Advertisement

ಸಾಲ ಆ್ಯಪ್‌ ಗಳ ಮೇಲಿನ ಕಡಿವಾಣ ಸ್ವಾಗತಾರ್ಹ ಕ್ರಮ

02:54 PM Jun 11, 2022 | Team Udayavani |

ಚೀನ ಮೂಲದ ಸಾಲ ನೀಡುವ ಆ್ಯಪ್‌ ಗಳ ಅಕ್ರಮಗಳು ಆಗಾಗ್ಗೆ ಸುದ್ದಿಯಾಗುತ್ತಲೇ ಇವೆ. ಅದರಲ್ಲೂ ಕಡಿಮೆ ಮೊತ್ತದ ಸಾಲ ನೀಡಿ, ಹೆಚ್ಚಿನ ಬಡ್ಡಿದರ ವಿಧಿಸಿ ಗ್ರಾಹಕರನ್ನು ಶೋಷಿಸುವ ಪ್ರಕರಣಗಳಂತೂ ಇತ್ತೀಚಿನ ದಿನಗಳಲ್ಲಿ ತುಸು ಹೆಚ್ಚೇ ಆಗಿವೆ.

Advertisement

ಭಾರತೀಯ ರಿಸರ್ವ್‌ ಬ್ಯಾಂಕ್‌ ಪ್ರಕಾರವೇ ಇಂಥ ಅದೆಷ್ಟೋ ಆ್ಯಪ್‌ ಗಳು ಯಾವುದೇ ಪರ ವಾನಿಗೆಯನ್ನೇ ಪಡೆದಿರುವುದಿಲ್ಲ. ಆದರೂ ಸಾಲ ನೀಡಿ ಜನರಿಗೆ ಕಿರುಕುಳ ನೀಡುವುದಂತೂ ಎಗ್ಗಿಲ್ಲದೆ ಸಾಗಿದೆ.

ಗುರುವಾರವಷ್ಟೇ ತೆಲಂಗಾಣದ ಯುವಕನೊಬ್ಬ ಇಂಥ ಆ್ಯಪ್‌ ಮೂಲಕ ಸಾಲ ಪಡೆದು, ಅವರ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರ ಣಾಗಿದ್ದಾನೆ. ಇತ್ತೀಚಿನ ದಿನಗಳಲ್ಲಿ ಆ್ಯಪ್‌ನವರು ನೀಡುವ ಕಿರುಕುಳದಿಂದ 15 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವಿವಿಧ ರಾಜ್ಯಗಳ ಪತ್ರಿಕಾ ಮೂಲಗಳು ಹೇಳಿವೆ. ಅದರಲ್ಲಿ ಆ್ಯಪ್‌ನವರು ಸಾಲ ಕೊಡುವ ಮುನ್ನ ಗ್ರಾಹಕರ ಮೊಬೈಲ್‌ನ ಸಂಪರ್ಕ ಸಂಖ್ಯೆ ಪಟ್ಟಿ, ಫೋಟೋಗಳು, ಸ್ಥಳ, ಸಂದೇಶ ಇತ್ಯಾದಿ ರಹಸ್ಯ ವಿಷಯಗಳನ್ನು ನೋಡಲು ಅನುಮತಿ ಕೇಳಿ ಪಡೆದಿರುತ್ತಾರೆ. ಅಲ್ಲದೆ ಆರಂಭದಲ್ಲಿ ಒಂದು ರೀತಿಯ ಬಡ್ಡಿ ಹೇಳಿ, ಸಾಲ ಕೊಟ್ಟ ಅನಂತರದಲ್ಲಿ ಬಡ್ಡಿ ಪ್ರಮಾಣ ಹೆಚ್ಚಿಸಿ, ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡಿರುವ ಪ್ರಕರಣಗಳೂ ಸಾಕಷ್ಟಿವೆ.

ಒಂದು ವೇಳೆ ಇವರು ಹೇಳಿದಷ್ಟು ಹಣ ನೀಡದೇ ಹೋದಾಗ ಗ್ರಾಹಕರ ಫೋಟೋಗಳನ್ನು ಕದ್ದು, ಇವುಗಳನ್ನು ಅಸಭ್ಯ ರೀತಿಯಂತೆ ಚಿತ್ರಿಸಿ ಅವುಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಡುವ ಪ್ರಕರಣಗಳೂ ಹೆಚ್ಚಾಗಿವೆ. ಇದರಿಂದಲೇ ಬಹಳಷ್ಟು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಎಲ್ಲ ಪ್ರಕರಣಗಳನ್ನು ಅರಿತಿರುವ ಆರ್‌ಬಿಐ, ಈಗ ಸಾಲ ನೀಡುವ ಆ್ಯಪ್‌ಗಳ ಮೇಲೆ ಕಠಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಆನ್‌ಲೈನ್‌ ಸಾಲ ವಂಚಕರ ವಿರುದ್ಧ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬ ವಿಚಾರದಲ್ಲಿ ನಿಯಮಗಳನ್ನು ರೂಪಿಸುತ್ತಿದ್ದೇವೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ. ಒಂದು ರೀತಿಯಲ್ಲಿ ಆರ್‌ಬಿಐನ ಈ ಕ್ರಮ ಸ್ವಾಗತಾರ್ಹವೇ ಆಗಿದೆ.

Advertisement

ಆ್ಯಪ್‌ನಲ್ಲಿ ಸಾಲ ನೀಡುವ ಮಂದಿ ಏನಾದರೂ ಅಕ್ರಮವಾಗಿ ನಡೆದುಕೊಂಡರೆ ಅಥವಾ ಹೆಚ್ಚು ಕಿರುಕುಳ ಕೊಟ್ಟರೆ ಪೊಲೀಸರಿಗೆ ದೂರು ನೀಡಲು ಅವಕಾಶವಿದೆ. ಆದರೆ ಬಹಳಷ್ಟು ಪ್ರಕರಣಗಳಲ್ಲಿ ಜನ ತಮ್ಮ ಖಾಸಗಿತನ ಬಯಲಾಗುತ್ತದೆ ಎಂಬ ಕಾರಣಕ್ಕೆ ಪೊಲೀಸರಿಗೆ ದೂರು ನೀಡದೆ ಹಾಗೇ ಉಳಿದುಬಿಡುತ್ತಾರೆ. ಇದರಿಂದಾಗಿಯೇ ಸಾಲ ನೀಡುವವರು ಹೆಚ್ಚು ಕಿರುಕುಳ ನೀಡಲು ಸಾಧ್ಯವಾಗುತ್ತಿದೆ.

ಇದಕ್ಕಿಂತ ಮುಖ್ಯವಾದ ಸಂಗತಿ ಎಂದರೆ, ಇಲ್ಲಿ ಆ್ಯಪ್‌ಗಳನ್ನು ದೂರುವುದಕ್ಕಿಂತ, ಸುಲಭವಾಗಿ ಸಾಲ ಕೊಡುತ್ತಾರೆ ಎಂಬ ಕಾರಣಕ್ಕಾಗಿ ಇಂಥ ಆ್ಯಪ್‌ಗಳ ಜಾಲಕ್ಕೆ ಬೀಳದಿರುವುದು ಉತ್ತಮ. ಹಣಕಾಸಿನ ವಿಚಾರದಲ್ಲಿ ಖಾಸಗಿತನ ಉಳಿಸಿಕೊಂಡಷ್ಟು ಒಳ್ಳೆಯದು. ಪ್ರತಿದಿನವೂ ಎಲ್ಲ ಕಡೆಗಳಲ್ಲಿ ಇಂಥ ಸಾಲದ ಆ್ಯಪ್‌ಗಳ ಕುರಿತಾಗಿ ಅಸಂಖ್ಯಾಕ ಜಾಹೀರಾತುಗಳು ಕಾಣಿಸುತ್ತಲೇ ಇವೆ. ಇವುಗಳಿಗೆ ಬಲಿಯಾದರೆ ಕಷ್ಟವಂತೂ ಕಟ್ಟಿಟ್ಟ ಬುತ್ತಿ. ಅಲ್ಲದೆ ಯಾವುದೇ ಆಧಾರವಿಲ್ಲದೆ ಸಾಲ ಕೊಡುತ್ತಾರೆ ಎಂದರೆ ಒಂದೊಮ್ಮೆ ಯೋಚಿಸುವುದು ಉತ್ತಮ. ಗೂಗಲ್‌ ಪ್ಲೇಸ್ಟೋರ್‌ ಮತ್ತು ಆ್ಯಪಲ್‌ ಸ್ಟೋರ್‌ನವರೂ ಇಂಥ ಆ್ಯಪ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಒಂದು ವೇಳೆ, ಸಂಶಯ ಬಂದರೆ ಅವುಗಳನ್ನು ಡಿಲೀಟ್‌ ಮಾಡುವಂತಹ ಕೆಲಸವೂ ಆಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next