Advertisement

Udupi ಜಿಲ್ಲೆಯಲ್ಲಿ ತಗ್ಗಿದ ಮಳೆ: ನೆರೆ ಇಳಿಕೆ; ಮುಂದುವರಿದ ಸಂಕಷ್ಟ

11:30 PM Jul 09, 2024 | Team Udayavani |

ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ ಮಳೆ ಪ್ರಮಾಣ ಕಡಿಮೆಯಾಗಿದ್ದು, ಮಂಗಳವಾರ ಹಲವೆಡೆ ಆವರಿಸಿದ್ದ ನೆರೆ ಇಳಿಕೆಯಾಗಿದೆ.

Advertisement

ಸೋಮವಾರ ತಡರಾತ್ರಿ, ಮಂಗಳವಾರ ಸಂಜೆ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ಕಾರ್ಕಳ, ಕುಂದಾಪುರ, ಬೈಂದೂರು, ಉಡುಪಿ, ಬ್ರಹ್ಮಾವರ, ಕಾಪು, ಸಿದ್ದಾಪುರ, ಹೆಬ್ರಿ ಸಹಿತ ಹಲವೆಡೆ ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಬಿಸಿಲು ವಾತಾವರಣವಿದ್ದು, ಅನಂತರ ಮೋಡ ಕವಿದ ವಾತಾವರಣದ ನಡುವೆ ಬಿಟ್ಟುಬಿಟ್ಟು ಸಾಧಾರಣ ಮಳೆಯಾಗಿದೆ.

ಸೋಮವಾರ ಸುರಿದ ವ್ಯಾಪಕ ಮಳೆಯಿಂದ ನಲುಗಿದ್ದ ಉಡುಪಿ ನಗರ ಪ್ರದೇಶದಲ್ಲಿ ಜನ ಜೀವನ ಸಹಜ ಸ್ಥಿತಿಗೆ ಮರಳಿದೆ. ಗುಂಡಿಬೈಲು, ಬೈಲಕೆರೆ, ಮಠದಬೆಟ್ಟು, ಕೃಷ್ಣಮಠ ಪಾರ್ಕಿಂಗ್‌, ಬನ್ನಂಜೆ ಮೂಡನಿಡಂಬೂರು ಭಾಗದಲ್ಲಿ ನೆರೆ ಸಂಪೂರ್ಣ ಇಳಿಮುಖವಾಗಿತ್ತು. ಕೃತಕ ನೆರೆಯಲ್ಲಿ ಸಿಲುಕಿದ್ದ 60ಕ್ಕೂ ಅಧಿಕ ಮಂದಿಯನ್ನು ಶ್ರೀಕೃಷ್ಣ ಮಠ ಸಮೀಪ ಇರುವ ಮಥುರಾ ಕಂಫ‌ರ್ಟ್‌ನಲ್ಲಿ ಇರಿಸಲಾಗಿದ್ದು, ಸಂತ್ರಸ್ತರು ಮಂಗಳವಾರ ಮನೆಗಳಿಗೆ ತೆರಳಿದರು.

ಕಾಳಜಿ ಕೇಂದ್ರ
ನಗರಸಭೆ ಎದುರಿನ ಸರಕಾರಿ ಶಾಲೆ ಹಾಗೂ ಬನ್ನಂಜೆ ನಾರಾಯಣ ಗುರು ಮಂದಿರದಲ್ಲಿ ಕಾಳಜಿ ಕೇಂದ್ರ ಗುರುತಿಸಲಾಗಿತ್ತು. ಆದರೆ ಯಾರೂ ಇಲ್ಲಿಗೆ ಬಾರದ ಹಿನ್ನೆಲೆಯಲ್ಲಿ ಅಲ್ಲಿ ಸೇವೆ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಎಲ್ಲರನ್ನು ಮಥುರಾ ಕಂಫ‌ರ್ಟ್‌ಗೆ ಕಳುಹಿಸಿದ್ದೇವೆ ಎಂದು ಉಡುಪಿ ತಹಶೀಲ್ದಾರ್‌ ಗುರುಪ್ರಸಾದ್‌ ಹಾಗೂ ಪೌರಾಯುಕ್ತ ರಾಯಪ್ಪ ತಿಳಿಸಿದ್ದಾರೆ.

ಮಳೆ ಹಿನ್ನೆಲೆಯಲ್ಲಿ ನಿರಾಶ್ರಿತರಿಗೆ ಅಗತ್ಯ ಸೌಲಭ್ಯ ಒದಗಿಸಲು ಕಾಳಜಿ ಕೇಂದ್ರ ತೆರೆಯುವಂತೆ ಸರಕಾರ ಹಾಗೂ ಜಿಲ್ಲಾಡಳಿತದಿಂದ ಕಂದಾಯ ಇಲಾಖೆಗೆ ಸೂಚನೆ ನೀಡಿದ್ದರೂ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಕಾಳಜಿ ಕೇಂದ್ರಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಹೀಗಾಗಿ ಈ ಕಾಳಜಿ ಕೇಂದ್ರಕ್ಕೆ ಯಾರು ಹೋಗಿಲ್ಲ ಎಂದು ಹೇಳಲಾಗುತ್ತಿದೆ.

Advertisement

ಮಳೆ ಪ್ರಮಾಣ ಕಡಿಮೆ ಇದ್ದರೂ ಗಾಳಿ ಮಳೆಗೆ ಕೆಲವು ಕಡೆಗಳಲ್ಲಿ ಮನೆ ಜಾನುವಾರು ಕೊಟ್ಟಿಗೆಗಳಿಗೆ ಹಾನಿ ಸಂಭವಿಸಿದೆ. ಕುಂದಾಪುರ ತಾಲೂಕಿನ ಕಾಳಾವರ, ಕೋಟೇಶ್ವರ, ತಲ್ಲೂರು, ಕಾರ್ಕಳ ತಾಲೂಕಿನ ಬೋಳ, ಹಿರ್ಗಾನ , ಮುಡಾರು, ಬೈಂದೂರು ತಾಲೂಕಿನ ಕಂಬದಕೋಣೆ, ಉಡುಪಿ ತಾಲೂಕಿನ ಕೊರಂಗ್ರಪಾಡಿಯಲ್ಲಿ ಮನೆಗಳಿಗೆ ಹಾನಿ ಸಂಭವಿಸಿದೆ. ಕಾವ್ರಾಡಿ, ಕೆರಾಡಿ, ಗುಜ್ಜಾಡಿಯಲ್ಲಿ ಮೂರು ಜಾನುವಾರು ಕೊಟ್ಟಿಗೆಗೆ ಹಾನಿಯಾಗಿದೆ. ಹಾರ್ದಳ್ಳಿಯಲ್ಲಿ ಭತ್ತದ ಗದ್ದೆಗೆ ಹಾನಿ ಸಂಭವಿಸಿದೆ.

ಕಾರ್ಕಳ 78.2, ಕುಂದಾಪುರ 53.8, ಉಡುಪಿ 83.1, ಬೈಂದೂರು 55.1, ಬ್ರಹ್ಮಾವರ 74.4, ಕಾಪು 98.8, ಹೆಬ್ರಿ 55.1 ಮಿ. ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಗಳ ಕಾಲ 66.7 ಮಿ. ಮೀ. ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next