Advertisement

ಕಡಿಮೆಯಾದ ಪಟಾಕಿ ಬಳಕೆ; ಗೊಂದಲವೂ ಅಧಿಕವಿತ್ತು

11:34 PM Nov 17, 2020 | mahesh |

ಕೋವಿಡ್‌ ಸಂಕಷ್ಟದ ನಡುವೆಯೇ ದೇಶವು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದೆ. ಈ ಬಾರಿ ಹಬ್ಬ ಸಮೀಪಿಸುತ್ತಿದ್ದಂತೆಯೇ, ರಾಜ್ಯ ಸರಕಾರವು ಮುನ್ನೆಚ್ಚರಿಕೆಯ ದೃಷ್ಟಿಯಿಂದ ಹಸುರು ಪಟಾಕಿಗಳ ಬಳಕೆಗೆ ಅನುಮತಿ- ಉತ್ತೇಜನ ನೀಡಿ, ಉಳಿದ ರೀತಿಯ ಪಟಾಕಿಗಳ ಮೇಲೆ ನಿಷೇಧ ಹೇರಿತು. ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಬಾರದು ಹಾಗೂ ಮಾಲಿನ್ಯ ನಿಯಂತ್ರಣಕ್ಕಾಗಿ ಅನೇಕ ರಾಜ್ಯಗಳೂ ಕೇವಲ ಹಸುರು ಪಟಾಕಿಯ ಬಳಕೆಯನ್ನೇ ಕಡ್ಡಾಯ ಮಾಡಿದವು.

Advertisement

ಗಮನಾರ್ಹ ಸಂಗತಿಯೆಂದರೆ, ಈ ಬಾರಿ ಪಟಾಕಿಯ ಬಳಕೆ ರಾಜ್ಯಾದ್ಯಂತ ಬಹಳ ಕಡಿಮೆ ಮಟ್ಟದಲ್ಲಿ ಆಯಿತು ಎನ್ನುವುದನ್ನು, ಮಾಲಿನ್ಯ ಮಾಪನವೇ ಸಾರುತ್ತಿದೆ ಹಾಗೆಂದು ಇದನ್ನು ಹಸುರು ಪಟಾಕಿಯ ಗೆಲುವು ಎನ್ನಬೇಕೇ ಎಂದು ಯೋಚಿಸದರೆ ಸ್ಪಷ್ಟತೆ ಮೂಡುವುದಿಲ್ಲ. ಏಕೆಂದರೆ, ಕೋವಿಡ್‌ನ‌ ಕಾರಣದಿಂದಾಗಿ ಜನರೇ ಈ ಬಾರಿ ಜಾಗೃತಿ ವಹಿಸಿ ಪಟಾಕಿಗಳಿಂದ ಆದಷ್ಟು ದೂರವಿದ್ದದ್ದು, ಜತೆಗೆ ಎಡಬಿಡದೇ ಸುರಿದ ಮಳೆ ಹಾಗೂ ಮಾರಾಟ ಮಳಿಗೆಗಳ ಸಂಖ್ಯೆಯೂ ಅರ್ಧಕ್ಕರ್ಧ ಇಳಿದದ್ದು ಕಾರಣ ಆಗಿರಬಹುದು.

ಹಸುರು ಪಟಾಕಿಯ ವಿಚಾರದಲ್ಲಿ ಸರಕಾರ ತೆಗೆದುಕೊಂಡ ನಿರ್ಣಯಗಳು ಜನರಲ್ಲಿ ಹಾಗೂ ವ್ಯಾಪಾರಸ್ಥರಲ್ಲಿ ಗೊಂದಲ ಹುಟ್ಟುಹಾಕಿದ್ದು ಸುಳ್ಳಲ್ಲ. ನವೆಂಬರ್‌ 6 ಮತ್ತು ನವೆಂಬರ್‌ 10ರಂದು ಆದೇಶ ಹೊರಡಿಸಿದ್ದ ಸರಕಾರ ಹಸುರು ಪಟಾಕಿಗಳನ್ನು ಹೊರತುಪಡಿಸಿ, ಬೇರೆಲ್ಲಾ ಪಟಾಕಿಗಳಿಗೆ ಈ ಬಾರಿ ನಿಷೇಧ ಹೇರಿತ್ತು. ಆದರೆ ಹಸುರು ಪಟಾಕಿ ಅಂದರೇನು, ಅದನ್ನು ಸ್ಪಷ್ಟವಾಗಿ ಗುರುತಿಸುವುದು ಹೇಗೆ ಎಂದು ನಿಖರವಾಗಿ ಹೇಳುವಲ್ಲಿ ಅದು ಎಡವಿತು. ಇದೇ ಅಂಶವನ್ನೇ ಹೈಕೋರ್ಟ್‌ ಕೂಡ ಪ್ರಶ್ನೆ ಮಾಡಿತ್ತು.

ಸತ್ಯವೇನೆಂದರೆ, ಅನೇಕರಿಗೆ ಹಸುರು ಪಟಾಕಿಯ ಪ್ರಾಮುಖ್ಯವೇನು ಎನ್ನುವ ಸಂದೇಶವೇ ತಲುಪಿಲ್ಲ. ಅನೇಕರು ನಿಷೇಧಿತ ಪಟಾಕಿಯ ಜತೆಗೆ ಹೆಚ್ಚುವರಿಯಾಗಿ ಹಸಿರು ಪಟಾಕಿಯನ್ನೂ ಬಳಸಿದ ಉದಾಹರಣೆಗಳು ಸಾಕಷ್ಟಿವೆ. ಸರಕಾರ ಆದೇಶ ನೀಡುವುದಕ್ಕೂ ಮೊದಲೇ ಅನ್ಯ ಪಟಾಕಿಗಳನ್ನು ತರಿಸಿದ್ದ ವ್ಯಾಪಾರಸ್ಥರು ಸ್ಟಾಕ್‌ ಖಾಲಿ ಮಾಡಿಕೊಳ್ಳುವ ಸಲುವಾಗಿ ನಿಷೇಧಿತ ಪಟಾಕಿಗಳನ್ನೂ ಮಾರುತ್ತಿದ್ದದ್ದೂ ವರದಿಯಾಗಿದೆ. ಇದಕ್ಕೆ ಉದಾಹರಣೆಯೆಂದರೆ, ಬೆಂಗಳೂರೊಂದರಲ್ಲೇ 50ಕ್ಕೂ ಹೆಚ್ಚು ಜನರು ನಿಷೇಧಿತ ಪಟಾಕಿಗಳನ್ನು ಸಿಡಿಸಿ ಗಾಯಗೊಂಡಿರುವುದು. ರಾಜ್ಯದ ವಿವಿಧ ಭಾಗಗಳಲ್ಲೂ ಇಂಥ ಘಟನೆಗಳು ವರದಿಯಾಗಿವೆ. ಹಸುರು ಪಟಾಕಿಯ ಬಳಕೆಯನ್ನು ಕಡ್ಡಾಯಗೊಳಿಸುವ ವಿಚಾರದಲ್ಲಿ ಆರಂಭಿಕ ಸಮಯದಲ್ಲಿ ಗೊಂದಲ ಮೂಡುವಂತಾಗಿದ್ದು, ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೂ ಸಮಸ್ಯೆ ಉಂಟುಮಾಡಿತು. ಈ ಕಾರಣಕ್ಕಾಗಿಯೇ ಇಂಥ ವಿಚಾರದಲ್ಲಿ ಸಾಕಷ್ಟು ಮೊದಲೇ ಸ್ಪಷ್ಟ ನಿರ್ಣಯಕ್ಕೆ ಬರುವುದು ಮುಖ್ಯ. ಇನ್ನೊಂದು ತಿಂಗಳಲ್ಲಿ ನವವರ್ಷದ ಸಂಭ್ರಮಾಚರಣೆಗೆ ಯುವಜನತೆ ಮುಂದಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ಹಸುರುಪಟಾಕಿಯನ್ನು ಕಡ್ಡಾಯಗೊಳಿಸುವ ಉದ್ದೇಶವಿದ್ದರೆ, ಈ ವಿಚಾರದಲ್ಲಿ ಆದಷ್ಟು ಬೇಗನೇ ಘೋಷಣೆ ಮಾಡಲಿ.

Advertisement

Udayavani is now on Telegram. Click here to join our channel and stay updated with the latest news.

Next