Advertisement
ಇದೀಗ ಕಳೆದ ಎರಡು ದಿನಗಳಿಂದ ಮಳೆ ಸಂಪೂರ್ಣ ಬಿಡುವು ಕೊಟ್ಟಿರುವುದರಿಂದ ಕಬಿನಿ ಜಲಾಶಯಕ್ಕೆ ಒಳ ಹರಿವು ಕಡಿಮೆಯಾಗಿದ್ದರಿಂದ ನದಿಗೆ ಬಿಡುತ್ತಿದ್ದ ನೀರಿನ ಪ್ರಮಾಣವನ್ನೂ ಕಡಿಮೆ ಮಾಡಲಾಗಿದೆ. ಹೀಗಾಗಿ ಸೇತುವೆಗಳ ಮೇಲೆ ಹರಿಯುತ್ತಿದ್ದ ನೀರು ಕುಗ್ಗಿದ್ದು, ಜಮೀನುಗಳಲ್ಲಿ ನಿಂತಿದ್ದ ನೀರೂ ಇಂಗಿದೆ. ಇನ್ನು ಮನೆಗಳಿಗೆ ನುಗ್ಗಿದ್ದ ನೀರು ಕೂಡ ಖಾಲಿಯಾಗಿದ್ದು, ನೀರು ನುಗ್ಗಿದ್ದರಿಂದ ಮನೆ ಖಾಲಿಮಾಡಿ ಪರಿಹಾರ ಕೇಂದ್ರಗಳು, ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದ ಜನರು ನಿಧಾನಕ್ಕೆ ತಮ್ಮ ಮನೆಗಳತ್ತ ಬಂದು ಮನೆಯೊಳಗೆ ನಿಂತಿರುವ ನೀರು, ಕೊಳಚೆಯನ್ನು ತೆರವುಗೊಳಿಸಿ ಮನೆಯನ್ನು ಸ್ವತ್ಛಗೊಳಿಸಿಕೊಳ್ಳತೊಡಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2,013 ಮನೆಗಳು ಹಾನಿಯಾಗಿವೆ.
Related Articles
Advertisement
ಹುಣಸೂರು: ಹುಣಸೂರು ತಾಲೂಕಿನ ಹನಗೋಡು-ಬಿಲ್ಲೇನಹೊಸಹಳ್ಳಿ ರಸ್ತೆ, ಅಬ್ಬೂರು, ನಿಲವಾಗಿಲು, ಶಿಂಡೇನಹಳ್ಳಿ ಗ್ರಾಮಗಳ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಹುಣಸೂರು-ಹನಗೋಡು ರಸ್ತೆ ಸಂಚಾರ ಇನ್ನೂ ಬಂದ್ ಮಾಡಲಾಗಿದ್ದು, ಹೆಮ್ಮಿಗೆ ಗ್ರಾಮದ ಮೂಲಕ ಬದಲಿ ಮಾರ್ಗದಲ್ಲಿ ಹನಗೋಡು ಗ್ರಾಮಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಹನಗೋಡು-ಕಿರಂಗೂರು ಸೇತುವೆ ಮುಳುಗಡೆಯಾಗಿರುವುದರಿಂದ ಈ ರಸ್ತೆಯನ್ನು ಮುಚ್ಚಲಾಗಿದ್ದು, ಪಕ್ಕದ ರಸ್ತೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ತಾಲೂಕಿನಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲೂಕಿನ ಮೈಸೂರು-ಮಡಿಕೇರಿ ಮುಖ್ಯ ರಸ್ತೆ, ಆವರ್ತಿ, ಕೊಪ್ಪ, ಮುತ್ತಿನ ಮುಳಸೋಗೆ (ದಿಂಡಗಾಡು) ಹಾಗೂ ಬೆಟ್ಟದ ಪುರ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಕಣಗಾಲ್-ಪಿರಿಯಾಪಟ್ಟಣ ರಸ್ತೆ ಬದಲಿಗೆ ಸೂಳೆಕೋಟೆ-ಹೊನ್ನಾಪುರ ರಸ್ತೆಯಲ್ಲಿ ಬದಲಿ ಮಾರ್ಗ ಕಲ್ಪಿಸಲಾಗಿದೆ. ಕೊಪ್ಪ-ಗೋಲ್ಡನ್ ಟೆಂಪಲ್ ರಸ್ತೆಯಲ್ಲಿ ನೀರು ಹೆಚ್ಚಾಗಿದ್ದು, ಚಿಕ್ಕ ಹೊಸೂರು ರಸ್ತೆಯಲ್ಲಿ ಬದಲಿ ಮಾರ್ಗ ಕಲ್ಪಿಸಲಾಗಿದೆ.
ಸರಗೂರು: ಸರಗೂರು ತಾಲೂಕಿನಲ್ಲಿ ಜಲಾವೃತಗೊಂಡಿದ್ದ ಎಲ್ಲ ಸೇತುವೆಗಳಲ್ಲೂ ನೀರು ಕಡಿಮೆಯಾಗಿದ್ದು, ಮಂಗಳವಾರ ಬೆಳಗ್ಗೆಯಿಂದ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮೈಸೂರು ತಾಲೂಕಿನ ಕುಪ್ಪೇಗಾಲ ಗ್ರಾಮದ ಸೇತುವೆ ಬಳಿಯಿರುವ ಕೋಳಿಫಾರಂಗೆ ನೀರು ನುಗ್ಗುವ ಸಾಧ್ಯತೆ ಇರುವುದರಿಂದ ಕೋಳಿಫಾರಂನ್ನು ಸ್ಥಳಾಂತರಿಸಲಾಗಿದೆ.
ತಿ.ನರಸೀಪುರ: ತಿ.ನರಸೀಪುರ ತಾಲೂಕಿನಲ್ಲಿ ಜಲಾವೃತಗೊಂಡಿದ್ದ ಹೆಮ್ಮಿಗೆ ಸೇತುವೆಯಲ್ಲಿ ನೀರು ತೆರವಾಗಿದ್ದರಿಂದ ಸಂಚಾರ ಪುನಾರಂಭಗೊಂಡಿದೆ. ಮುಖ್ಯ ರಸ್ತೆಯ ಸೇತುವೆಯ ಬಳಿ ಅಗಸ್ತೇಶ್ವರ ದೇವಸ್ಥಾನದವರೆಗೆ ಬಂದಿದ್ದ ನೀರು ಈಗ ಕಡಿಮೆಯಾಗಿದೆ. ತಾಲೂಕಿನ ಕೆಂಡನಕೊಪ್ಪಲು ರಸ್ತೆಯೂ ಸಂಚಾರಕ್ಕೆ ಮುಕ್ತವಾಗಿದೆ.
ಮನೆಗಳಿಗೆ ನುಗ್ಗಿದ್ದ ನೀರು ಇಳಿಕೆ: ಕಪಿಲಾ ನದಿ ಪ್ರವಾಹದಿಂದ ನಂಜನಗೂಡು ಪಟ್ಟಣದ ತೋಪಿನ ಬೀದಿ, ಹಳ್ಳದಕೇರಿ, ಗೌರಿಘಟ್ಟ ಸೇರಿದಂತೆ ನದಿ ಪಾತ್ರದ ತಗ್ಗುಪ್ರದೇಶದ ಹಲವು ಬಡಾವಣೆಗಳ ಮನೆಗಳಿಗೆ ನುಗ್ಗಿದ್ದ ನೀರು ಕಡಿಮೆಯಾಗಿದೆ. ಪಿರಿಯಾಪಟ್ಟಣ ತಾಲೂಕು ಕೊಪ್ಪ ಗ್ರಾಮದ ಮುಸ್ಲಿಂ ಬ್ಲಾಕ್ ಹಾಗೂ ಬಿ.ಎಂ.ರಸ್ತೆ ಆಸುಪಾಸಿನ 45 ಮನೆಗಳು ಹಾಗೂ ಹಲವು ಅಂಗಡಿ ಮಳಿಗೆಗಳು ಇನ್ನೂ ಜಲಾವೃತವಾಗಿಯೇ ಇವೆ.
ಮೈಸೂರು ತಾಲೂಕಿನ ಯಡಕೊಳ ಗ್ರಾಮದ ಬಳಿ ನೀರು ನುಗ್ಗುವ ಸಂಭವಿದ್ದುದರಿಂದ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು, ಯಾವುದೇ ಅಪಾಯ ಎದುರಾಗದ್ದರಿಂದ ಅವರು ತಮ್ಮ ಮನೆಗಳಿಗೆ ಮರಳಿದ್ದಾರೆ. ತಿ.ನರಸೀಪುರ ಪಟ್ಟಣದ ಅಗಸ್ತೇಶ್ವರ ದೇವಸ್ಥಾನ ಹಿಂಭಾಗದ 12 ಮನೆಗಳಿಗೆ ಒಳ ಚರಂಡಿ ನೀರು ನುಗ್ಗಿರುವುದರಿಂದ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಕೆ.ಆರ್.ನಗರ ತಾಲೂಕಿನ ಹನಸೋಗೆ ಗ್ರಾಮದ ಬಳಿ ಮೂರು ಮನೆಗಳ ಸಮೀಪಕ್ಕೆ ಕಾವೇರಿ ನೀರು ನುಗ್ಗಿರುವುದರಿಂದ ಅಲ್ಲಿನ ನಿವಾಸಿಗಳು ಮನೆ ಖಾಲಿ ಮಾಡಿ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ.
ತಾಲೂಕು- ಮನೆಹಾನಿನಂಜನಗೂಡು 1,132
ಎಚ್.ಡಿ.ಕೋಟೆ 306
ಹುಣಸೂರು 192
ಪಿರಿಯಾಪಟ್ಟಣ 47
ಸರಗೂರು 322
ತಿ.ನರಸೀಪುರ 5
ಕೆ.ಆರ್.ನಗರ 9