Advertisement

ದುರಸ್ತಿಗೊಂಡ ಉದ್ಯಾವರ ಬೊಳ್ಜೆ –ಮಣಿಪುರ ಸಂಪರ್ಕ ಸೇತುವೆ

10:09 AM May 03, 2019 | Sriram |

ಕಟಪಾಡಿ: ಉದ್ಯಾವರ -ಮಣಿಪುರ ಗ್ರಾಮಗಳನ್ನು ಸಂಪರ್ಕಿ ಸುವ ಕೊಂಡಿಯಾಗಿರುವ ಕಾಲು ಸೇತುವೆಯು ಸಂಚಾರಿಗಳ ಸುರಕ್ಷತೆ ಗಾಗಿ ಪ್ರಕೃತಿ ವಿಕೋಪದಡಿ 4 ಲ.ರೂ. ಅನುದಾನ ಬಳಸಿಕೊಂಡು ಹ್ಯಾಂಡಲ್ಸ್‌ ಅಳವಡಿಸಿ ಸುರಕ್ಷತಾ ಕ್ರಮ ಕೈಗೊಂಡಿರುವುದರಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

Advertisement

ಉದ್ಯಾವರ ಬೊಳ್ಜೆ-ಮಣಿಪುರ ಗ್ರಾಮವನ್ನು ಸಂಪರ್ಕಿಸುವ ಪಾಪನಾಶಿನಿ ಹೊಳೆಗೆ ಅಡ್ಡಲಾಗಿ ನಿರ್ಮಿಸಿರುವ ಕಾಲು ಸೇತುವೆಯೊಂದು ಬಳಕೆಗೆ ಅಪಾಯಕಾರಿ ಯಾಗಿ ಪರಿಣಮಿಸಿದೆ ಎಂದು ಎಚ್ಚರಿಸಿ ಉದಯವಾಣಿ ವರದಿ ಪ್ರಕಟಿಸಿತ್ತು. ಜನವರಿ ತಿಂಗಳೊಳಗಾಗಿ ಬೇಡಿಕೆ ಈಡೇರಿಸುವ ಭರವಸೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ವರ್ಗದಿಂದ ಸಿಕ್ಕಿತ್ತು.

ಉದ್ಯಾವರ ಗ್ರಾಮ ಮತ್ತು ಮಣಿಪುರ ಗ್ರಾಮಕ್ಕೆ ಕೊಂಡಿಯಾಗಿರುವ ಈ ಕಾಲುಸಂಕ ಬಳಸಿಕೊಂಡು ಬೊಳ್ಜೆ ಅಂಗನವಾಡಿ ಶಾಲೆಗೆ ಮಕ್ಕಳು ಆಗಮಿಸುತ್ತಿದ್ದರು. ದುರವಸ್ಥೆಯಿಂದಾಗಿ ಹೆತ್ತವರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕರೆ ತರಲು ಭಯಭೀತರಾಗಿ ಹಿಂದೇಟು ಹಾಕುತ್ತಿದ್ದರು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದರಿಂದ ಅಂಗನವಾಡಿ ಮಕ್ಕಳ ಸಂಚಾರಕ್ಕೆ ಸುರಕ್ಷತೆ ಕಲ್ಪಿಸಿ ದಂತಾಗಿದೆ ಎಂದು ಸ್ಥಳೀಯರಾದ ಸಬಿತಾ ಸುವರ್ಣ, ಮಣಿಪುರ ರತ್ನಾಕರ ಸಾಲ್ಯಾನ್‌, ಗೋವಿಂದ ತಿಂಗಳಾಯ ಮತ್ತಿತರರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸೇತುವೆಯು ಉಪ್ಪು ನೀರಿನ ತಡೆ ಮತ್ತು ಕಾಲು ಸಂಕವಾಗಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲ್ಪಟ್ಟಿದ್ದು 1986ರಲ್ಲಿ ಅಂದಿನ ಲೋಕೋಪಯೋಗಿ ಮತ್ತು ನೀರಾವರಿ ಸಚಿವರಾಗಿದ್ದ ಎಚ್‌.ಡಿ. ದೇವೇಗೌಡ (ಮಾಜಿ ಪ್ರಧಾನಿ)ಅವರು ಉದ್ಘಾಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next