ರಾಯಬಾಗ: ಸಾಲ ನೀಡಲು ನಿರಾಕರಿಸಿದ ಬ್ಯಾಂಕ್ ಸಿಬ್ಬಂದಿಗೆ ಅಹೋರಾತ್ರಿ ಸುಮಾರು 15 ಗಂಟೆಗಳ ಕಾಲ ರೈತರು ದಿಗ್ಬಂಧನ ವಿಧಿಸಿ ಪ್ರತಿಭಟಿಸಿದ ಘಟನೆ ತಾಲೂಕಿನ ನಿಲಜಿ ಗ್ರಾಮದಲ್ಲಿ ಬುಧವಾರ ನಡೆದಿದೆ. ತಾಲೂಕಿನ ನಿಲಜಿ ಗ್ರಾಮದ ಬಸವೇಶ್ವರ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಯಪ್ಪ ನಾಗರಾಳೆ, ಕಾರ್ಯದರ್ಶಿ ಮುತ್ತಪ್ಪ ಮಗದುಮ್ಮ, ಸಿಬ್ಬಂದಿ ಬಸಪ್ಪ ಪಾಟೀಲ ಅವರನ್ನು ಗ್ರಾಮದ ಸುಮಾರು 10 ರೈತರು ಬುಧವಾರ ಸಂಜೆಯಿಂದ ಗುರುವಾರ ಬೆಳಗಿನ
ಜಾವದವರೆಗೆ ಅಹೋರಾತ್ರಿ ದಿಗ್ಬಂಧನ ಹಾಕಿ ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸವೇಶ್ವರ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ನಿಂದ ರೈತರು ಪಡೆದ ಹಳೆ ಸಾಲವನ್ನು ಮರುಪಾವತಿ ಮಾಡಿದ್ದಾರೆ. ಮರಳಿ ಮತ್ತೆ ಹೊಸ ಸಾಲ ನೀಡುವಂತೆ ಸಂಬಂಧಿ ಸಿದ ಎಲ್ಲ ದಾಖಲೆಗಳನ್ನು ನೀಡಿದ್ದರೂ ಕೂಡ ಸಾಲವನ್ನು ಕೊಡದೆ ಬ್ಯಾಂಕಿನ ಅಧ್ಯಕ್ಷ ರಾಯಪ್ಪ ನಾಗರಾಳೆ ಹಾಗೂ ಕಾರ್ಯದರ್ಶಿ ಮುತ್ತಪ್ಪ ಮಗದುಮ್ಮ ಸಾಲದ ಹಣ ದುರುಪಯೋಗ
ಪಡಿಸಿಕೊಂಡಿದ್ದಾರೆಂದು ರೈತರು ಆರೋಪಿಸಿದ್ದಾರೆ.
ಹೀಗಾಗಿ ದಿಗ್ಬಂಧನ ನಡೆಸಿದ್ದು, ವಿಷಯ ತಿಳಿದ ರಾಯಬಾಗ ತಹಶೀಲ್ದಾರ ಕೆ.ಎನ್.ರಾಜಶೇಖರ ಕುಡಚಿ ಪೊಲೀಸ್ ಸಿಬ್ಬಂದಿ ಜತೆ ತೆರಳಿ ಸಿಬ್ಬಂದಿಯನ್ನು ಬಿಡುಗಡೆಗೊಳಿಸಿದ್ದಾರೆ.