Advertisement
ಪೌಷ್ಟಿಕ ಆಹಾರದ ಲಭ್ಯತೆ, ಮಾನಸಿಕ ಮತ್ತು ದೈಹಿಕ ಆರೋಗ್ಯ, ಮಗುವಿನ ಶಾಲಾ ದಾಖಲಾತಿ ವರ್ಷ -ಹೀಗೆ 12 ಸೂಚ್ಯಂಕಗಳನ್ನು ಆಧಾರವಾಗಿಸಿ ಬಡತನದ ತೀವ್ರತೆ ಹಾಗೂ ಬಡತನ ರೇಖೆಗಿಂತ ಕೆಳಗಿರುವವರ ತಲಾ ಎಣಿಕೆ ಅನುಪಾತವನ್ನು ಆಧರಿಸಿ ಎನ್‌ಎಂಪಿಐ (ನ್ಯಾಶನಲ್ ಮಲ್ಟಿ ಡೈಮೆನ್ಶನ್ ಇಂಡೆಕ್ಸ್) ವರದಿ ಬಿಡುಗಡೆ ಮಾಡಿರುವ ನೀತಿ ಆಯೋಗ ಬಡತನದ ಪ್ರಮಾಣ ಕಡಿಮೆ ಆಗಿರುವುದಾಗಿ ಪ್ರಕಟಿಸಿದೆ.
2015-16ನೇ ಇಸವಿ ಬಳಿಕ 5 ವರ್ಷಗಳ ಬಳಿಕ ಮತ್ತೆ ವರದಿಯನ್ನು ಬಿಡುಗಡೆ ಮಾಡಿದ್ದು, ಈ ಅವಧಿಯಲ್ಲಿ ರಾಜ್ಯದಲ್ಲಿ ಶೇ. 5.20ರಷ್ಟು ಬಡತನದ ಪ್ರಮಾಣ ಕಡಿಮೆಯಾಗಿದೆ. 2015-16ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 12.77ರಷ್ಟು ಮಂದಿ ಬಹು ಆಯಾಮದ ಬಡತನ ಸೂಚ್ಯಂಕ ಪಟ್ಟಿಯಲ್ಲಿದ್ದರು. 2021ರ ವೇಳೆಗೆ ರಾಜ್ಯದಲ್ಲಿ ಶೇ. 7.58 ಮಂದಿ ಬಡವರು ಇದ್ದಾರೆ. ಸೂಚ್ಯಂಕಗಳು ಹೀಗಿವೆ
ನೀತಿ ಆಯೋಗ ಬಿಡುಗಡೆ ಮಾಡಿರುವ ಎಂಪಿಐ ನಿಗದಿ ಮಾಡಿರುವ ವರದಿ ಅನ್ವಯ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 29.97ರಷ್ಟು ಮಂದಿ ಪೌಷ್ಟಿಕಾಂಶದ ಕೊರತೆಯನ್ನು ಎದುರಿಸುತ್ತಿದ್ದಾರೆ. ಮಕ್ಕಳು ಮತ್ತು ಹದಿಹರೆಯದವರ ಸಾವಿನ ಪ್ರಮಾಣ ಶೇ. 1.29ರಷ್ಟಿದೆ. ಶೇ. 7.89ರಷ್ಟು ಮಕ್ಕಳು ಸರಿಯಾದ ವಯಸ್ಸಿಗೆ ಶಾಲೆಗೆ ಸೇರುತ್ತಿಲ್ಲ, ಶೇ. 2.50ರಷ್ಟು ಮಕ್ಕಳು ಶಾಲೆಗೆ ಹೆಚ್ಚು ಗೈರಾಗುತ್ತಿದ್ದಾರೆ. ಶೇ. 21.47ರಷ್ಟು ಮಂದಿಗೆ ಅಡುಗೆ ಇಂಧನ ಬಳಕೆ ಕೊರತೆ ಇದ್ದು, ಶೇ. 12.58ರಷ್ಟು ಮಂದಿ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶೇ. 0.89 ಮಂದಿ ವಿದ್ಯುತ್ ಸೌಲಭ್ಯ ವಂಚಿತರಾಗಿದ್ದು, ಶೇ. 4.97 ಮಂದಿ ಬ್ಯಾಂಕ್ ಖಾತೆ ಹೊಂದಿಲ್ಲ. ಶೇ. 7.06ರಷ್ಟು ಮಂದಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗುತ್ತಿಲ್ಲ, ಶೇ. 36.20 ಮಂದಿಗೆ ಸ್ವಂತ ಮನೆ, ಶೇ. 7.31ರಷ್ಟು ಮಂದಿಗೆ ಸ್ವಂತ ಆಸ್ತಿ ಇಲ್ಲ.
Related Articles
ವರದಿ ಪ್ರಕಾರ ರಾಜ್ಯದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮಾಂತರ ಪ್ರದೇಶದಲ್ಲೇ ಬಡವರ ಸಂಖ್ಯೆ ಹೆಚ್ಚಿದೆ. ರಾಜ್ಯದ ಗ್ರಾಮಾಂತರ ಭಾಗದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. 10.33ರಷ್ಟು ಮಂದಿ ಬಡವರಿದ್ದಾರೆ. 5 ವರ್ಷಗಳ ಹಿಂದಿನ ವರದಿಯಲ್ಲಿ ಈ ಪ್ರಮಾಣ ಶೇ. 18.45ರಷ್ಟಿತ್ತು. ನಗರ ಪ್ರದೇಶದಲ್ಲಿ ಶೇ. 3.22ರಷ್ಟು ಜನತೆ ಬಡವರಾಗಿದ್ದು, ಈ ಪ್ರಮಾಣ ಹಿಂದಿನ ವರದಿಯಲ್ಲಿ ಶೇ. 4.92 ಇತ್ತು.
Advertisement
ರಾಮನಗರದಲ್ಲಿ ಕಡಿಮೆ, ಯಾದಗಿರಿಯಲ್ಲಿ ಹೆಚ್ಚು31 ಜಿಲ್ಲೆಗಳ ಪೈಕಿ ರಾಮನಗರ ಅತೀ ಕಡಿಮೆ ಬಡವರನ್ನು ಹೊಂದಿರುವ ಜಿಲ್ಲೆ ಎನಿಸಿದೆ. ಇಲ್ಲಿ ಶೇ. 0.88ರಷ್ಟು ಬಡವರಿದ್ದು, 2015- 16ನೇ ಸಾಲಿನಲ್ಲಿ ಶೇ. 8.73ರಷ್ಟು ಬಡವರಿದ್ದರು. 5 ವರ್ಷಗಳಲ್ಲಿ ಅವರ ಪ್ರಮಾಣ ಶೇ. 7.84ರಷ್ಟು ಕಡಿಮೆಯಾಗಿದೆ. ಕಳೆದ ವರದಿಯಲ್ಲಿ ಬೆಂಗಳೂರು ಗ್ರಾಮಾಂ ತರ ಅತೀ ಕಡಿಮೆ (7.03)ಬಡವರನ್ನು ಹೊಂದಿರುವ ಜಿಲ್ಲೆ ಎನಿಸಿತ್ತು. ಐದು ವರ್ಷಗಳ ಅವಧಿಯಲ್ಲಿ ಶೇ. 6.04ರಷ್ಟು ಬಡವರು ಕಡಿಮೆಯಾಗಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚು ಬಡವರಿದ್ದಾರೆ. ಜಿಲ್ಲೆಯ ಜನಸಂಖ್ಯೆಯ ಶೇ. 25.38 ಮಂದಿ ಬಡತನ ಹೊಂದಿದ್ದಾರೆ. 2015-16ನೇ ಸಾಲಿನಲ್ಲಿ ಶೇ. 41.67ರಷ್ಟು ಮಂದಿ ಬಡವರಾಗಿದ್ದರು. ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಶೇ. 16.30ರಷ್ಟು ಬಡತನದ ಪ್ರಮಾಣ ಕಡಿಮೆಯಾಗಿದೆ ಯಾದರೂ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದೆ.