Advertisement

ಮಾಸಾಂತ್ಯ ಸೋಂಕು ಇಳಿಕೆ? ರಾಜ್ಯದಲ್ಲಿ ಜ. 25ರ ವೇಳೆ ಪ್ರಕರಣ ಇಳಿಮುಖ ಸಾಧ್ಯತೆ

08:32 AM Jan 18, 2022 | Team Udayavani |

ಬೆಂಗಳೂರು: ಯಾವುದೇ ಕಾರಣಕ್ಕೂ ಲಾಕ್‌ಡೌನ್‌ ಇಲ್ಲ, ಸದ್ಯ ಈಗಿರುವ ನಿರ್ಬಂಧ ಹಿಂದಕ್ಕೆ ಪಡೆಯುವುದಿಲ್ಲ. ಇನ್ನೂ ನಾಲ್ಕೈದು ದಿನ ಪರಿಸ್ಥಿತಿ ಗಮನಿಸಿ ವೀಕೆಂಡ್‌ ಕರ್ಫ್ಯೂ ಹಿಂಪಡೆಯುವ ಬಗ್ಗೆ ತೀರ್ಮಾನ ಮಾಡೋಣ, ಐಸಿಎಂಆರ್‌ ನಿಯಮದಂತೆ ಕೊರೊನಾ ಪರೀಕ್ಷೆ ನಡೆಸೋಣ..

Advertisement

ಇವು ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವರು, ಹಿರಿಯ ಅಧಿಕಾರಿಗಳ ಸಭೆಯಲ್ಲಿ ಚರ್ಚೆಯಾದ ವಿಷಯಗಳು. ಸೋಮವಾರ ಹೊರತುಪಡಿಸಿದರೆ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಜ. 25ರ ವೇಳೆಗೆ ಸೋಂಕು ಉಚ್ಛಾ†ಯಕ್ಕೆ ಹೋಗಿ ಅನಂತರ ಇಳಿಕೆಯಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಇದಾದ ಬಳಿಕ ಈಗಿರುವ ನಿರ್ಬಂಧಗಳನ್ನು ಸಡಿಲಗೊಳಿಸುವ ಬಗ್ಗೆ ನಿರ್ಧಾರ ಮಾಡಬಹುದು ಎಂಬ ನಿರ್ಧಾರಕ್ಕೆ ಬರಲಾಗಿದೆ.

ಶುಕ್ರವಾರ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಗುರುವಾರದ ವರೆಗಿನ ಪ್ರಕರಣಗಳನ್ನು ಗಮನಿಸಿ, ಕೆಲವು ನಿಯಮಗಳನ್ನು ಸಡಿಲಗೊಳಿಸುವ ಬಗ್ಗೆ ಚರ್ಚೆಯಾಗಿದೆ. ಆದರೆ ಲಾಕ್‌ಡೌನ್‌ ಅಥವಾ ಕಠಿನ ನಿಯಮಗಳ ಜಾರಿ ಬೇಡ ಎಂಬ ಸಲಹೆ ಕೇಳಿಬಂದಿದೆ. ಹೀಗಾಗಿ ಈಗಿರುವ ನಿಯಮ ಮುಂದುವರಿಸಲು ನಿರ್ಧರಿಸಲಾಗಿದೆ. ಶುಕ್ರವಾರದ ಸಭೆಯಲ್ಲಿ ಬಹುತೇಕ ಪ್ರಸ್ತುತ ಜಾರಿಯಲ್ಲಿರುವ ವ್ಯವಸ್ಥೆಗಳನ್ನು ಜ. 31ರ ವರೆಗೆ ಮುಂದುವರಿಸಿ ಅನಂತರ ಸಡಿಲಗೊಳಿಸಬಹುದು. ಇಲ್ಲವೇ ಪ್ರಕರಣಗಳು ಜ. 25ರ ಅನಂತರ ತೀವ್ರ ಇಳಿಮುಖವಾದರೆ ಜ. 31ಕ್ಕೆ ಮುನ್ನವೇ ವಾರಾಂತ್ಯ ಕರ್ಫ್ಯೂ ವಾಪಸ್‌ ಪಡೆಯುವ ಬಗ್ಗೆ ತೀರ್ಮಾನ ಕೈಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

ಸಭೆಯ ನಿರ್ಧಾರಗಳು

01. ಬೆಂಗಳೂರಿನಲ್ಲಿ ಒಪಿಡಿಗಳಿಗೆ ಹೆಚ್ಚಿನ ಗಮನ ಕೊಡಲು, ಹೆಚ್ಚು ಸಿಬಂದಿ ನಿಯೋಜಿಸಲು ಸೂಚನೆ

Advertisement

02. ಸಾರ್ವಜನಿಕರು ಟ್ರಯಾಜಿಂಗ್‌ಗೆದಾಖಲಾಗುವುದರ ಮೇಲೆ ನಿಯಂತ್ರಣಕ್ಕೆ ಸಿಎಂ ಸಲಹೆ

03. ಸ್ವಯಂಸೇವಾ ಸಂಸ್ಥೆಗಳ ಮೂಲಕ ಜನರ ನಕಾರಾತ್ಮಕ ಮನೋಭಾವ ತೊಡೆದು ಹಾಕಲು ಸೂಚನೆ

04. ಸೋಂಕುಪೀಡಿತ ಮಕ್ಕಳ ಕುರಿತು, ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು.

05. ಆಮ್ಲಜನಕ ಘಟಕಗಳನ್ನು ಸಜ್ಜುಗೊಳಿಸಿ, ಸಿಬಂದಿ, ಇಂಧನ ಇತ್ಯಾದಿ ಸಿದ್ಧವಿರಿಸಿಕೊಳ್ಳಬೇಕು.

06. ಆಸ್ಪತ್ರೆಗಳಲ್ಲಿ ಜನರೇಟರ್‌ಗಳ ವ್ಯವಸ್ಥೆ ಸಿದ್ಧಪಡಿಸಲು ಸೂಚನೆ

07. ಮಕ್ಕಳು,60 ವರ್ಷ ಮೇಲ್ಪಟ್ಟವರ ಕುರಿತು ಹೆಚ್ಚಿನ ನಿಗಾ ಇರಿಸಬೇಕು.

08. ಲಸಿಕೆ ಅಭಿಯಾನ ತ್ವರಿತವಾಗಿ ಪೂರ್ಣಗೊಳಿಸಬೇಕು. ಸಕಾಲದಲ್ಲಿ  ಔಷಧ ಪೂರೈಸಿ.

09. 2ನೇ ಡೋಸ್‌ ಲಸಿಕೆ ಪಡೆದವರ ಸಂಖ್ಯೆ ಕಡಿಮೆ ಇರುವ ಜಿಲ್ಲೆಗಳ ಡಿ.ಸಿ., ಸಿ.ಇ.ಒ.ಗಳ ಜತೆ ವೀಡಿಯೋ

ಸಂವಾದಕ್ಕೆ ನಿರ್ಧಾರ

10. 15ರಿಂದ 18 ವರ್ಷ ವಯೋಮಾನದವರಿಗೆ ಲಸಿಕೆ ಅಭಿಯಾನವನ್ನು ಚುರುಕುಗೊಳಿಸಲು ಸೂಚನೆ.

24 ಜಿಲ್ಲೆಗಳಲ್ಲಿ  ಹೆಚ್ಚು ಪಾಸಿಟಿವಿಟಿ
ಕಳೆದ ವಾರಕ್ಕೆ ಹೋಲಿಸಿದರೆ ಸೋಮವಾರ ರಾಜ್ಯದಲ್ಲಿ ಸೋಂಕಿನ ದರ ಕಡಿಮೆಯಾಗಿದೆ. ಸೋಮವಾರ ಶೇ. 12.45ರಷ್ಟು ಪಾಸಿಟಿವಿಟಿ ದರ ಕಂಡುಬಂದಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ತುಸು ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಅತೀ ಹೆಚ್ಚು ಶೇ. 20.66, ಬೆಂ.ಗ್ರಾಮಾಂತರದಲ್ಲಿ ಶೇ. 18.52, ಮಂಡ್ಯದಲ್ಲಿ ಶೇ. 17.91, ತುಮಕೂರಿನಲ್ಲಿ ಶೇ. 17.57, ಮೈಸೂರಿನಲ್ಲಿ ಶೇ. 15.85ರಷ್ಟು ಪಾಸಿಟಿವಿಟಿ ಕಂಡು ಬಂದಿದೆ. ಒಟ್ಟು 11 ಜಿಲ್ಲೆಗಳಲ್ಲಿ ಶೇ. 10ಕ್ಕಿಂತ ಹೆಚ್ಚು, 14 ಜಿಲ್ಲೆಗಳಲ್ಲಿ ಶೇ. 5ಕ್ಕಿಂತ ಹೆಚ್ಚು ಮತ್ತು 5 ಜಿಲ್ಲೆಗಳಲ್ಲಿ ಶೇ. 1ರಿಂದ ಶೇ. 5ರ ವರೆಗೆ ಪಾಸಿಟಿವಿಟಿ ಇದೆ. 24 ಜಿಲ್ಲೆಗಳಲ್ಲಿ ಶೇ. 5ಕ್ಕಿಂತ ಹೆಚ್ಚು ಪಾಸಿಟಿವಿಟಿ ಇದೆ.

ಮಕ್ಕಳಲ್ಲಿ ಸೋಂಕಿನ ತೀವ್ರತೆ ಕಡಿಮೆ ಇರುವುದು ಸಮಾಧಾನಕರ ವಿಷಯ. ಐಸಿಎಂಆರ್‌ ಮಾರ್ಗದರ್ಶನದಲ್ಲಿ ಪರೀಕ್ಷೆ ಮುಂದುವರೆಸಲಾಗುವುದು. ವಾರಾಂತ್ಯ ಕರ್ಫ್ಯೂ ಕುರಿತು ಹೋಟೆಲ್‌ ಉದ್ಯಮದ ವಿರೋಧದ ಬಗ್ಗೆ ಶುಕ್ರವಾರದ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
-ಡಾ| ಸುಧಾಕರ್‌, ಆರೋಗ್ಯ ಸಚಿವ

ರಾಜ್ಯದಲ್ಲಿ ಲಾಕ್‌ಡೌನ್‌ ಅಥವಾ ವಾರಾಂತ್ಯ ಕರ್ಫ್ಯೂ ವಿಧಿಸುವುದು ಸರಕಾರಕ್ಕೆ ಇಷ್ಟವಿಲ್ಲ. ಹಾಗೆಯೇ ಯಾರಿಗೋ ನಷ್ಟ ಆಗುತ್ತದೆ ಎಂದು ನಿಯಮ ಬದಲಿಸಲು ಆಗುವುದಿಲ್ಲ. ಲಾಕ್‌ಡೌನ್‌ ಮಾಡುವುದಿಲ್ಲ, ಪ್ರಸ್ತುತ ಇರುವ ನಿಯಮ ಪಾಲಿಸಿದರೆ ಸಾಕು. ಇನ್ನಾವುದೇ ಕಠಿನ ನಿಯಮ ಜಾರಿಗೊಳಿಸುವುದಿಲ್ಲ.
-ಆರ್‌. ಅಶೋಕ್‌, ಕಂದಾಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next