ಶಶಿರೇಖಾ, ಕೆ.ಎಚ್. ಹನುಮಂತಪ್ಪ, ಶಬೀºರ್‌ಸಾಬ್, ಮರಿಯಪ್ಪ, ಶೇಖ್ ಅನ್ವರ್ ಸಾಬ್, ಟಿ.ಎಂ. ಮುರುಗೇಶ್, ನಯಾಜ್ ಅಹ್ಮದ್, ಮಹಮ್ಮದ್ ಸಲೀಂ, ಡಿ. ನಾಗರಾಜ್ ಇತರರು ಇದ್ದರು. ಶ್ರೀ ಜಯದೇವ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.