Advertisement

ಮಳೆಯೇ ಇಲ್ಲದಿದ್ದರೂ ತಿಂಗಳಲ್ಲಿ 2ನೇ ಬಾರಿ ಮಹಾ ನೆರೆ

06:03 PM Aug 30, 2024 | Team Udayavani |

■ ಉದಯವಾಣಿ ಸಮಾಚಾರ
ಹುಬ್ಬಳ್ಳಿ: ಕರ್ನಾಟಕದಲ್ಲಿ ವರುಣನ ಆರ್ಭಟ ಇಲ್ಲದಿದ್ದರೂ ಮಹಾರಾಷ್ಟ್ರದ ಮಳೆಗೆ ರಾಜ್ಯದ ನದಿಗಳು ಮತ್ತೆ ಉಕ್ಕಿ ಹರಿಯುತ್ತಿದ್ದು ಒಂದೇ ತಿಂಗಳಲ್ಲಿ ಎರಡನೇ ಬಾರಿ “ನೆರೆ’ ಆವರಿಸಿದೆ. ಕೃಷ್ಣಾ, ಧೂಧಗಂಗಾ, ವೇದಗಂಗಾ, ಘಟಪ್ರಭಾ, ಭೀಮಾ ನದಿಗಳು ಮಹಾರಾಷ್ಟ್ರದ ಜಲಾಶಯಗಳಿಂದ ಬಿಟ್ಟಿರುವ ನೀರಿನಿಂದಲೇ ಅಪಾಯದ ಮಟ್ಟ ಮೀರಿದ್ದು, 18 ಸೇತುವೆಗಳು ಮುಳುಗಡೆಯಾಗಿ ಸಂಚಾರ ಕಡಿತಗೊಂಡಿದೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

Advertisement

ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ವಾರದಿಂದ ಧಾರಾಕಾರ ಮಳೆಯಾಗುತ್ತಿದೆ. ಹೀಗಾಗಿ ಕೃಷ್ಣಾ ನದಿಗೆ 1.26 ಲಕ್ಷ,
ವೇದಗಂಗಾ, ದೂಧಗಂಗಾ ನದಿಗೆ ತಲಾ 26 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು ಒಂದೇ ದಿನದಲ್ಲಿ ಕೃಷ್ಣಾ ನದಿ 2 ಅಡಿ,
ವೇದಗಂಗಾ, ದೂಧಗಂಗಾ ನದಿ ಒಂದು ಅಡಿಯಷ್ಟು ಏರಿಕೆಯಾಗಿ ಅಪಾಯದ ಮಟ್ಟ ಮೀರಿವೆ. 7 ಸೇತುವೆ ಮುಳುಗಡೆಯಾಗಿವೆ.

ಕಾರದಗಾ ಬಂಗಾಲಿ ಬಾಬಾ ದೇವಸ್ಥಾನ, ಯಕ್ಸಂಬಾ ಮುಲ್ಲಾನಕ್ಕಿ ದರ್ಗಾ, ಕಲ್ಲೋಳ ಗ್ರಾಮದ ದತ್ತ ಮಂದಿರ ಜಲಾವೃತವಾಗಿವೆ.
ಅಂಬೋಲಿ ಘಟ್ಟ ಪ್ರದೇಶದಲ್ಲಿ ನಿರಂತರ ಮಳೆ ಆಗುತ್ತಿರುವುದರಿಂದ ಘಟಪ್ರಭಾ ನದಿ ಕೂಡ ಅಬ್ಬರಿಸುತ್ತಿದೆ. ಹಿಡಕಲ್‌ ಡ್ಯಾಂನಿಂದ 25 ಸಾವಿರ ಕ್ಯೂಸೆಕ್‌ ನೀರು ಬಿಟ್ಟಿದ್ದರಿಂದ ಗೋಕಾಕ, ಮೂಡಲಗಿಯಲ್ಲೂ ನೆರೆ ಆವರಿಸಿದೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನಲ್ಲಿ 11 ಸೇತುವೆಗಳು ಮುಳುಗಡೆಯಾಗಿವೆ. ಮುಧೋಳ-ಯಾದವಾಡ ಸೇತುವೆ ಮುಳುಗಡೆ ಹಂತ ತಲುಪಿದೆ.

ತುಂಗಭದ್ರಾ ಭರ್ತಿಗೆ 4 ಅಡಿ ಬಾಕಿ:
ಮಹಾರಾಷ್ಟ್ರದ ಉಜಿನಿ, ವೀರ ಜಲಾಶಯ ದಿಂದ 1.45 ಲಕ್ಷ ಕ್ಯೂಸೆಕ್‌ ನೀರು ಬಿಡುತ್ತಿರುವುದರಿಂದ ಭೀಮಾ ನದಿ ಸಹ ಅಪಾಯದ ಮಟ್ಟ ಮೀರಿದೆ. ಭೀಮಾ ಏತ ನೀರಾವರಿ ಜಲಾಶಯದ 29 ಗೇಟ್‌ಗಳ ಪೈಕಿ 22 ಗೇಟ್‌ ಗಳ ಮೂಲಕ 1.45 ಲಕ್ಷ ಕ್ಯೂಸೆಕ್‌ ನೀರು ಹರಿ ಬಿಡುತ್ತಿದ್ದು ಸುಕ್ಷೇತ್ರ ದೇವಲ್‌ ಗಾಣಗಾ ಪುರ-ಇಟಗಾ ಸಂಪರ್ಕ ಕಡಿತವಾಗಿದೆ.

ಹೇಮಾವತಿ ಡ್ಯಾಂ ಒಂದೇ ತಿಂಗಳಲ್ಲಿ 2ನೇ ಬಾರಿ ಭರ್ತಿ
ಈ ವರ್ಷ ಹೇಮಾವತಿ ಜಲಾಶಯ ತಿಂಗಳಲ್ಲಿ ಎರಡು ಬಾರಿ ಭರ್ತಿಯಾಗಿದೆ. ಜುಲೈ 21ರಂದು ಜಲಾಶಯ ಭರ್ತಿಗೆ ಇನ್ನೂ 2 ಅಡಿ
ಬಾಕಿಯಿರುವಾಗಲೇ (2920 ಅಡಿ) ನದಿಗೆ 25,989 ಕ್ಯುಸೆಕ್‌ ಅನ್ನು ಬಿಡಲಾಗಿತ್ತು. ಆ.29ರಂದು 2ನೇ ಬಾರಿ ಒಳ ಹರಿವು ಹೆಚ್ಚಾದ ಕಾರಣ ನದಿಗೆ ಮತ್ತೂಮ್ಮೆ 9000 ಕ್ಯೂಸೆಕ್‌ಅನ್ನು ನದಿಗೆ ಬಿಡಲಾಗುತ್ತಿದೆ. ಜಲಾಶಯಕ್ಕೆ ಗುರು ವಾರ 13,771 ಕ್ಯುಸೆಕ್‌ ಒಳ ಹರಿವಿದ್ದು, ನಾಲೆಗಳಿಗೆ ಹರಿಸುತ್ತಿರುವ ನೀರು ಸೇರಿದಂತೆ ಜಲಾಶಯದಿಂದ 13775 ಕ್ಯುಸೆಕ್‌ ನೀರು ಹೊರ ಬಿಡಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.