Advertisement

ಪರವಾನಿಗೆ ರಹಿತ ವ್ಯಾಪಾರಕ್ಕೆ ಅವಕಾಶ ನೀಡದಂತೆ ಆಗ್ರಹ

11:18 PM Oct 01, 2019 | sudhir |

ಕಾರ್ಕಳ: ಪುರಸಭೆ ಮಾರುಕಟ್ಟೆ ಸಂಕೀರ್ಣದ ಮೀನು ವ್ಯಾಪಾರ ಮಳಿಗೆಯಲ್ಲದೇ ನಗರದ ಇತರೆಡೆ ಪರವಾನಿಗೆ ರಹಿತವಾಗಿ ಮೀನು ವ್ಯಾಪಾರ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಮೀನು ವ್ಯಾಪಾರಿಗಳು ಪುರಸಭೆ ಮುಖ್ಯಾಧಿಕಾರಿ ಅವರನ್ನು ಆಗ್ರಹಿಸಿದ ಘಟನೆ ಅ. 1ರಂದು ನಡೆದಿದೆ
ಪುರಸಭೆ ಮಾರುಕಟ್ಟೆಯ ಸುಮಾರು 30 ಮಂದಿ ಮೀನು ವ್ಯಾಪಾರಸ್ಥರು ಪುರಸಭೆ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ, ಕಾರ್ಕಳ ನಗರದ ಆನೆಕೆರೆ, ಉಡುಪಿ ಬಸ್‌ ಸ್ಟಾಂಡ್‌ ಬಳಿ, ಬಂಗ್ಲೆಗುಡ್ಡೆ ಹೀಗೆ ಹಲವೆಡೆ ಪರವಾನಿಗೆ ಪಡೆಯದೇ ಮೀನು ವ್ಯಾಪಾರ ನಡೆಸಲಾಗುತ್ತಿದೆ. ಇದರಿಂದ ಸುಂಕ ಪಾವತಿ ಮಾಡಿ ವ್ಯಾಪಾರ ನಡೆಸುತ್ತಿರುವ ನಮ್ಮಂತಹವರಿಗೆ ತೊಂದರೆಯಾಗಿದೆ ಎಂದು ಪ್ರತಿಭಟನಕಾರರು ತಿಳಿಸಿದರು.

Advertisement

ಮೀನು ತಂದು ಪ್ರತಿಭಟಿಸಲಿದ್ದೇವೆ
10 ದಿನಗಳ ಒಳಗಾಗಿ ಪುರಸಭೆ ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ಮೀನು ಪುರಸಭಾ ಕಚೇರಿಗೆ ತಂದು ಉಗ್ರವಾಗಿ ಪ್ರತಿಭಟಿಸಲಿದ್ದೇವೆ. ಬಳಿಕ ನಾವು ಕೂಡ ನಗರದ ವಿವಿಧೆಡೆ ಮೀನು ವ್ಯಾಪಾರ ಮಾಡಲಿದ್ದೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಬೋರ್ಡ್‌ ಅಳವಡಿಸಿದ್ದಾರೆ
ಅನಧಿಕೃತವಾಗಿ ಮೀನಿನ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳು ಪುರಸಭೆಯ ಪರವಾನಗಿ ಬೋರ್ಡ್‌ ಅಳವಡಿಸಿಕೊಂಡಿದ್ದಾರೆ. ಪುರಸಭೆ ನಗರದೆಲ್ಲೆಡೆ ಮೀನಿನ ವ್ಯಾಪಾರಕ್ಕೆ ಅನುಮತಿ ನೀಡಿದೆಯೇ ? ಎಂದು ಮುಖ್ಯ ಅಧಿಕಾರಿ ಮೇಬಲ್‌ ಡಿ’ಸೋಜಾ ಅವರನ್ನು ಪ್ರಶ್ನಿಸಿದರು. ಸಮಸ್ಯೆಗೆ ತತ್‌ಕ್ಷಣವೇ ಸ್ಪಂದಿಸುವಂತೆ ಮುಖ್ಯಾಧಿಕಾರಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿ, ಮನವಿ ಪ್ರತಿಯನ್ನು ಜಿಲ್ಲಾಧಿಕಾರಿ ಅವರಿಗೂ ರವಾನಿಸುವಂತೆ ಕೋರಿ ದರು. ಪುರಸಭಾ ಸದಸ್ಯ ಶುಭದಾ ರಾವ್‌ ಉಪಸ್ಥಿತರಿದ್ದರು.

ಶುಚಿತ್ವವಿಲ್ಲ
ಪುರಸಭೆ ಮಾರುಕಟ್ಟೆ ಸಂಕೀರ್ಣದಲ್ಲಿ ಶುಚಿತ್ವ ಕಣ್ಮರೆಯಾಗಿದೆ. ಪುರಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯವಿಲ್ಲ. ಇದರಿಂದ ವ್ಯಾಪಾರಿಗಳು ಹಾಗೂ ಮಾರುಕಟ್ಟೆಗೆ ಆಗಮಿಸುವ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಪುರಸಭೆ ಸಿಬಂದಿ ನೇಮಿಸಿ, ನಿಗದಿತವಾಗಿ ಶುಚಿಗೊಳಿಸುವ ಕಾರ್ಯಮಾಡಬೇಕು ಎಂದು ಮೀನು ವ್ಯಾಪಾರಿಗಳಾದ ಸಂದೇಶ್‌ ಹಾಗೂ ಮಾಲಕ್ಕ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next