ಬೆಂಗಳೂರು: ರೀಲ್ಸ್‌ಗಾಗಿ ನಾಲ್ಕೈದು ಗನ್ ಮ್ಯಾನ್ ಗಳಿಗೆ ನಕಲಿ ಎ.ಕೆ.47 ಕೊಡಿಸಿ, ಸಾರ್ವಜನಿಕರಲ್ಲಿ ಭಯ ಮೂಡಿಸಿದ ಆರೋಪದಡಿ ಶೋಕಿಲಾಲ ಕೊತ್ತನೂರು ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಜೆ.ಪಿ.ನಗರ ನಿವಾಸಿ ಅರುಣ್ ಕಠಾರೆ (26) ಬಂಧಿತ (Arrested) ಆರೋಪಿ. ಜೂ.9ರಂದು ಈತ ಎ.ಕೆ. 47 ಗನ್ ಹಿಡಿದ ಬಾಡಿಗಾರ್ಡ್‌ಗಳ ಜತೆ ಚೊಕ್ಕನಹಳ್ಳಿಯ ಭಾರತೀಯ ಸಿಟಿಯ ಲೀಲಾ ಹೋಟೆಲ್ ಬಳಿ ಬಂದಿದ್ದು, ಕೆಲವರಿಗೆ ಗನ್ ತೋರಿಸಿ ಹೆದರಿಸಿದ್ದ. ಈ ಘಟನೆಯಿಂದ ಸಾರ್ವಜನಿಕರು ಆತಂಕಗೊಂಡು ಗಸ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಜತೆಗೆ ಆರೋಪಿಯು ಗನ್ ಹಿಡಿದ
ಬಾಡಿ ಗಾರ್ಡ್‌ಗಳ ಜತೆಗೆ ಕಾರಿನಲ್ಲಿ ತೆರಳುವ ಇನ್‌ಸ್ಟ್ರಾಗ್ರಾಮ್ ರೀಲ್ಸ್ ವಿಡಿಯೋ ತೋರಿಸಿದ್ದನು. ಈ ಮಾಹಿತಿ ಮೇರೆಗೆ ಕೊತ್ತನೂರು ಠಾಣೆ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಉಪದ್ರವ ಉಂಟು ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿ ಆರೋಪಿ ಅರುಣ್ ಕಠಾರೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಚಿತ್ರದುರ್ಗ ಮೂಲದ ಅರುಣ್ ಕಠಾರೆ, ಈತ ಮೈ ತುಂಬಾ ನಕಲಿ ಚಿನ್ನಾಭರಣ ತೊಟ್ಟು, ನಕಲಿ ಗನ್ ಹಿಡಿದ ಬಾಡಿಗಾರ್ಡ್‌ಗಳು, ಸುಂದರ ಯುವತಿಯರು, ಐಷಾರಾಮಿ ಕಾರುಗಳು, ಬೈಕ್‌ಗಳ ಜತೆಗೆ ಐಷಾರಾಮಿ ಜೀವನ ಪ್ರದರ್ಶಿಸುವ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕುತ್ತಿದ್ದ. ಈತನಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಿಂಬಾಲಕರು ಇದ್ದಾರೆ. ಸದ್ಯ ಬೆಂಗಳೂರಿನ ಜೆ.ಪಿ.ನಗರದಲ್ಲಿ ನೆಲೆಸಿದ್ದಾನೆ ಎಂದು ಪೊಲೀಸರು ಹೇಳಿದರು.