Advertisement

ಅನ್ನದಾತನ ಕೈ ಹಿಡಿಯದ ಜೋಳ..!

10:12 AM Feb 27, 2019 | Team Udayavani |

ಗಜೇಂದ್ರಗಡ: ರೈತರ ಸಂಕಷ್ಟ ದಿನೇ ದಿನೇ ಉಲ್ಪಣಿಸುತ್ತಿದೆ. ಇತ್ತ ಮಳೆಯೂ ಇಲ್ಲ, ಅತ್ತ ಬೆಳೆಯೂ ಇಲ್ಲದಂತಾಗಿದೆ. ಬಹು ನಿರೀಕ್ಷೆ ಹೊತ್ತು ಬಿತ್ತಿದ ಜೋಳದ ಫಸಲಿನ ಇಳುವರಿ ಸಂಪೂರ್ಣ ಕುಸಿತ ಕಂಡಿರುವುದು ಅನ್ನದಾತರ ಎದೇ ಝಲ್‌ ಎನಿಸಿದೆ.

Advertisement

ಹಿಂಗಾರು ಹಂಗಾಮಿನ ಬಹು ನಿರೀಕ್ಷಿತ ಬಿಳಿ ಜೋಳ ಬೆಳೆ ಮಳೆಯ ಕೊರತೆಯಿಂದ ಇಳುವರಿಯಲ್ಲಿ ಸಂಪೂರ್ಣ ಕುಸಿತ ಕಂಡಿದೆ. ನಿರೀಕ್ಷಿಸಿದಷ್ಟು ಇಳುವರಿ ಬಾರದಿರುವುದರಿಂದ ಅನ್ನದಾತರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಪ್ರಸಕ್ತ ವರ್ಷ ಮುಂಗಾರು-ಹಿಂಗಾರು ಹಂಗಾಮಿನಲ್ಲಿ ಮಳೆ ಸರಿಯಾಗಿ ಆಗದೇ ಇರುವುದರಿಂದ ಭೂಮಿ ಹಸಿ ಹಿಡಿಯಲಿಲ್ಲ. ಹಿಂಗಾರು ಬಿತ್ತನೆಗೆ ಮೊದಲೇ ತುಸು ಮಳೆ ಸುರಿಯಿತಾದರೂ, ಕಪ್ಪು ಮಣ್ಣು ಪ್ರದೇಶಗಳಲ್ಲಿ ತೇವಾಂಶ ಕೊರತೆ ಎದುರಾಗಿರುವುದರಿಂದ ಜೋಳದ ಫಸಲು ಸಮೃದ್ಧವಾಗಿ ಬಾರದಿರಲು ಕಾರಣವಾಗಿದೆ.

ಈ ಭಾಗದ ಪ್ರಮುಖ ಆಹಾರ ಧಾನ್ಯ ಜೋಳದ ಇಳುವರಿ ಕಡಿಮೆಯಾಗಿದೆ. ರೊಟ್ಟಿ ತಿಂದವನ ರಟ್ಟಿ ಬಲು ಗಟ್ಟಿ, ರೊಟ್ಟಿ ತಿಂದವ ಜಟ್ಟಿ ಎಂಬ ನಾಣ್ನುಡಿಯಲ್ಲಿ ಜೋಳದ ಮಹತ್ವ ಅಡಗಿದೆ. ಉತ್ತರ ಕರ್ನಾಟಕ ಜನರ ಮುಖ್ಯ ಆಹಾರ ಜೋಳ. ಬಡವರು ಹಾಗೂ ಶ್ರೀಮಂತರಿಗೂ ನಿತ್ಯದ ಊಟಕ್ಕೆ ಜೋಳದ ರೊಟ್ಟಿ ಕಡ್ಡಾಯವಾಗಿ ಬೇಕು. ರೊಟ್ಟಿ ಇಲ್ಲದಿದ್ದರೆ ಊಟ ಅಪೂರ್ಣ. ಅಂತಹ ಜೋಳದ ಬೆಳೆಯ ಇಳುವರಿ ಕಡಿಮೆ ಬಂದಿರುವುದು ರೈತಾಪಿ ವಲಯಕ್ಕೆ ಚಿಂತೆಗೀಡು ಮಾಡಿದೆ.

ಗಜೇಂದ್ರಗಡ, ಕೊಡಗಾನೂರ, ನಿಡಗುಂದಿ, ಸೂಡಿ, ಕಳಕಾಪೂರ, ಅಬ್ಬಿಗೇರಿ, ನರೇಗಲ್‌, ಇಟಗಿ, ಮುಶಿಗೇರಿ, ಜಕ್ಕಲಿ, ಹಾಲಕೇರಿ, ಮಾರನಬಸರಿ, ಹೊಳೆಆಲೂರ ಕಲ್ಲಿಗನೂರ, ನೆಲ್ಲೂರ ಗ್ರಾಮ ಸೇರಿದಂತೆ ತಾಲೂಕಿನ 4 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ರೈತ ಸಮೂಹ ಜೋಳ ಬಿತ್ತನೆ ಮಾಡಿದ್ದರು. ಆದರೆ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಫಸಲು ಉತ್ತಮವಾಗಿ ಬಾರದೇ ರೈತರನ್ನು ಮತ್ತೇ ಸಾಲದ ಕೂಪಕ್ಕೆ ತಳ್ಳುವಂತೆ ಮಾಡಿದೆ.

ಸದಾ ಒಂದಿಲ್ಲೊಂದು ಸಂಕಷ್ಟದ ಸುಳಿಗೆ ಸಿಲುಕಿ ನಲಗುತ್ತಿರುವ ರೈತ ಸಮೂಹವನ್ನು ಈ ಬಾರಿ ಕಡಲೆ, ಜೋಳ ಬೆಳೆಗಳು ಕೈ ಕೊಟ್ಟಿರುವುದರಿಂದ ಅನ್ನದಾತ ಕಷ್ಟಗಳ ದಿನಗಳನ್ನು ದೂಡುತ್ತಿದ್ದಾನೆ. ಜೊತೆಗೆ ಜಾನುವಾರುಗಳನ್ನು ಪೋಷಿಸಲಾಗದೇ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಸಕ್ತ ವರ್ಷ ಬರದ ಭೀಕರತೆ ಮತ್ತಷ್ಟು ಹೆಚ್ಚಾಗಿರುವುದು ಕೃಷಿಕರಿಗೆ ತಲೆನೋವಾಗಿ ಪರಿಣಮಿಸಿದೆ.

Advertisement

ಎರೆ ಪ್ರದೇಶದಲ್ಲಿ ಬೆಳೆದ ಜೋಳ ಕಡಿಮೆ ಎಂದರೂ ಎಕರೆ ಒಂದಕ್ಕೆ ಕನಿಷ್ಟ 4 ರಿಂದ 5 ಕ್ವಿಂಟಲ್‌ ಜೋಳ ಇಳುವರಿ ಬರುತಿತ್ತು. ಆದರೆ ಈ ವರ್ಷ ಎಕರೆ ಒಂದಕ್ಕೆ ಕೇವಲ 1 ಕ್ವಿಂಟಲ್‌ ಇಳುವರಿ ಬಾರದಿರುವುದು ರೈತರನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ.

ರೈತರ ಗೋಳು: ಬಹುಶಃ ರೈತರ ಗೋಳಿಗೆ ಕೊನೆಯೇ ಇಲ್ಲವೋ ಏನೋ ಎಂಬ ಅನುಮಾನ ಇತ್ತೀಚಿನ ದಿನಗಳಲ್ಲಿ ಕಾಡುತ್ತಿದೆ. ಕೃಷಿ ವಲಯದ ವಿದ್ಯಮಾನಗಳೇ ಇದಕ್ಕೆ ಸಾಕ್ಷಿಯಾಗಿವೆ. ಒಂದೆಡೆ ಮಳೆ ಕೈ ಕೊಟ್ಟಿರುವುದು, ಇನ್ನೊಂದೆಡೆ ಸರ್ಕಾರ ಸೂಕ್ತ ಪರಿಹಾರ ಧನ ನೀಡದಿರುವುದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕು ನರಳುತ್ತಿರುವ ರೈತ ಸಮೂಹ ಆರ್ಥಿಕವಾಗಿ ಚೇತರಿಸಿಕೊಳ್ಳಲು ಆಗದೇ ಸಂಕಷ್ಟ ಎದುರಿಸುತ್ತಿದ್ದಾರೆ.

ಬರ, ಪ್ರಕೃತಿ ವಿಕೋಪದಂತಹ ಒಂದಿಲ್ಲೊಂದು ಸಂಕಷ್ಟಗಳಿಗೆ ಅನ್ನದಾತ ತುತ್ತಾಗಿ ಸಾಲ ಶೂಲ, ಮಾಡಿ ಬೀಜ ಗೊಬ್ಬರ ಖರೀದಿಸಿ, ತಮ್ಮ ಜಮೀನಿನಲ್ಲಿ ಬಿತ್ತಿದ ಬೆಳೆ ಮಳೆಯ ಕೊರತೆಯಿಂದ ರೈತರನ್ನು ಕಂಗಾಲಾಗುವಂತೆ ಮಾಡಿದೆ. ಸಾಂಪ್ರದಾಯಕ ಬೆಳೆಗಳಾದ ಜೋಳ, ಸೂರ್ಯಕಾಂತಿಯಂತಹ ಬೆಳೆಗಳ ವ್ಯವಸಾಯವೇ ಬೇಡ ಎನ್ನುವ ಸ್ಥಿತಿ ರೈತ ಸಮುದಾಯಕ್ಕೆ ಬಂದೊದಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ನಾಲ್ಕು ಎಕರೆ ಜಮೀನ್ಯಾಗ ಬಿಳಿಜೋಳ ಬಿತ್ತಿದ್ದಿವ್ರೀ . ಆದ್ರ ಇಳುವರಿ ಮಾತ್ರ ಎಕರೆಗೆ ಒಂದ ಕ್ವಿಂಟಲ್‌ ಸಹ ಬರದಂಗಾಗೇತ್ರಿ. ಮಳಿಯಪ್ಪ ಇಲ್ಲದ ಬೆಳೆಯೆಲ್ಲಾ ಹಾಳಾಗಿ ಹೋಗೇತ್ರಿ, ಭೂಮಿ ನಿಗಿ, ನಿಗಿ ತೈತ್ರಿ. ವಾತಾವರಣ ನೋಡಿದ್ರ, ಒಕ್ಕಲತನ ಬ್ಯಾಡ್‌ ಅನ್ಸುತ್ರಿ.
ಯಮನಪ್ಪ ಮಾದರ,
ಬಿಳಿ ಜೋಳ ಬೆಳೆದ ರೈತ 

„ಡಿ.ಜಿ ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next