Advertisement
ನ್ಯಾಯಾಧಿಕರಣ ನಿಗದಿಪಡಿಸಿದಂತೆ ಕಾವೇರಿ ನದಿಯಿಂದ ನೀರು ಬಿಡುಗಡೆಗೆ ಆದೇಶಿಸಬೇಕು ಎಂದು ಕೋರಿ ಈಗಾಗಲೇ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಆದರೆ, ಕಾವೇರಿ ಕೊಳ್ಳ ವ್ಯಾಪ್ತಿಯ ನಾಲ್ಕು ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಳೆದ ವರ್ಷಕ್ಕಿಂತಲೂ ಕಡಿಮೆ ಇದ್ದು, ನೀರು ಬಿಡುವ ಸ್ಥಿತಿಯಲ್ಲಿ ಕರ್ನಾಟಕ ಇಲ್ಲ. ಹೀಗಾಗಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಮುಂದೇನು ಎಂಬ ಗಂಭೀರ ಪ್ರಶ್ನೆ ಈಗ ರಾಜ್ಯವನ್ನ ಕಾಡುವಂತಾಗಿದೆ.
ಮಳೆ ಕೈಕೊಟ್ಟಿರುವುದರಿಂದ ಕರ್ನಾಟಕ ನಿಗದಿತ ಪ್ರಮಾಣದಲ್ಲಿ ನೀರು ಹರಿಸುವುದಿಲ್ಲ ಎಂಬ ಮುನ್ಸೂಚನೆ ಹಿನ್ನೆಲೆಯಲ್ಲಿ ಈಗಾಗಲೇ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ನಿಗದಿತ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಕೋರಿದೆ. ಇದಕ್ಕೆ ಪ್ರತಿಯಾಗಿ ವಾದ ಮಂಡಿಸಲು ಕರ್ನಾಟಕವೂ ಸಿದ್ಧತೆ ನಡೆಸುತ್ತಿದ್ದು, ನೀರು ಹರಿಸಲು ಸಾಧ್ಯವಾಗದಿರುವ ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸುತ್ತಿದೆ.
Related Articles
Advertisement
ಅದರಲ್ಲೂ ಮುಖ್ಯವಾಗಿ ಕೆಆರ್‌ಎಸ್‌ನಲ್ಲಿ ಡೆಡ್ ಸ್ಟೋರೇಜ್ ಹೊರತುಪಡಿಸಿ 5.39 ಟಿಎಂಸಿ ನೀರು ಮಾತ್ರ ಇದೆ. ಇದು ಜಲಾಶಯದ ಸಾಮರ್ಥ್ಯದ ಶೇ. 12ರಷ್ಟು ಮಾತ್ರವಾಗಿದ್ದು, ಭರ್ತಿಯಾಗಲು ಇನ್ನೂ ಸುಮಾರು 40 ಟಿಎಂಸಿ ನೀರು ಅಗತ್ಯವಿದೆ. ಅದೇ ರೀತಿ ಜಲಾಶಯದ ಒಳಹರಿವಿನ ಪ್ರಮಾಣವೂ 4497 ಕ್ಯೂಸೆಕ್ ಮಾತ್ರ ಇದ್ದು, ಹೊರಹರಿವು 2080 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ಅವಧಿಗೆ 7347 ಕ್ಯೂಸೆಕ್ ಒಳಹರಿವು ಮತ್ತು 3886 ಕ್ಯೂಸೆಕ್ ಹೊರಹರಿವು ಇತ್ತು.
ಕಳೆದ ವರ್ಷಕ್ಕಿಂತಲೂ ಕಡಿಮೆ ಮಳೆ: ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಇದುವರೆಗೆ ಮಳೆ ಪ್ರಮಾಣ ಕಳೆದ ವರ್ಷಕ್ಕಿಂತಲೂ ಕಡಿಮೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಶೇ. 38ರಷ್ಟು ಮಳೆ ಕೊರತೆ ಕಂಡುಬಂದಿದ್ದರೆ ಈ ವರ್ಷ ಶೇ. 45ರಷ್ಟು ಕೊರತೆಯಿದೆ. ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಗೆ ಹೆಚ್ಚು ನೀರು ಹರಿದು ಬರಬೇಕಾದರೆ ಕೇರಳದ ವೈನಾಡು ಪ್ರದೇಶ ಮತ್ತು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಬೇಕು. ಪ್ರಸ್ತುತ ಈ ಪ್ರದೇಶದಲ್ಲಿ ನಿರೀಕ್ಷಿತ ಮಳೆ ಬೀಳುತ್ತಿಲ್ಲ. ಮುಂದಿನ ದಿನಗಳಲ್ಲಿ ಮಳೆಯಾದರೂ ಜಲಾಶಯಕ್ಕೆ ನೀರು ಬಂದು ಭರ್ತಿಯಾಗುವುದು ಕಷ್ಟಸಾಧ್ಯ ಎನ್ನಲಾಗಿದೆ.
ಕಾವೇರಿ ಕೊಳ್ಳದ ಜಲಾಶಯಗಳ ನೀರಿನ ಮಟ್ಟ- ಟಿಎಂಸಿಗಳಲ್ಲಿ (ಡೆಡ್ ಸ್ಟೋರೇಜ್ ಹೊರತುಪಡಿಸಿ)ಜಲಾಶಯ ಗರಿಷ್ಠ ಸಂಗ್ರಹ ಇಂದಿನವರೆಗಿನ ಸಂಗ್ರಹಕಳೆದ ವರ್ಷ ಇದೇ ದಿನದ ಸಂಗ್ರಹ
ಕೆಆರ್‌ಎಸ್ 45.05 5.39 11.60
ಕಬಿನಿ 15.67 4.80 5.72
ಹೇಮಾವತಿ 35.76 5.09 11.44
ಹಾರಂಗಿ 8.07 2.98 5.97 – ಪ್ರದೀಪಕುಮಾರ್ ಎಂ