Advertisement

ಉಪ ಚುನಾವಣೆ: ಪಿಐಎಲ್‌

10:08 AM Oct 10, 2018 | |

ಬೆಂಗಳೂರು: ಸಾಕಷ್ಟು ರಾಜಕೀಯ ಹಾಗೂ ಕಾನೂನು ವಿಶ್ಲೇಷಣೆಗೊಳಗಾಗಿರುವ ಶಿವಮೊಗ್ಗ, ಬಳ್ಳಾರಿ, ಮಂಡ್ಯ ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ವಿಚಾರ ಇದೀಗ ಹೈಕೋರ್ಟ್‌ ಮೆಟ್ಟಿಲೇರಿದ್ದು, ಉಪಚುನಾವಣೆಗೆ ಸಂಬಂಧಿಸಿದ ವೇಳಾಪಟ್ಟಿ ರದ್ದುಗೊಳಿಸುವಂತೆ ಕೋರಿ
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

Advertisement

ತುಮಕೂರು ಮೂಲದ ವಕೀಲ ಎಲ್‌.ಎಸ್‌. ರಮೇಶ್‌ ನಾಯಕ್‌ ಎಂಬುವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಅದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಶಿವಮೊಗ್ಗ, ಬಳ್ಳಾರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಅ.6ರಂದು ಪ್ರಕಟಿಸಿರುವ ವೇಳಾಪಟ್ಟಿ ರದ್ದುಪಡಿಸಬೇಕು. ಒಂದು ವೇಳೆ ಈ ಅರ್ಜಿಯು ವಿಚಾರಣೆಗೆ ಪರಿಗಣಿಸಲ್ಪಡುವ ಮೊದಲೇ ಗೆಜೆಟ್‌ ಅಧಿಸೂಚನೆ ಪ್ರಕಟಣೆಗೊಂಡರೆ, ಚುನಾವಣೆ ನಡೆಸದಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ
ಕೋರಲಾಗಿದೆ.

ಸಂಸದರ ರಾಜೀನಾಮೆಯಿಂದ ತೆರವುಗೊಂಡಿರುವ ಈ ಮೂರು ಕ್ಷೇತ್ರಗಳಿಗೆ ಈ ಹಂತದಲ್ಲಿ ಚುನಾವಣೆ ನಡೆಸಿದರೆ ಚುನಾವಣೆಯ ಉದ್ದೇಶ ಈಡೇರುವುದಿಲ್ಲ. ಬದಲಿಗೆ ಸರ್ಕಾರಿ ಬೊಕ್ಕಸದ ಹಣ ಪೋಲಾಗುತ್ತದೆ. ಪ್ರಜಾ ಪ್ರತಿನಿಧಿ ಕಾಯ್ದೆ-1951ರ ಸೆಕ್ಷನ್‌ 151 ಎ ಪ್ರಕಾರ “ಯಾವುದೇ ಶಾಸನ ಸಭೆಯ ಚುನಾಯಿತ ಪ್ರತಿನಿಧಿಯ ಸದಸ್ಯತ್ವ ಅವಧಿ 1 ವರ್ಷದೊಳಗಿದ್ದರೆ, ಅಂತಹ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಕಡ್ಡಾಯವಲ್ಲ
ಅನ್ನುವುದನ್ನು ಅರ್ಜಿಯಲ್ಲಿ ಉಲ್ಲೇಖೀಸಲಾಗಿದೆ.

ಆಯೋಗದ ಸ್ಪಷ್ಟನೆ
ಪ್ರಜಾಪ್ರತಿನಿಧಿ ಅಧಿನಿಯಮ 1951ರ ಕಲಂ 151 ಎ ಪ್ರಕಾರ ಲೋಕಸಭೆ ಅಥವಾ ರಾಜ್ಯ ವಿಧಾನಸಭೆಗಳ ಸಾಂಧರ್ಬಿಕ ಖಾಲಿ ಸ್ಥಾನಗಳನ್ನು ಅವು ಖಾಲಿಯಾದ ದಿನಾಂಕದಿಂದ 6 ತಿಂಗಳೊಳಗಾಗಿ ಉಪ ಚುನಾವಣೆ ಮೂಲಕ ತುಂಬವುದು ಚುನಾವಣಾ ಆಯೋಗಕ್ಕೆ ಕಡ್ಡಾಯವಾಗಿರುತ್ತದೆ. ಪ್ರಸ್ತುತ 16ನೇ ಲೋಕಸಭೆ ಅವಧಿಯ 2019ರ ಜೂ.3ಕ್ಕೆ ಕೊನೆಗೊಳ್ಳಲಿದೆ. ಅದರಂತೆ ಕರ್ನಾಟಕದ 3ಲೋಕಸಭಾ ಸ್ಥಾನಗಳ ಅವಧಿಯು ಪೂರ್ಣಗೊಳ್ಳುವ ಒಂದು ವರ್ಷಕ್ಕಿಂತ ಹೆಚ್ಚು ಅವಧಿ ಮುನ್ನ ಖಾಲಿಯಾಗಿರುವುದರಿಂದ ಅಂದರೆ, 2018ರ ಮೇ 18 ಮತ್ತು 21ಕ್ಕೆ ಖಾಲಿಯಾದ ಸ್ಥಾನಗಳನ್ನು ಆರು ತಿಂಗಳ ಒಳಗಾಗಿ ತುಂಬಲು ಪ್ರಜಾಪ್ರತಿನಿಧಿ ಅಧಿನಿಯಮದ ಪ್ರಕಾರ ಉಪ ಚುನಾವಣೆ ನಡೆಸುವ ಅವಶ್ಯಕತೆ ಇದೆ. ಆದರೆ, ಆಂಧ್ರಪ್ರದೇಶದ ಐದು ಲೋಕಸಭಾ ಸ್ಥಾನಗಳು 2018ರ ಜೂ.20ರಂದು ಖಾಲಿಯಾಗಿದ್ದು, ಈ ಸ್ಥಾನಗಳ ಉಳಿಕೆ ಅವಧಿ ಒಂದು ವರ್ಷಕ್ಕಿಂತ ಕಡಿಮೆ ಇರುವುದರಿಂದ ಉಪ ಚುನಾವಣೆ ನಡೆಸುವ ಅವಶ್ಯಕತೆ ಇರುವುದಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next